ಬೆಂಗಳೂರು, ಸಿಲಿಕಾನ್ ಸಿಟಿ ಎಂದೇ ಖ್ಯಾತಿಪಡೆದ ನಗರ, ಸದಾ ಸಂಚಾರ ದಟ್ಟಣೆಯಿಂದ ಕೂಡಿದ್ದು. ವಾರದ ದಿನಗಳಲ್ಲಿ ಆಫೀಸ್‌ಗಳು, ಶಾಲೆಗಳು, ಕಾಲೇಜುಗಳು ಮತ್ತು ವ್ಯಾಪಾರ ಸಂಸ್ಥೆಗಳಿಂದಾಗಿ ರಸ್ತೆಗಳು ಜನಜಂಗುಳಿಯಿಂದ ತುಂಬಿರುತ್ತವೆ. ವಾರಾಂತ್ಯದಲ್ಲಿ ಕುಟುಂಬದೊಂದಿಗೆ ಟ್ರಿಪ್ ಅಥವಾ ಶಾಪಿಂಗ್‌ಗೆ ಹೋಗುವವರ ಸಂಖ್ಯೆ ಹೆಚ್ಚಾಗಿ, ಟ್ರಾಫಿಕ್ ಜಾಮ್ ಎಂಬುದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಇತ್ತೀಚಿನ ದೀಪಾವಳಿ ರಜೆಯ ಸಮಯದಲ್ಲಿ ಈ ನಗರದ ಚಿತ್ರಣವೇ ಬದಲಾಗಿದೆ. ಜನರು ತಮ್ಮ ಊರುಗಳಿಗೆ ಹೋಗಿದ್ದರಿಂದ ರಸ್ತೆಗಳು ಖಾಲಿ ಖಾಲಿಯಾಗಿದ್ದವು. ಇದರಿಂದ ಪ್ರಸಿದ್ಧ ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ಅಚ್ಚರಿಗೊಂಡು ಒಂದು ದಿಢೀರ್ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಆಶಿಶ್ ವಿದ್ಯಾರ್ಥಿ, ಹಿಂದಿ, ಕನ್ನಡ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ತಮ್ಮ ಅಭಿನಯದ ಮೂಲಕ ಗುರುತಿಸಿಕೊಂಡ ನಟ. ಅವರು ತಮ್ಮ ಸ್ಟ್ಯಾಂಡ್-ಅಪ್ ಕಾಮಿಡಿ ಶೋಗಾಗಿ ಕೊಚ್ಚಿಗೆ ತೆರಳಬೇಕಿತ್ತು. ಗಾಂಧಿನಗರದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವಾಗ ಅವರಿಗೆ ಆಶ್ಚರ್ಯಕರ ಅನುಭವವಾಯಿತು. ಸಾಮಾನ್ಯವಾಗಿ ಈ ಮಾರ್ಗದಲ್ಲಿ ಕನಿಷ್ಠ ಒಂದು ಗಂಟೆಯಾದರೂ ಬೇಕಾಗುತ್ತದೆ. ಆದರೆ ದೀಪಾವಳಿ ರಜೆಯ ಹಿನ್ನೆಲೆಯಲ್ಲಿ ಜನರು ನಗರವನ್ನು ಬಿಟ್ಟು ಹೋಗಿದ್ದರಿಂದ, ಕೇವಲ 25 ನಿಮಿಷಗಳಲ್ಲಿ ಅವರು ವಿಮಾನ ನಿಲ್ದಾಣಕ್ಕೆ ತಲುಪಿದರು. ಇದನ್ನು ನೋಡಿ ಅವರು ವಿಡಿಯೋದಲ್ಲಿ ಹಾಸ್ಯಮಯವಾಗಿ ಹೇಳಿದ್ದಾರೆ. “ಬೆಂಗಳೂರು ಟ್ರಾಫಿಕ್ ಅನ್ನು ಯಾರೋ ಕದ್ದಿದ್ದಾರೆ! ಟ್ರಾಫಿಕ್ ಎಂಬುದೇ ಇಲ್ಲವಲ್ಲಾ?” ಎಂದಿದ್ದಾರೆ.
ವಿಡಿಯೋದಲ್ಲಿ ಆಶಿಶ್ ವಿದ್ಯಾರ್ಥಿ ತಮ್ಮ ಪ್ರಯಾಣದ ಬಗ್ಗೆ ವಿವರಿಸುತ್ತಾ, “ನಾವು ಬೇಗನೆ ಎದ್ದು ಹೊರಟಿದ್ದೇವೆ. ಆದರೆ ರಸ್ತೆಗಳು ಖಾಲಿ ಇದ್ದವು. ಗಾಂಧಿನಗರದಿಂದ ಏರ್‌ಪೋರ್ಟ್‌ಗೆ 25 ನಿಮಿಷಗಳಲ್ಲಿ ಬಂದಿದ್ದೇವೆ. ಟ್ರಾಫಿಕ್ ಎಲ್ಲಿದೆ? ಇದು ಕಳವಳಕಾರಿಯಾಗಿದೆ!” ಎಂದು ಹೇಳುತ್ತಾರೆ. ಅವರು ಕೋವಿಡ್-19 ಸಮಯದಲ್ಲಿದ್ದ ಪರಿಸ್ಥಿತಿಯನ್ನು ನೆನಪಿಸಿಕೊಂಡು, “ಕೋವಿಡ್ ಕಾಲದಲ್ಲಿ ಇದೇ ರೀತಿ ಖಾಲಿ ರಸ್ತೆಗಳು ಕಂಡಿದ್ದವು. ಆದರೆ ಈಗ ದೀಪಾವಳಿ ರಜೆಯಿಂದಾಗಿ ಮತ್ತೆ ಅದೇ ಸ್ಥಿತಿ. ಬೆಂಗಳೂರು ಸದಾ ಹೀಗೆ ಇದ್ದರೆ ಎಷ್ಟು ಚೆನ್ನಾಗಿರುತ್ತದೆ?” ಎಂದು ವ್ಯಂಗ್ಯವಾಡಿ ಹೇಳಿದ್ದಾರೆ. ಈ ವಿಡಿಯೋದ ಮೂಲಕ ಅವರು ಬೆಂಗಳೂರುವಿನ ಟ್ರಾಫಿಕ್ ಸಮಸ್ಯೆಯನ್ನು ಹಾಸ್ಯಮಯವಾಗಿ ಚರ್ಚಿಸಿದ್ದಾರೆ. ಈ ವಿಡಿಯೋದ ಮೂಲಕ ಆಶಿಶ್ ವಿದ್ಯಾರ್ಥಿ ನಗರದ ನಿವಾಸಿಗಳಿಗೆ ಒಂದು ಸಂದೇಶ ನೀಡಿದ್ದಾರೆ. ಟ್ರಾಫಿಕ್ ಸಮಸ್ಯೆಯನ್ನು ಕೇವಲ ದೂರು ಮಾಡಿ ಬಿಡದೆ, ಅದನ್ನು ಪರಿಹರಿಸಲು ಸರ್ಕಾರ ಮತ್ತು ಜನರು ಒಟ್ಟಾಗಿ ಕೆಲಸ ಮಾಡಬೇಕು ಎಂದಿದ್ದಾರೆ.
ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಹೊಸದಲ್ಲ. ನಗರದ ಜನಸಂಖ್ಯೆ ಹೆಚ್ಚಾಗುತ್ತಿದ್ದಂತೆ ವಾಹನಗಳ ಸಂಖ್ಯೆಯೂ ಹೆಚ್ಚಿದೆ. ಸರ್ಕಾರದಿಂದ ಮೆಟ್ರೋ, ಎಕ್ಸ್‌ಪ್ರೆಸ್‌ವೇ ಮತ್ತು ಫ್ಲೈಓವರ್‌ಗಳ ನಿರ್ಮಾಣದಂತಹ ಯೋಜನೆಗಳು ನಡೆಯುತ್ತಿವೆಯಾದರೂ, ಇನ್ನೂ ಸಂಪೂರ್ಣ ಪರಿಹಾರ ಸಿಕ್ಕಿಲ್ಲ.





