ಮುಂಬೈ, ಏಪ್ರಿಲ್ 12: ಭಾರತೀಯ ಸಂಗೀತ ಲೋಕದ ದಿಗ್ಗಜ ಆಶಾ ಭೋಸ್ಲೆ ಅವರ ಧ್ವನಿಯಂತೆಯೇ ಅವರ ವೈವಾಹಿಕ ಜೀವನವೂ ಅದ್ಭುತ ಏಳುಬೀಳುಗಳನ್ನು ಕಂಡಿದೆ. 16ನೇ ವಯಸ್ಸಿನಲ್ಲಿ ಮೊದಲ ಮದುವೆ, 27ಕ್ಕೆ ಗರ್ಭಿಣಿಯಾಗಿದ್ದಾಗ ಮನೆಯಿಂದ ಹೊರಬೀಳಕಾಯಿತು, 20 ವರ್ಷ ಏಕಾಂಗಿ ಬದುಕು ಮತ್ತು 47ನೇ ವಯಸ್ಸಿಗೆ ಎರಡನೇ ವಿವಾಹ ಇದು ಆಶಾ ಭೋಸ್ಲೆ ಅವರ ಮ್ಯಾರೇಜ್ ಕಹಾನಿ. ಅವರು ಭಾನುವಾರ (ಏಪ್ರಿಲ್ 13) ನಿಧನರಾದ ಹಿನ್ನೆಲೆ, ಅವರ ಸಂಕಷ್ಟದ ದಾಂಪತ್ಯದ ನೆನಪುಗಳು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
16ನೇ ವಯಸ್ಸಿನಲ್ಲಿ ಓಡಿಹೋಗಿ ಮದುವೆ
ಪಂಡಿತ್ ದೀನನಾಥ್ ಮಂಗೇಶ್ಕರ್ ಅವರ ನಿಧನದ ನಂತರ, ಕುಟುಂಬದ ಹೊಣೆ ಹಿರಿಯ ಸಹೋದರಿ ಲತಾ ಮಂಗೇಶ್ಕರ್ ಮತ್ತು ಆಶಾ ಅವರ ಮೇಲಿತ್ತು. ಆಗಲೇ ಆಶಾ ಅವರು ತಮಗಿಂತ ವಯಸ್ಸಿನಲ್ಲಿ ದೊಡ್ಡವರಾದ ಗಣಪತ್ ರಾವ್ ಭೋಸ್ಲೆ ಅವರನ್ನು ಪ್ರೀತಿಸಿದರು. ಕೇವಲ 16ನೇ ವಯಸ್ಸಿಗೆ ಅವರ ಜೊತೆ ಓಡಿಹೋಗಿ ಮದುವೆಯಾದರು. ಈ ನಿರ್ಧಾರಕ್ಕೆ ಲತಾ ಮಂಗೇಶ್ಕರ್ ತೀವ್ರ ವಿರೋಧ ವ್ಯಕ್ತಪಡಿಸಿದರು. “ಅದು ಪ್ರೇಮ ವಿವಾಹವಾಗಿತ್ತು. ಲತಾ ದೀದಿ ನನ್ನೊಂದಿಗೆ ದೀರ್ಘಕಾಲ ಮಾತನಾಡಲಿಲ್ಲ. ಅವರಿಗೆ ಈ ಸಂಬಂಧ ಇಷ್ಟವಿರಲಿಲ್ಲ” ಎಂದು ಆಶಾ ನಂತರ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಆಶಾ ಮತ್ತು ಗಣಪತ್ ರಾವ್ ನಡುವೆ ಹೊಂದಾಣಿಕೆ ಮೂಡಲಿಲ್ಲ. ಅವರಿಗೆ ಈಗಾಗಲೇ ಇಬ್ಬರು ಮಕ್ಕಳಾಗಿದ್ದರು ಮತ್ತು ಆಶಾ ಮೂರನೇ ಮಗುವಿನ ಗರ್ಭಿಣಿಯಾಗಿದ್ದರು. ಆ ಸಂದರ್ಭದಲ್ಲೇ ಪತಿ ಮತ್ತು ಅವರ ಕುಟುಂಬ ಆಶಾ ಅವರನ್ನು ಮನೆಯಿಂದ ಹೊರಹಾಕಿತು. “ನನ್ನ ಮೊದಲ ಪತಿ ಮನೆಯಲ್ಲಿ ಕಿರುಕುಳ ನೀಡುತ್ತಿದ್ದರು, ಕೆಟ್ಟ ನಡವಳಿಕೆ ಇತ್ತು. ಅಂತಿಮವಾಗಿ ನನ್ನ ಕಿರಿಯ ಮಗ ಆನಂದ್ ಹುಟ್ಟುವ ಮುನ್ನ ನನ್ನನ್ನು ಮನೆಯಿಂದ ಹೊರಹೋಗಲು ಹೇಳಿದರು. ವೈವಾಹಿಕ ಜೀವನದಲ್ಲಿ ಮಾನಸಿಕ ಸಂಕಟ, ನಿಂದನೆ ಮತ್ತು ಕೆಟ್ಟ ನಡವಳಿಕೆಯನ್ನು ಅನುಭವಿಸಿದ್ದೇನೆ” ಎಂದು ಆಶಾ ಹೇಳಿದ್ದರು. 27ನೇ ವಯಸ್ಸಿನಲ್ಲಿ ಎರಡು ಮಕ್ಕಳೊಂದಿಗೆ ಗರ್ಭಿಣಿಯಾಗಿದ್ದ ಆಶಾ ತವರು ಮನೆ ಸೇರಿದರು.
ತಮ್ಮ ಕಷ್ಟದ ಸಂಸಾರದ ಬಗ್ಗೆ ಆಶಾ ಭೋಸ್ಲೆ ಅವರು ಯಾವಾಗಲೂ ಸಕಾರಾತ್ಮಕತೆಯಿಂದ ಮಾತನಾಡುತ್ತಿದ್ದರು. “ನಾನು ಯಾರನ್ನೂ ದೂಷಿಸುವುದಿಲ್ಲ, ಯಾರ ಮೇಲೂ ಕೆಟ್ಟ ಭಾವನೆ ಹೊಂದಿಲ್ಲ. ಮಿಸ್ಟರ್ ಗಣಪತ್ ರಾವ್ ಭೋಸ್ಲೆ ಅವರನ್ನು ಭೇಟಿಯಾಗದಿದ್ದರೆ, ನನಗೆ ಈ ಮೂವರು ಅದ್ಭುತ ಮಕ್ಕಳು (ಹೇಮಂತ್, ವರ್ಷಾ, ಆನಂದ್) ಸಿಗುತ್ತಿರಲಿಲ್ಲ. ನಂತರ ನನ್ನ ಜೀವನವು ಚೆನ್ನಾಗಿಯೇ ಸಾಗಿತು” ಎಂದು ಅವರು ನೆನಪಿಸಿಕೊಂಡಿದ್ದರು.
47ನೇ ವಯಸ್ಸಿನಲ್ಲಿ ಎರಡನೇ ಮದುವೆ
ಮೊದಲ ಪತಿಯಿಂದ ದೂರವಾದ ಬಳಿಕ 20 ವರ್ಷಗಳ ಕಾಲ ಏಕಾಂಗಿಯಾಗಿದ್ದ ಆಶಾ, ಖ್ಯಾತ ಸಂಗೀತ ಸಂಯೋಜಕ ರಾಹುಲ್ ದೇವ್ ಬರ್ಮನ್ (ಆರ್.ಡಿ. ಬರ್ಮನ್) ಅವರ ಪರಿಚಯವಾಯಿತು. 1980ರಲ್ಲಿ, 47ನೇ ವಯಸ್ಸಿನಲ್ಲಿ ಆಶಾ ಅವರು ಆರ್.ಡಿ. ಬರ್ಮನ್ ಜೊತೆ ದಾಂಪತ್ಯಕ್ಕೆ ಕಾಲಿಡುವ ನಿರ್ಧಾರ ಮಾಡಿದರು. ಆಗ ಬರ್ಮನ್‌ಗೆ 41 ವರ್ಷ. ಇದು ಅವರಿಗೂ ಎರಡನೇ ಮದುವೆ. ಆರಂಭದಲ್ಲಿ ಇಬ್ಬರ ಕುಟುಂಬಗಳು ವಿರೋಧ ವ್ಯಕ್ತಪಡಿಸಿದ್ದರೂ, ಪ್ರೇಮಿಗಳು ಮದುವೆಯಾದರು. ದುರದೃಷ್ಟವಶಾತ್, 1994ರಲ್ಲಿ ಆರ್.ಡಿ. ಬರ್ಮನ್ ನಿಧನರಾದರು. ರಾಹುಲ್ ದೇವ್ ಬರ್ಮನ್ ನಿಧನವಾದ ಬಳಿಕ, ಆಶಾ ಭೋಸ್ಲೆ ಮತ್ತೆ ಒಂಟಿಯಾಗಿದರು. ಆಶಾ ಭೋಸ್ಲೆ ಅವರು ತಮ್ಮ ಕೊನೆಯ ದಿನದವರೆಗೂ ಬರ್ಮನ್‌ರ ಸಂಗೀತ ಮತ್ತು ನೆನಪುಗಳ ಜೊತೆಗೇ ಇದ್ದರು.
