ಕನ್ನಡ ಟೆಲಿವಿಷನ್ ನ ಖ್ಯಾತ ಆಂಕರ್ ಅನುಶ್ರೀ ಇಂದು ಉದ್ಯಮಿ ರೋಷನ್ ಅವರೊಂದಿಗೆ ವಿವಾಹ ಬಂಧನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಹೊರವಲಯದ ಕಗ್ಗಲಿಪುರದ ಸಂಭ್ರಮ ಬೈ ಸ್ವಾನ್‌ಲೈನ್ಸ್ ಸ್ಟುಡಿಯೋಸ್‌ನಲ್ಲಿ ನಡೆದ ಈ ಸಂಭ್ರಮದ ಕಾರ್ಯಕ್ರಮಕ್ಕೆ ಕುಟುಂಬಸ್ಥರು, ಆತ್ಮೀಯ ಸ್ನೇಹಿತರು ಹಾಗೂ ಕನ್ನಡ ಚಿತ್ರರಂಗದ ಹಲವು ಗಣ್ಯರು ಭಾಗವಹಿಸಿ ನವದಂಪತಿಗೆ ಶುಭಾಶಯ ಕೋರಿದ್ದಾರೆ.
ಅನುಶ್ರೀ ಹಾಗೂ ರೋಷನ್ ಅವರದ್ದು ಲವ್ ಮ್ಯಾರೇಜ್ ಎಂಬುದು ವಿಶೇಷ. ಇವರಿಬ್ಬರ ಭೇಟಿ 2022ರಲ್ಲಿ ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಗಂಧದ ಗುಡಿ ಚಿತ್ರದ ರಿಲೀಸ್ ಸಂದರ್ಭದಲ್ಲಿ ನಡೆದಿತ್ತು. ರೋಷನ್ ಅವರು ರಾಜ್‌ಕುಮಾರ್ ಕುಟುಂಬಕ್ಕೆ ಆತ್ಮೀಯರಾಗಿದ್ದು, ಇದೀಗ ಈ ಜೋಡಿಯು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇಂದು ಬೆಳಗ್ಗೆ 10:56ಕ್ಕೆ ರೋಷನ್ ಅವರು ಅನುಶ್ರೀಗೆ ಮಾಂಗಲ್ಯ ಧಾರಣೆ ಮಾಡಿದರು. ಈ ಕ್ಷಣಕ್ಕೆ ಕುಟುಂಬಸ್ಥರು, ಆತ್ಮೀಯರು ಹಾಗೂ ಆಪ್ತ ಸ್ನೇಹಿತರು ಸಾಕ್ಷಿಯಾದರು ಕಾರ್ಯಕ್ರಮಕ್ಕೆ ಆಹ್ವಾನಿತರಾದವರಿಗೆ ಮಾತ್ರ ಪ್ರವೇಶವಿತ್ತು, ಇದರಿಂದಾಗಿ ಕೆಲವು ಅಭಿಮಾನಿಗಳಿಗೆ ನಿರಾಸೆಯಾಯಿತು.
ಸೆಲೆಬ್ರಿಟಿಗಳ ಸಮಾಗಮ
ವಿವಾಹ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಹಲವು ಗಣ್ಯರು ಆಗಮಿಸಿದ್ದರು. ಹಿರಿಯ ನಟಿಯರಾದ ತಾರಾ ಅನುರಾಧ, ಪ್ರೇಮ, ನಟ ತರುಣ್ ಸುಧೀರ್, ರಾಜ್ ಬಿ ಶೆಟ್ಟಿ, ಕಾವ್ಯ ಶಾ, ಸೋನಲ್ ಮೊಂಥೆರೋ, ನಟ ನಾಗಭೂಷಣ್, ಚೈತ್ರಾ ಜೆ ಆಚಾರ್, ಹಾಗೂ ನಟ ಶರಣ್ ಸೇರಿದಂತೆ ಹಲವರು ಈ ಸಂತಸದ ಕ್ಷಣದಲ್ಲಿ ಭಾಗಿಯಾದರು.
ಅಭಿಮಾನಿಗಳಿಗೆ ನಿರಾಸೆ
ಅನುಶ್ರೀಯವರ ಜನಪ್ರಿಯತೆಯಿಂದಾಗಿ, ಅವರ ಮದುವೆಯ ಕುರಿತು ತಿಳಿದ ಅಭಿಮಾನಿಗಳು ಸ್ಟುಡಿಯೋ ಬಳಿಗೆ ಆಗಮಿಸಿದ್ದರು. ಆದರೆ, ಕಟ್ಟುನಿಟ್ಟಾದ ಭದ್ರತೆಯಿಂದಾಗಿ ಆಹ್ವಾನವಿಲ್ಲದೆ ಯಾರಿಗೂ ಪ್ರವೇಶ ಸಿಗಲಿಲ್ಲ. ಇದರಿಂದ ಕೆಲವು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದರು.
ಅನುಶ್ರೀ ಹಾಗೂ ರೋಷನ್ ದಂಪತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳಿಂದ ಹಿಡಿದು ಅಭಿಮಾನಿಗಳವರೆಗೆ ಎಲ್ಲರೂ ಈ ಜೋಡಿಗೆ ಒಳ್ಳೆಯ ಭವಿಷ್ಯಕ್ಕಾಗಿ ಹಾರೈಸುತ್ತಿದ್ದಾರೆ.