‘ಮಹಾನಟಿ’ ರಿಯಾಲಿಟಿ ಶೋನ ಮೊದಲ ಸೀಸನ್‌ನಿಂದ ಚಿತ್ರದುರ್ಗದ ಗಗನಾ ಎಂಬ ಯುವತಿ ಎಲ್ಲರ ಮನಗೆದ್ದಿದ್ದಾರೆ. ಈಗ ಜೀ ಕನ್ನಡದ ‘ಭರ್ಜರಿ ಬ್ಯಾಚುಲರ್ಸ್’ ಶೋನಲ್ಲಿ ಡ್ರೋನ್ ಪ್ರತಾಪ್ ಗೆ ಜೋಡಿಯಾಗಿ ಮಿಂಚುತ್ತಿದ್ದಾರೆ. ಈ ಜೋಡಿ ಈಗಾಗಲೇ ಶೋನಲ್ಲಿ ಭಾರಿ ಸದ್ದು ಮಾಡುತ್ತಿದೆ. ರಿಯಾಲಿಟಿ ಶೋನ ವೇದಿಕೆಯಲ್ಲಿ ಸ್ಪರ್ಧಿಗಳ ಜೋಡಿಗಳು ರೊಮಾನ್ಸ್, ಪ್ರಪೋಸಲ್, ಮದುವೆಯಂತಹ ಹಂತಗಳನ್ನು ರಿಯಲ್ ಪ್ರೇಮಿಗಳನ್ನೂ ಮೀರಿಸುವಂತೆ ತೋರಿಸುತ್ತಿದ್ದಾರೆ. ಈ ಶೋನಲ್ಲಿ ಈಗಾಗಲೇ ಹಲವು ರೌಂಡ್‌ಗಳು ಮುಗಿದಿದ್ದು, ಪ್ರಪೋಸಲ್‌ನಿಂದ ಹಿಡಿದು ಮದುವೆ, ಮಕ್ಕಳವರೆಗೂ ಚರ್ಚೆಗಳು ತಲುಪಿವೆ.
ಇತ್ತೀಚಿನ ಎಪಿಸೋಡ್‌ನಲ್ಲಿ ವೀಕ್ಷಕರು ಸ್ಪರ್ಧಿಗಳಿಗೆ ಕೆಲವು ಕುತೂಹಲಕಾರಿ ಪ್ರಶ್ನೆಗಳನ್ನು ಕೇಳಿದ್ದಾರೆ. ಈ ವೇಳೆ ಒಬ್ಬ ಮಹಿಳೆ ಡ್ರೋನ್ ಪ್ರತಾಪ್‌ಗೆ, “ನಿಮ್ಮ ಮದುವೆಯಾಗುವ ಹುಡುಗಿ ಮಕ್ಕಳು ಬೇಡ ಎಂದರೆ ಏನು ಮಾಡುತ್ತೀರಿ?” ಎಂದು ಕೇಳಿದರು. ಇದಕ್ಕೆ ಡ್ರೋನ್, “ನನಗೆ ಮಕ್ಕಳು ಬೇಕೇ ಬೇಕು. ಈ ವಿಷಯವನ್ನು ಮದುವೆಗೂ ಮುನ್ನವೇ ಮಾತನಾಡಿಕೊಂಡು, ಒಬ್ಬರ ಮನಸ್ಸಿನ ಆಲೋಚನೆ ತಿಳಿದುಕೊಳ್ಳುತ್ತೇನೆ,” ಎಂದು ಉತ್ತರಿಸಿದರು.
ಆಗ ರವಿಚಂದ್ರನ್ ಅವರು, “ಪ್ರಶ್ನೆಯ ಉದ್ದೇಶ ಮದುವೆಯಾದ ನಂತರ ಮಕ್ಕಳು ಬೇಡ ಎಂದರೆ ಏನು ಮಾಡುತ್ತೀರಿ? ಮದುವೆಗೆ ಮುನ್ನ ತೀರ್ಮಾನ ತೆಗೆದುಕೊಂಡರೆ ಈ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಒಂದು ವೇಳೆ ಮದುವೆಯಾದ ನಂತರ ಮಗು ಆಗದೇ ಇದ್ದರೆ ಅಥವಾ ಮಗು ಬೇಡ ಎಂದರೆ ಏನು ಮಾಡುತ್ತೀರಿ?” ಎಂದು ಪ್ರಶ್ನಿಸಿದರು. ಇದಕ್ಕೆ ಡ್ರೋನ್ ಖಡಕ್ ಆಗಿ, “ಮಗು ಆಗುವ ಸ್ಥಿತಿ ಇದ್ದರೂ ಬೇಡ ಎಂದರೆ ಡಿವೋರ್ಸ್ ಕೊಡುತ್ತೇನೆ,” ಎಂದು ಘೋಷಿಸಿದರು. ಈ ಮಾತಿಗೆ ಗಗನಾ ಒಂದು ಕ್ಷಣ ದಿಗ್ಭ್ರಮೆಗೊಂಡರು.
ಡ್ರೋನ್‌ನ ಈ ಹೇಳಿಕೆಗೆ ನಟಿ ರಚಿತಾ ರಾಮ್ ಕೂಡ ತಲೆಯಾಡಿಸಿದರು. ಆಗ ಆ್ಯಂಕರ್ ನಿರಂಜನ್, ಗಗನಾ ಅವರ ಬಳಿ, “ಡ್ರೋನ್‌ನ ಈ ಮಾತಿಗೆ ನೀವು ಒಪ್ಪುತ್ತೀರಾ?” ಎಂದು ಕೇಳಿದಾಗ, ಗಗನಾ, “ಡ್ರೋನ್ ಹೇಳಿದ್ದು ಸರಿಯಿದೆ. ಮಗು ಆದ ಮೇಲೆ ಇಬ್ಬರೂ ಜವಾಬ್ದಾರಿಯಿಂದ ಕಾಳಜಿ ವಹಿಸಬೇಕು. ಒಂದು ವೇಳೆ ತಾಯಿಯೇ ಮಗುವನ್ನು ಬೇಡ ಎಂದರೆ ಕಷ್ಟವಾಗುತ್ತದೆ. ಹೀಗಾಗಿ ಡ್ರೋನ್‌ನ ಮಾತು ಸರಿಯಿದೆ,” ಎಂದು ಬೆಂಬಲಿಸಿದರು. ಇದಕ್ಕೆ ನಿರಂಜನ್ ತಮಾಷೆಯಾಗಿ, “ಹಾಗಾದರೆ ಡಿವೋರ್ಸ್ ಆಗುವುದಕ್ಕೆ ಕಾಯುತ್ತಿದ್ದೀರಾ?” ಎಂದು ಗಗನಾರ ಕಾಲೆಳೆದರು.