ಸ್ಯಾಂಡಲ್‌ವುಡ್‌ನ ಖ್ಯಾತ ನಟ ಅಜಯ್ ರಾವ್ ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿದೆ. ಅವರ ಪತ್ನಿ ಸ್ವಪ್ನಾ ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ವಿಚ್ಛೇದನಕ್ಕೆ ಮುಂದಾಗಿದ್ದಾರೆ. ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ 11 ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗೊಳಿಸಲು ಸ್ವಪ್ನಾ ನಿರ್ಧರಿಸಿದ್ದಾರೆ. ಆದರೆ, ಈ ವಿಷಯದ ಬಗ್ಗೆ ಅಜಯ್, “ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಪತ್ನಿಯ ಜತೆ ಮಾತನಾಡಿ ಹೇಳುತ್ತೇನೆ” ಎಂದು ಪ್ರತಿಕ್ರಿಯಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
ಸ್ವಪ್ನಾ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಯಾವುದೇ ಪ್ರತಿಕ್ರಿಯೆಗೆ ಸಿಗುತ್ತಿಲ್ಲ. ಇದರ ಜೊತೆಗೆ, ಸ್ವಪ್ನಾ ತಮ್ಮ ಹೆಸರಿನ ಜೊತೆಗಿದ್ದ ಅಜಯ್ ರಾವ್ ಹೆಸರನ್ನು ತೆಗೆದುಹಾಕಿರುವುದು ಸಂದೇಹಕ್ಕೆ ಕಾರಣವಾಗಿದೆ. ಆದರೆ, ವಿಚ್ಛೇದನಕ್ಕೆ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.
ಅಜಯ್ ರಾವ್ ಮತ್ತು ಸ್ವಪ್ನಾ 2014ರಲ್ಲಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ 2019ರಲ್ಲಿ ಹೆಣ್ಣು ಮಗು ಚೆರಿಷ್ಮಾ ಜನಿಸಿದ್ದಳು. ಕಳೆದ ವರ್ಷ ಇವರು ತಮ್ಮ ನೂತನ ಮನೆಯ ಗೃಹಪ್ರವೇಶವನ್ನು ಅದ್ಧೂರಿಯಾಗಿ ಆಚರಿಸಿದ್ದರು. ಇವರಿಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಅನ್ಯೋನ್ಯವಾಗಿ ಕಾಣಿಸಿಕೊಂಡಿದ್ದರು. ಆದರೆ, ಇದ್ದಕ್ಕಿದ್ದಂತೆ ದೂರವಾಗಲು ನಿರ್ಧರಿಸಿದ್ದು ಎಲ್ಲರಿಗೂ ಆಶ್ಚರ್ಯ ತಂದಿದೆ.
ನಟನಾಗಿ ಮಾತ್ರವಲ್ಲ, ಅಜಯ್ ರಾವ್ ನಿರ್ಮಾಪಕರಾಗಿಯೂ ಸ್ಯಾಂಡಲ್‌ವುಡ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು ‘ಯುದ್ಧಕಾಂಡ ಚಾಪ್ಟರ್-2’ ಚಿತ್ರವನ್ನು ನಿರ್ಮಿಸಿದ್ದರು. ಈ ಚಿತ್ರಕ್ಕಾಗಿ ಅವರು ತಮ್ಮ ಬಿಎಂಡಬ್ಲ್ಯು ಕಾರನ್ನು ಮಾರಾಟ ಮಾಡಿದ್ದರು. ಈ ವೇಳೆ ಚೆರಿಷ್ಮಾ ಕಾರು ಮಾರಾಟಕ್ಕೆ ಒಪ್ಪದೆ ಬಿಕ್ಕಿ ಬಿಕ್ಕಿ ಅತ್ತಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. “ಇದು ನಿನ್ನ ಫೇವರಿಟ್ ಕಾರಾ?” ಎಂದು ಅಜಯ್ ಕೇಳಿದಾಗ, “ಹೌದು” ಎಂದು ಚೆರಿಷ್ಮಾ ಉತ್ತರಿಸಿದ್ದಳು. “ಸಾರಿ ಪುಟ್ಟ, ಇನ್ನೊಂದು ಹೊಸ ಕಾರು ತರೋಣ” ಎಂದು ಅಜಯ್ ಸಮಾಧಾನ ಮಾಡಿದ್ದರು. ಆದರೆ, “ನನಗೆ ಇದೇ ಕಾರು ಬೇಕು” ಎಂದು ಚೆರಿಷ್ಮಾ ಹಠ ಹಿಡಿದಿದ್ದಳು. ಈ ಭಾವುಕ ಕ್ಷಣದ ವಿಡಿಯೊ ಜನರ ಮನ ಗೆದ್ದಿತ್ತು. ಅಜಯ್ ರಾವ್ ಮತ್ತು ಚೆರಿಷ್ಮಾಗೆ ಅಭಿಮಾನಿಗಳಿಂದ ಬೆಂಬಲ ವ್ಯಕ್ತವಾಗಿತ್ತು. ಈಗ ಈ ದಾಂಪತ್ಯದ ಬಿರುಕಿನ ಸುದ್ದಿ ಅಜಯ್ ರಾವ್ ಅವರ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ.