ಬಿಗ್ ಬಾಸ್ ಕನ್ನಡಕ್ಕೂ ನನಗು ಯಾವುದೇ ಸಂಭಂದ ಇಲ್ಲ: ಚಕ್ರವರ್ತಿ ಚಂದ್ರಚೂಡ್‌ ಪೋಸ್ಟ್ ವೈರಲ್

Untitled design (27)

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಆರಂಭಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಕೆಲವೇ ವಾರಗಳಲ್ಲಿ ಈ ಜನಪ್ರಿಯ ರಿಯಾಲಿಟಿ ಶೋ ತೆರೆಗೆ ಬರಲಿದೆ. ಕಲರ್ಸ್ ಕನ್ನಡ ಮತ್ತು ಬಿಗ್ ಬಾಸ್ ತಂಡವು ಈ ಬಾರಿಯೂ ಕಿಚ್ಚ ಸುದೀಪ್ ಅವರೇ ನಿರೂಪಕರಾಗಿ ಕಾರ್ಯಕ್ರಮವನ್ನು ಮುನ್ನಡೆಸಲಿದ್ದಾರೆ ಎಂದು ಈಗಾಗಲೇ ಘೋಷಿಸಿದೆ. ಈ ಸುದ್ದಿಯ ಬೆನ್ನಲ್ಲೇ, ಶೋನ ತಯಾರಿಗಳು ಭರದಿಂದ ಸಾಗುತ್ತಿವೆ. ಈಗಾಗಲೇ ಕೆಲವು ಸಂಭಾವಿತ ಸ್ಪರ್ಧಿಗಳ ಹೆಸರುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಈ ಸಂದರ್ಭದಲ್ಲಿ, ಬಿಗ್ ಬಾಸ್ ಕನ್ನಡದ ಮಾಜಿ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಅವರು ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಒಂದು ಪೋಸ್ಟ್ ಭಾರೀ ಚರ್ಚೆಗೆ ಕಾರಣವಾಗಿದೆ. ಪತ್ರಕರ್ತ, ನಟ, ಮತ್ತು ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಚಕ್ರವರ್ತಿ, ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಶೋನಲ್ಲಿ ತಮ್ಮ ಚುರುಕಾದ ವರ್ತನೆಯಿಂದ ಗಮನ ಸೆಳೆದಿದ್ದ ಅವರು, ಈಗ ಸೀಸನ್ 12ಕ್ಕೆ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ADVERTISEMENT
ADVERTISEMENT

ಚಕ್ರವರ್ತಿ ಚಂದ್ರಚೂಡ್ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ, “ಬಿಗ್ ಬಾಸ್ ಕನ್ನಡಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಸ್ಪರ್ಧಿಗಳಾಗಿ ಭಾಗವಹಿಸಲು ನನ್ನನ್ನು ಸಂಪರ್ಕಿಸಿದರೆ ಯಾವುದೇ ಪ್ರಯೋಜನವಿಲ್ಲ. ದಯವಿಟ್ಟು ಕಲರ್ಸ್ ಕನ್ನಡ ವಾಹಿನಿಯನ್ನು ಸಂಪರ್ಕಿಸಿ. ನನ್ನ ಮತ್ತು ನಿಮ್ಮ ಸಮಯ ತುಂಬಾ ಅಮೂಲ್ಯ” ಎಂದು ಬರೆದಿದ್ದಾರೆ. ಕಿಚ್ಚ ಸುದೀಪ್ ಅವರೊಂದಿಗಿನ ಆತ್ಮೀಯ ಸಂಬಂಧದ ಕಾರಣ, ಅನೇಕರು ಬಿಗ್ ಬಾಸ್‌ಗೆ ಸ್ಪರ್ಧಿಗಳಾಗಿ ಆಯ್ಕೆಯಾಗಲು ಚಕ್ರವರ್ತಿಯವರಿಗೆ ಕರೆ ಮಾಡುತ್ತಿದ್ದಾರೆ. ಇದರಿಂದ ಕಿರಿಕಿರಿಯಾದ ಪರಿಣಾಮ ಚಕ್ರವರ್ತಿ, ಈ ಪೋಸ್ಟ್ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಇದಕ್ಕೂ ಮುನ್ನ, ಬಿಗ್ ಬಾಸ್ ಕನ್ನಡದ ಮಾಜಿ ವಿಜೇತ ಪ್ರಥಮ್ ಕೂಡ ಇದೇ ರೀತಿಯ ಸಂದೇಶವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಅವರಿಗೂ ಸಾಕಷ್ಟು ಜನರು ಕರೆ ಮಾಡಿ, ಬಿಗ್ ಬಾಸ್‌ಗೆ ಸ್ಪರ್ಧಿಗಳಾಗಿ ಆಯ್ಕೆಯಾಗಲು ಸಹಾಯ ಮಾಡುವಂತೆ ಕೇಳಿಕೊಂಡಿದ್ದರು. ಇದರಿಂದ ಬೇಸತ್ತ ಪ್ರಥಮ್, “ಬಿಗ್ ಬಾಸ್ ಪ್ರೆಸ್‌ ಮೀಟ್‌ ಆದ ನಂತರ ನೂರಾರು ಜನ ನಮ್ಮ ಆಫೀಸ್‌ಗೆ ಮತ್ತು ನನ್ನ ಆಪ್ತರ ಮೂಲಕ ಕಾಲ್ ಮಾಡುತ್ತಿದ್ದಾರೆ. ಯಾವ ಇನ್‌ಫ್ಲುಯೆನ್ಸ್ ಕೂಡ ಕೆಲಸ ಮಾಡಲ್ಲ. ಕಲರ್ಸ್ ಕನ್ನಡದ ಹೆಡ್ ಪ್ರಶಾಂತ್ ನಾಯಕ್ ಸರ್ ಮತ್ತು ಪ್ರಕಾಶ್ ಸರ್ ಅವರ ತಂಡವೇ ಸ್ಪರ್ಧಿಗಳನ್ನು ಆಯ್ಕೆ ಮಾಡುತ್ತದೆ” ಎಂದು ಟ್ವೀಟ್ ಮಾಡಿದ್ದರು.

ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆಯು ಸಂಪೂರ್ಣವಾಗಿ ಕಲರ್ಸ್ ಕನ್ನಡ ತಂಡದ ನಿಯಂತ್ರಣದಲ್ಲಿದೆ ಎಂದು ಈ ಎರಡೂ ಪೋಸ್ಟ್‌ಗಳು ಸ್ಪಷ್ಟಪಡಿಸಿವೆ. ಯಾವುದೇ ಮಧ್ಯವರ್ತಿಗಳ ಮೂಲಕ ಆಯ್ಕೆಯಾಗುವ ಸಾಧ್ಯತೆ ಇಲ್ಲ ಎಂದು ಚಕ್ರವರ್ತಿ ಮತ್ತು ಪ್ರಥಮ್ ಎಚ್ಚರಿಕೆ ನೀಡಿದ್ದಾರೆ.

ಒಟ್ಟಾರೆ, ಬಿಗ್ ಬಾಸ್ ಕನ್ನಡ 12ರ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ, ಮತ್ತು ಕಿಚ್ಚ ಸುದೀಪ್‌ ಆಕರ್ಷಕ ನಿರೂಪಣೆಯೊಂದಿಗೆ ಈ ಸೀಸನ್ ಕೂಡ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲಿದೆ ಎಂಬ ನಿರೀಕ್ಷೆಯಿದೆ.

Exit mobile version