ಬೆಂಗಳೂರು: ಭಾರತೀಯ ಚಿತ್ರರಂಗದ ದಿಗ್ಗಜ ನಟಿ, ‘ಅಭಿನಯ ಸರಸ್ವತಿ’ ಎಂದೇ ಖ್ಯಾತರಾದ ಬಿ. ಸರೋಜಾದೇವಿ ಇನ್ನಿಲ್ಲ. ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ ತಮ್ಮ ಅಭಿನಯದ ಮೂಲಕ ಅನನ್ಯ ಛಾಪು ಮೂಡಿಸಿದ ಈ ಹಿರಿಯ ನಟಿ, ತಮ್ಮ ಹುಟ್ಟೂರು ಬೆಂಗಳೂರಿನ ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ದಶವಾರದಲ್ಲಿ ಇಂದು ಮಣ್ಣಾದರು. ಒಕ್ಕಲಿಗ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನೆರವೇರಿತು.
ಸಕಲ ಗೌರವಗಳೊಂದಿಗೆ ಅಂತಿಮ ವಿದಾಯ
ಬೆಂಗಳೂರಿನ ನಿವಾಸದಿಂದ ಚನ್ನಪಟ್ಟಣದ ದಶವಾರ ಗ್ರಾಮಕ್ಕೆ ಸರೋಜಾದೇವಿಯವರ ಪಾರ್ಥಿವ ಶರೀರವನ್ನು ಮೆರವಣಿಗೆಯ ಮೂಲಕ ಸ್ಥಳಾಂತರಿಸಲಾಯಿತು. ಅವರ ತಾಯಿ ರುದ್ರಮ್ಮನವರ ಸಮಾಧಿ ಪಕ್ಕದಲ್ಲಿ, ದಶವಾರ ಗ್ರಾಮದ ತೋಟದಲ್ಲಿ ಅಂತ್ಯಕ್ರಿಯೆ ನಡೆಯಿತು. ಅವರ ಪುತ್ರ ಗೌತಮ್ ಅಂತಿಮ ವಿಧಿಗಳನ್ನು ಪೂರೈಸಿದರು. ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಿಂದ ಕುಶಾಲ ತೋಪು ಸಿಡಿಸಿ ಗೌರವ ಸಮರ್ಪಿಸಲಾಯಿತು. ಕುಟುಂಬಸ್ಥರು, ಗಣ್ಯರು, ಚಿತ್ರರಂಗದ ಸಹಕಲಾವಿದರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಈ ವೇಳೆ ಉಪಸ್ಥಿತರಿದ್ದರು.
ಚಿತ್ರರಂಗದ ದಂತಕತೆ
ಏಳು ದಶಕಗಳಲ್ಲಿ ಸುಮಾರು 900 ಚಿತ್ರಗಳಲ್ಲಿ ನಟಿಸಿರುವ ಬಿ. ಸರೋಜಾದೇವಿ ಅವರು, ಕನ್ನಡದಲ್ಲಿ ‘ಅಭಿನಯ ಸರಸ್ವತಿ’ ಮತ್ತು ತಮಿಳಿನಲ್ಲಿ ‘ಕನ್ನಡತು ಪೈಂಗಿಲಿ’ ಎಂಬ ಉಪನಾಮಗಳಿಂದ ಜನಪ್ರಿಯರಾಗಿದ್ದರು. ‘ಕಿತ್ತೂರು ಚೆನ್ನಮ್ಮ’ ಚಿತ್ರದಲ್ಲಿ ತಮ್ಮ ದಿಟ್ಟ ಅಭಿನಯದಿಂದ ಮನೆಮಾತಾದ ಅವರು, ‘ಬಭ್ರುವಾಹನ’ ಚಿತ್ರದಲ್ಲಿ ಚಿತ್ರಾಂಗದೆಯಾಗಿ ಎಲ್ಲರ ಮನಗೆದ್ದಿದ್ದರು. ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಚಿತ್ರಗಳಲ್ಲಿ ತಮ್ಮ ವಿಶಿಷ್ಟ ನಟನೆಯಿಂದ ದೇಶಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿದ್ದರು.
ಪ್ರಶಸ್ತಿ ಮತ್ತು ಗೌರವಗಳು
-
2009: ತಮಿಳುನಾಡು ಸರ್ಕಾರದ ಕಲೈಮಾಮಣಿ ಜೀವಮಾನ ಸಾಧನೆ ಪ್ರಶಸ್ತಿ
-
2009: ಕರ್ನಾಟಕ ಸರ್ಕಾರದ ಡಾ. ರಾಜ್ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ
-
2009: ಎರಡನೇ ಬಾರಿಗೆ ಆಂಧ್ರ ಪ್ರದೇಶದ NTR ರಾಷ್ಟ್ರೀಯ ಪ್ರಶಸ್ತಿ
-
2001: ಆಂಧ್ರ ಪ್ರದೇಶದ NTR ರಾಷ್ಟ್ರೀಯ ಪ್ರಶಸ್ತಿ
-
1993: ತಮಿಳುನಾಡು ಸರ್ಕಾರದ ಎಂಜಿಆರ್ ಪ್ರಶಸ್ತಿ
-
1988: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
-
1980: ಅಭಿನಂದನ-ಕಾಂಚನ ಮಾಲಾ ಪ್ರಶಸ್ತಿ
-
1969: ‘ಕುಲವಿಳಕ್ಕು’ ಚಿತ್ರಕ್ಕೆ ತಮಿಳುನಾಡು ರಾಜ್ಯ ಪ್ರಶಸ್ತಿ
-
1965: ಕರ್ನಾಟಕದ ‘ಅಭಿನಯ ಸರಸ್ವತಿ’ ಗೌರವ
ಬಿ. ಸರೋಜಾದೇವಿಯವರ ನಟನೆ, ಸರಳತೆ, ಮತ್ತು ಚಿತ್ರರಂಗಕ್ಕೆ ನೀಡಿದ ಕೊಡುಗೆ ಇಂದಿಗೂ ಯುವ ಕಲಾವಿದರಿಗೆ ಸ್ಪೂರ್ತಿಯಾಗಿದೆ. ಒಂದು ಯುಗದ ಚಿತ್ರರಂಗದ ರಾಣಿಯಾಗಿ, ಅವರು ತಮ್ಮ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ.