ದೇಶದ ಬೇರೆ ಬೇರೆ ರಾಜ್ಯಗಳಿಂದ ಬೆಂಗಳೂರಿಗೆ ವಲಸೆ ಬರೋರ ಸಂಖ್ಯೆ ಗಣನೀಯವಾಗಿ ಹೆಚ್ಚಾಗ್ತಿದೆ. ಅದರ ಪ್ರತಿಫಲವಾಗಿ ಏನೆಲ್ಲಾ ಅನಾಚಾರಗಳು ಆಗ್ತಿವೆ ಅನ್ನೋದು ಕೂಡ ಗೊತ್ತೇಯಿದೆ. ಇಲ್ಲಿ ಬದುಕು ಕಟ್ಟಿಕೊಳ್ಳಲು ಬಂದು, ಉಪ್ಪು ತಿಂದ ಮನೆಗೆ ದ್ರೋಹ ಬಗೆಯೋರ ನಡುವೆ 60ರ ದಶಕದ ರೆಟ್ರೋ ಸಾಂಗ್‌ವೊಂದು ನಮ್ಮ ಕನ್ನಡಿಗರ ದಿಲ್ ದೋಚುತ್ತಿದೆ.
ಮಾರ್ಕೆಟ್ಟು ಹೂವು ತಲೆ ತುಂಬಾ.. ಚಿಕ್ಕಪೇಟೆ ನೈಲಾನು ಮೈ ತುಂಬಾ. ಬಳೆ ಪೇಟೆ ಪೌಡರ್ ಮುಖ ತುಂಬಾ.. ನಿನ್ನ ರೂಪ ನಿಂತಿದೆ ಕಣ್ತುಂಬಾ.. ಈ ಹಾಡು 1965ರಲ್ಲಿ ತೆರೆಕಂಡ ಮನೆ ಕಟ್ಟಿ ನೋಡು ಸಿನಿಮಾದ ಸಾಂಗ್. ಡಿಜಿಟಲ್ ರೂಪ ಪಡೆಯೋಕೂ ಮುನ್ನ ಕಪ್ಪು- ಬಿಳುಪು ಕಾಲದಲ್ಲಿ ಅಂದ್ರೆ 60ರ ದಶಕದಲ್ಲಿ ತಯಾರಾದ ಈ ಚಿತ್ರ 60 ವರ್ಷಗಳ ಹಿಂದೆ ನಮ್ಮ ಬೆಂಗಳೂರು ಹೇಗಿತ್ತು ಅನ್ನೋದನ್ನ ಬಹಳ ಸೊಗಸಾಗಿ ಹೇಳಿದೆ.
ರೆಟ್ರೋ ಸೊಗಡು..ಇದು 60ವರ್ಷದ ಬೆಂಗಳೂರು ಸೊಬಗು
ಬೆಂಗಳೂರನ್ನ ಆಡಿಕೊಳ್ಳೋರ ನಡುವೆ ರೆಟ್ರೋ ಸಾಂಗ್ ಟ್ರೆಂಡ್
ಅದರಲ್ಲೂ ಜಮಾನದಲ್ಲೇ ಬೆಂಗಳೂರಿನ ಸಾಕಷ್ಟು ಏರಿಯಾಗಳು ಫೇಮಸ್. ಆ ಏರಿಯಾ ಯಾವುದಕ್ಕೆ ಫೇಮಸ್ ಅನ್ನೋದು ಕೂಡ ಅಂದೇ ಅದ್ಭುತವಾಗಿ ಸಾಹಿತ್ಯ ರಚಿಸಿ, ಹಾಡಿನ ಮೂಲಕ ಪ್ರಸ್ತುತಪಡಿಸಿತ್ತು ಚಿತ್ರತಂಡ. ಸಿ ವಿ ಶಿವಶಂಕರ್ ಬರೆದ, ಸದ್ಗುರು ನಿರ್ದೇಶನದ ಹಾಗೂ ರತ್ನ ಸಂಗೀತದ ಈ ಸಿನಿಮಾದ ಒಂದೊಂದು ಹಾಡು ಕೂಡ ಇಂಪ್ರೆಸ್ಸೀವ್. ಅದ್ರಲ್ಲೂ ಬೆಂಗಳೂರು ಸೊಬಗು ತೋರಿಸೋ ಈ ಸಾಂಗ್ ಇಂದಿಗೂ ಹಚ್ಚ ಹಸಿರು. ನೋಡೋಕೆ ಕಣ್ಮನ ತಣಿಸುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್‌ನಲ್ಲಿದೆ.
1965ರ ‘ಮನೆ ಕಟ್ಟಿ ನೋಡು’ ಕಪ್ಪು ಬಿಳುಪು ಸಿನಿಮಾದ ಸಾಂಗ್
ಅಬ್ಬಬ್ಬಾ.. ಜಮಾನದಲ್ಲೇ ಎಲ್ಲಾ ಏರಿಯಾಗಳು ಫುಲ್ ಫೇಮಸ್
ಚಿಕ್ಕಪೇಟೆ ಬಟ್ಟೆ, ಮಾರ್ಕೆಟ್ ಹೂವು, ಅಕ್ಕಿಪೇಟೆ ರೈಸ್, ನಗರ್ತ್‌ಪೇಟೆಯ ಜ್ಯುವೆಲ್ಲರಿ, ಬಳೇ ಪೇಟೆಯ ಕಾಸ್ಮೆಟಿಕ್ಸ್, ಕುಂಬಾರ್‌ಪೇಟೆಯ ಕುಂಬಾರಿಕೆ, ಶೇಷಾದ್ರಿಪುರಂನ 80ರ ದಶಕದ ಕೆ ಶೇಷಾದ್ರಿ ಅಯ್ಯರ್ ಓಲ್ಡ್ ಥಿಯೇಟರ್, ಶ್ರೀರಾಮ್‌ಪುರ ದೇವಯ್ಯ ಪಾರ್ಕ್ ಬ್ರಿಡ್ಜ್, 12ನೇ ಶತಮಾನದಷ್ಟು ಹಳೆಯ ಹಲಸೂರು ಪೇಟೆ, 1898ರಲ್ಲಿ ಹುಟ್ಟಿಕೊಂಡ ಬಸವನಗುಡಿ, ಕಬ್ಬನ್ ಪೇಟೆ, ಚಾಮರಾಜಪೇಟೆ.. ಅಬ್ಬಬ್ಬಾ.. ಹೇಳ್ತಾ ಹೋದ್ರೆ ಒಂದಾ ಎರಡಾ.. ಎಷ್ಟು ಖುಷಿ ಆಗುತ್ತೆ ಅಲ್ವಾ..?
ವಿ ಎನ್ ನಾರಾಯಣ್ ಹೀರೋ ಆಗಿದ್ದ ಈ ಚಿತ್ರದಲ್ಲಿ ಉದಯ್ ಕುಮಾರ್ ಕೂಡ ನಟಿಸಿದ್ರು. ದ್ವಾರಕೀಶ್, ಟೈಗರ್ ಪ್ರಭಾಕರ್, ತೂಗುದೀಪ ಶ್ರೀನಿವಾಸ್, ಅಷ್ಟೇ ಅಲ್ಲ ಬಾಲನಟಿಯಾಗಿ ಮಂಜುಳಾ ಕೂಡ ಬಣ್ಣ ಹಚ್ಚಿದ್ರು. ಬೆಂಗಳೂರನ್ನ ಬಹಳ ಅಚ್ಚುಕಟ್ಟಾಗಿ ತೋರಿಸಿದ್ದ ಈ ಸಿನಿಮಾ, ಮೂಲ ಬೆಂಗಳೂರಿಗರಿಗೆ ನೋಡೋಕೆ ಎಲ್ಲಿಲ್ಲದ ಖುಷಿ, ಸಂಭ್ರಮ. ಸದ್ಯ ಎಲ್ಲೆಲ್ಲಿಂದಲೋ ಜನ ಉದ್ಯೋಗ ಹರಸಿ ವಲಸೆ ಬರೋಕೆ ಶುರು ಮಾಡಿದ್ದಾರೆ. ಅದ್ರಿಂದ ನಮ್ಮ ಬೆಂಗಳೂರಿನ ಪರಿಸರ ಹಾಳಾಗ್ತಿದೆ.
ಪರಭಾಷಿಗರು ನಮ್ಮ ನಾಡು, ನುಡಿ, ಭಾಷೆ, ಜಲ, ಸಂಸ್ಕೃತಿ, ಸಾಹಿತ್ಯ ವಿಚಾರದಲ್ಲಿ ಆಗಾಗ ಉದ್ದಟತನದ ಮಾತುಗಳನ್ನಾಡಿ ವಿವಾದಗಳನ್ನು ಸೃಷ್ಟಿಸ್ತಿದ್ದಾರೆ. ಅದಕ್ಕೆ ಕಮಲ್ ಹಾಸನ್, ಸೋನು ನಿಗಮ್, ಲೋಕಾ ಚಿತ್ರದ ನಿರ್ದೇಶಕರು ಜ್ವಲಂತ ಸಾಕ್ಷಿಗಳು. ಕೆಂಪೇಗೌಡ ಕಟ್ಟಿದ ಬೆಂಗಳೂರು, ಇಂದು ಎಷ್ಟು ಎತ್ತರಕ್ಕೆ ಬೆಳೆದು ನಿಂತಿದೆ ಅಲ್ವಾ..? ಇಲ್ಲಿ ಅದೆಷ್ಟು ಕೋಟಿ ಜನ ಜೀವನ ಕಟ್ಟಿಕೊಂಡಿದ್ದಾರೋ ಏನೋ. ಆದ್ರೆ ಜೀವನ ರೂಪಿಸಿಕೊಳ್ಳೋಕೆ ಬಂದೋರಿಗೆ ಈ ಮಹಾನಗರಿ ಯಾರಿಗೂ ಕೈ ಕೊಟ್ಟಿಲ್ಲ. ಎಲ್ಲರ ಕೈ ಹಿಡಿದಿದೆ.
