ಬೆಂಗಳೂರು: ಸ್ಯಾಂಡಲ್‌ವುಡ್ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲವಾಗಿ ಕಮೆಂಟ್ ಮಾಡಿ, ಮಾನಹಾನಿ ಮಾಡಿದ್ದ ಪ್ರಕರಣದ ತನಿಖೆ ಅಂತ್ಯಗೊಂಡಿದ್ದು, ಸೈಬರ್ ಕ್ರೈಂ ಪೊಲೀಸರು ನ್ಯಾಯಾಲಯಕ್ಕೆ ಅಧಿಕೃತವಾಗಿ ಚಾರ್ಜ್ ಶೀಟ್ (ದೋಷಾರೋಪ ಪಟ್ಟಿ) ಸಲ್ಲಿಕೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಬಂಧಿತರಾಗಿರುವ ಆರು ಮಂದಿ ಆರೋಪಿಗಳ ವಿರುದ್ಧ ಬಲವಾದ ಸಾಕ್ಷ್ಯಾಧಾರಗಳನ್ನು ಪೊಲೀಸರು ಕಲೆಹಾಕಿದ್ದಾರೆ.
ಶಿಕ್ಷಣವಿದ್ದರೂ ಸಂಸ್ಕಾರ ಮರೆತ ಆರೋಪಿಗಳು
ಈ ಪ್ರಕರಣದಲ್ಲಿ ಬಂಧಿತ ಆರು ಆರೋಪಿಗಳಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಹಾಗೂ ಬ್ಯಾಂಕ್ ಮ್ಯಾನೇಜರ್ ಕೂಡ ಸೇರಿದ್ದಾರೆ. ವಿಜಯಲಕ್ಷ್ಮೀ ಅವರು ನೀಡಿದ್ದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ್ದ ಸೈಬರ್ ಕ್ರೈಂ ಪೊಲೀಸರು, ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಇವರನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದರು.
60 ದಿನಗಳ ಗಡುವಿನೊಳಗೆ ತನಿಖೆ ಪೂರ್ಣ
ಕಾನೂನಿನ ನಿಯಮದಂತೆ ಆರೋಪಿಗಳನ್ನು ಬಂಧಿಸಿದ 60 ದಿನಗಳ ಒಳಗಾಗಿ ಚಾರ್ಜ್ ಶೀಟ್ ಸಲ್ಲಿಸುವುದು ಕಡ್ಡಾಯವಾಗಿದೆ. ಇಲ್ಲವಾದಲ್ಲಿ ಆರೋಪಿಗಳಿಗೆ ಸುಲಭವಾಗಿ ಜಾಮೀನು ಸಿಗುವ ಸಾಧ್ಯತೆ ಇರುತ್ತದೆ. ಇದನ್ನು ಮನಗಂಡ ಸೈಬರ್ ಪೊಲೀಸರು, ನಿಗದಿತ ಅವಧಿಯೊಳಗೆ ತನಿಖೆಯನ್ನು ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಈ ದೋಷಾರೋಪ ಪಟ್ಟಿಯಲ್ಲಿ ಆರೋಪಿಗಳು ಬಳಸಿದ್ದ ಮೊಬೈಲ್ ಫೋನ್‌ಗಳು, ಐಪಿ ವಿಳಾಸ (IP Address) ಮತ್ತು ಅವರು ಮಾಡಿದ್ದ ಅಶ್ಲೀಲ ಕಮೆಂಟ್‌ಗಳ ಡಿಜಿಟಲ್ ಪುರಾವೆಗಳನ್ನು ಲಗತ್ತಿಸಲಾಗಿದೆ.
ನಾಪತ್ತೆಯಾಗವರಿಗಾಗಿ ಮುಂದುವರಿದ ತನಿಖೆ
ಪೊಲೀಸರು ಸಲ್ಲಿಸಿರುವ ಚಾರ್ಜ್ ಶೀಟ್‌ನಲ್ಲಿ ಮತ್ತೊಂದು ಮಹತ್ವದ ಅಂಶವನ್ನು ಉಲ್ಲೇಖಿಸಲಾಗಿದೆ. ಈ ಪ್ರಕರಣದಲ್ಲಿ ಕೇವಲ ಈ ಆರು ಮಂದಿಯಷ್ಟೇ ಭಾಗಿಯಾಗಿಲ್ಲ, ಇನ್ನೂ ಕೆಲವು ಕಿಡಿಗೇಡಿಗಳು ವಿಜಯಲಕ್ಷ್ಮೀ ಅವರ ವಿರುದ್ಧ ಅವಹೇಳನಕಾರಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದರು. ಸದ್ಯ ಆ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ ಎಂದು ತಿಳಿಸಲಾಗಿದೆ.
ಸಮಾಜದಲ್ಲಿ ಗೌರವಯುತವಾಗಿ ಬಾಳುತ್ತಿರುವ ಮಹಿಳೆಯರ ವಿರುದ್ಧ ಇಂಟರ್ನೆಟ್ ವೇದಿಕೆಗಳಲ್ಲಿ ಅಶ್ಲೀಲವಾಗಿ ವರ್ತಿಸುವವರಿಗೆ ಈ ಪ್ರಕರಣವು ಒಂದು ಎಚ್ಚರಿಕೆಯ ಗಂಟೆಯಾಗಿದೆ. ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ, ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪೊಲೀಸರು ಸಾಬೀತು ಪಡಿಸಿದ್ದಾರೆ. ಸದ್ಯ ಆರೋಪಿಗಳಿಗೆ ಜೈಲು ಶಿಕ್ಷೆ ನೀಡಿದ್ದು, ಉಳಿದ ಆರೋಪಿಗಳಿಗಾಗಿ ಶೋಧಾಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.





