ನಿನ್ನನ್ನು ಆಕಾಶದಾಚೆ ಹುಡುಕುವ ಅವಶ್ಯಕತೆ ಇಲ್ಲ: ಅಪ್ಪು ಹುಟ್ಟುಹಬ್ಬಕ್ಕೆ ಶಿವಣ್ಣನ ಭಾವುಕ ನುಡಿ

Untitled design 2026 03 17T131156.354

ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಜ್ ಕುಮಾರ್ ಅವರು ತಮ್ಮ ತಮ್ಮ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬದಂದು ಅತ್ಯಂತ ಭಾವುಕವಾದ ರೀತಿಯಲ್ಲಿ ಶುಭಾಶಯ ಕೋರಿದ್ದಾರೆ. ಪುನೀತ್ ಅವರ ನೆನಪುಗಳನ್ನು ಮೆಲುಕು ಹಾಕುತ್ತಾ, ಅವರು ಒಂದು ಕಾಲದಲ್ಲಿ ಪುನೀತ್ ಹಾಡಿದ್ದ ‘ಆಕಾಶದಾಚೆ ಎಲ್ಲೋ ದೇವರಿಲ್ಲವೋ’ ಎಂಬ ಹಾಡಿನ ಸಾಲಿನ ಮೂಲಕವೇ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ 51ನೇ ಹುಟ್ಟುಹಬ್ಬವನ್ನು ರಾಜ್ಯದಾದ್ಯಂತ ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದ್ದರು. ಈ ಸಂದರ್ಭದಲ್ಲಿ ಹಿರಿಯ ಸಹೋದರ ಶಿವರಾಜ್ ಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಪುನೀತ್ ಅವರ ಫೋಟೋವೊಂದನ್ನು ಹಂಚಿಕೊಂಡು, ಅತ್ಯಂತ ಭಾವುಕವಾದ ಪೋಸ್ಟ್ ಅನ್ನು ಬರೆದಿದ್ದಾರೆ.

ಒಂದು ಹಾಡಿನ ಸಾಲುಗಳನ್ನು ಉಲ್ಲೇಖಿಸಿ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. “ಆಕಾಶದಾಚೆ ಎಲ್ಲೋ ದೇವರಿಲ್ಲವೋ” ಎಂಬ ಸಾಲುಗಳನ್ನು ನೆನೆದು, ಆಗ ಅದು ಎಷ್ಟು ನಿಜ ಅನ್ನಿಸಿತ್ತೋ, ಈಗಲೂ ಅದೇ ಭಾವನೆ ಇದೆ ಎಂದು ಅವರು ಹೇಳಿದ್ದಾರೆ.

‘ಆಕಾಶದಾಚೆ ಎಲ್ಲೋ ದೇವರಿಲ್ಲವೋ’, ಇದು ಆಗ ಕೇಳಿದಾಗ ಎಷ್ಟು ನಿಜ ಅನ್ಸಿತ್ತು… ಈಗಲೂ ಹಾಗೇ ಇದೆ. ನಿನ್ನನ್ನು ಆಕಾಶದಾಚೆ ಹುಡುಕುವ ಅವಶ್ಯಕತೆ ಇಲ್ಲವೇ ಇಲ್ಲ.”ಎಂದು ಬರೆಯುವ ಈ ಮೂಲಕ ಪುನೀತ್ ಅವರೇ ತಮಗೆ ದೇವರಂತೆ ಎಂಬ ಭಾವನೆಯನ್ನು ಶಿವರಾಜ್ ಕುಮಾರ್ ವ್ಯಕ್ತಪಡಿಸಿದ್ದಾರೆ. ಅವರು ಇಂದು ದೈಹಿಕವಾಗಿ ಇಲ್ಲದಿದ್ದರೂ, ಅವರ ನೆನಪುಗಳು, ಅವರ ಕಾರ್ಯಗಳು ಮತ್ತು ಅವರ ಪ್ರೀತಿ ಎಲ್ಲೆಡೆ ಇದೆ..

ಮುಂದುವರೆದು ಶಿವರಾಜ್ ಕುಮಾರ್ ಅವರು, “ಇಡೀ ಕರ್ನಾಟಕದಲ್ಲಿ ಎಲ್ಲೇ ಹೋದರೂ ಜನ ನಿನ್ನನ್ನು ಪ್ರತಿ ದಿನ ಸಂಭ್ರಮಿಸುತ್ತಾರೆ. ನಿನ್ನ ಹುಟ್ಟು ಹಬ್ಬ ನಮ್ಮೆಲ್ಲರಿಗೂ ಹಬ್ಬ. ನಿನ್ನ ಹೆಸರು ಹೇಳಿದೊಡನೆ ಮೂಡುವ ನಗು, ನೀನು ಎಲ್ಲರಿಗೂ ಕೊಟ್ಟಿರುವ ಉಡುಗೊರೆ” ಎಂದು ಬರೆದಿದ್ದಾರೆ.

ಪುನೀತ್ ಅವರು ತಮ್ಮ ಜೀವಿತಾವಧಿಯಲ್ಲಿ ಎಷ್ಟು ಜನಪ್ರಿಯರಾಗಿದ್ದರು ಮತ್ತು ಇಂದಿಗೂ ಅವರ ಅಭಿಮಾನಿಗಳು ಅವರನ್ನು ಹೇಗೆ ನೆನಪಿಸಿಕೊಳ್ಳುತ್ತಾರೆ ಎಂಬುದಕ್ಕೆ ಈ ಮಾತುಗಳು ಸಾಕ್ಷಿಯಾಗಿವೆ..

ಅಪ್ಪು ಅಭಿಮಾನಿಗಳಿಗೆ ಶಿವಣ್ಣನಿಂದ ಸ್ಪೆಷಲ್ ಥ್ಯಾಂಕ್ಸ್

ಶಿವರಾಜ್ ಕುಮಾರ್ ಅವರು ಇದೇ ವೇಳೆ ಪುನೀತ್ ಅವರ ಅಭಿಮಾನಿಗಳಿಗೆ ಕೃತಜ್ಞತೆಯನ್ನೂ ಸಲ್ಲಿಸಿದ್ದಾರೆ. ಪ್ರತಿ ವರ್ಷ ಪುನೀತ್ ಅವರ ಹುಟ್ಟುಹಬ್ಬದಂದು ರಾಜ್ಯದಾದ್ಯಂತ ಅಭಿಮಾನಿಗಳು ನಡೆಸುವ ಸಮಾಜ ಸೇವೆಯ ಕಾರ್ಯಕ್ರಮಗಳು, ರಕ್ತದಾನ ಶಿಬಿರಗಳು, ಅನ್ನದಾನ ಕಾರ್ಯಕ್ರಮಗಳು ಪುನೀತ್ ಅವರ ಆದರ್ಶಗಳನ್ನು ಜೀವಂತವಾಗಿಡುತ್ತಿವೆ ಎಂದು ಶಿವಣ್ಣ ಹೇಳಿದ್ದಾರೆ.

ಡಾ. ರಾಜ್ ಕುಮಾರ್ ಮತ್ತು ಪಾರ್ವತಮ್ಮ ಅವರ ಮೂವರು ಪುತ್ರರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಶಿವರಾಜ್ ಕುಮಾರ್ ಅವರ ಈ ಭಾವುಕ ಪೋಸ್ಟ್ ಕನ್ನಡದ ಅಭಿಮಾನಿಗಳ ಹೃದಯವನ್ನು ತಟ್ಟಿದೆ. ಸಾವಿರಾರು ಅಭಿಮಾನಿಗಳು ಈ ಪೋಸ್ಟ್‌ಗೆ ಲೈಕ್ ಮತ್ತು ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

Exit mobile version