ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದಾದ ‘ಕೆಡಿ’ (KD: The Devil) ಚಿತ್ರದ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು ಬಿಡುಗಡೆಯಾದ ದಿನದಿಂದಲೂ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿದೆ. ಆದರೆ, ಈ ಬಾರಿ ಈ ಹಾಡು ಸೃಷ್ಟಿಸಿರುವ ವಿವಾದ ಸಣ್ಣದೇನಲ್ಲ. ಹಾಡಿನ ಸಾಹಿತ್ಯದ ಕುರಿತು ಕೇಳಿಬಂದ ತೀವ್ರ ಆಕ್ಷೇಪಗಳ ಬೆನ್ನಲ್ಲೇ, ಹಾಡಿಗೆ ಧ್ವನಿಯಾಗಿದ್ದ ಖ್ಯಾತ ಗಾಯಕಿ ಐಶ್ವರ್ಯಾ ರಂಗರಾಜನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ಡಿ-ಆ್ಯಕ್ಟಿವೇಟ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಮಾರ್ಚ್ 14ರ ಶನಿವಾರದಂದು ಅದ್ಧೂರಿಯಾಗಿ ಬಿಡುಗಡೆಯಾದ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು ಕೇವಲ ಕೆಲವೇ ಗಂಟೆಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ನಿರ್ದೇಶಕ ಜೋಗಿ ಪ್ರೇಮ್ ಅವರೇ ಸಾಹಿತ್ಯ ಬರೆದಿದ್ದ ಈ ಹಾಡಿನಲ್ಲಿ ಬಾಲಿವುಡ್ ನಟಿ ನೋರಾ ಫತೇಹಿ ಹೆಜ್ಜೆ ಹಾಕಿದ್ದರು. ಆದರೆ, ಹಾಡಿನ ಸಾಲುಗಳು ಅತ್ಯಂತ ಅಶ್ಲೀಲವಾಗಿವೆ ಮತ್ತು ಕನ್ನಡ ಸಂಸ್ಕೃತಿಗೆ ಪೂರಕವಾಗಿಲ್ಲ ಎಂಬ ಆರೋಪಗಳು ಕೇಳಿಬಂದವು. ಕನ್ನಡಿಗರು ಮಾತ್ರವಲ್ಲದೆ, ಬಾಲಿವುಡ್ ಮಂದಿ ಕೂಡ ಹಾಡಿನ ಲಿರಿಕ್ಸ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಯಾವುದೇ ಒಂದು ಹಾಡು ವಿವಾದಕ್ಕೆ ಸಿಲುಕಿದಾಗ ಅದರ ಗಾಯಕರು ಕೂಡ ಟೀಕೆಗೆ ಗುರಿಯಾಗುವುದು ಸಹಜ. ಐಶ್ವರ್ಯಾ ರಂಗರಾಜನ್ ಈ ಹಾಡನ್ನು ಹಾಡಿದ್ದರಿಂದ, ನೆಟ್ಟಿಗರು ಅವರ ಸೋಷಿಯಲ್ ಮೀಡಿಯಾ ಪೇಜ್‌ಗಳಲ್ಲಿ ಕಾಮೆಂಟ್‌ಗಳ ಮೂಲಕ ಆಕ್ರೋಶ ವ್ಯಲ್ತಪಡಿಸಿದ್ದಾರೆ. ಬಹುಶಃ ಈ ನೆಗೆಟಿವ್ ಕಮೆಂಟ್‌ಗಳು ಅಥವಾ ಟ್ರೋಲ್‌ಗಳಿಂದ ಬೇಸತ್ತು ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ತಾತ್ಕಾಲಿಕವಾಗಿ ಡಿ ಆಕ್ಟಿವೇಟ್ ಮಾಡಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ಗಾಯಕಿ ಐಶ್ವರ್ಯಾ ಈ ಬಗ್ಗೆ ಅಧಿಕೃತವಾಗಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಇದು ಕಾಕತಾಳೀಯವೋ ಅಥವಾ ವಿವಾದದ ಒತ್ತಡವೋ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಸಾಮಾನ್ಯವಾಗಿ ವಿವಾದಗಳು ತಣ್ಣಗಾದ ಮೇಲೆ ಸೆಲೆಬ್ರಿಟಿಗಳು ಮತ್ತೆ ಸೋಷಿಯಲ್ ಮೀಡಿಯಾಗೆ ಮರಳುತ್ತಾರೆ, ಹಾಗೆಯೇ ಐಶ್ವರ್ಯಾ ಕೂಡ ಕಂಬ್ಯಾಕ್ ಮಾಡಬಹುದು ಎಂಬ ನಿರೀಕ್ಷೆ ಇದೆ.
ವಿವಾದ ತಾರಕಕ್ಕೇರುತ್ತಿದ್ದಂತೆ ಎಚ್ಚೆತ್ತುಕೊಂಡ ನಿರ್ದೇಶಕ ಜೋಗಿ ಪ್ರೇಮ್, ಹಾಡನ್ನು ಯುಟ್ಯೂಬ್‌ನಿಂದ ತೆಗೆದುಹಾಕಿದ್ದಾರೆ. ಈ ಕುರಿತು ಮಾತನಾಡಿದ ಅವರು, ಹಾಡಿನ ಸಾಹಿತ್ಯವನ್ನು ಸಂಪೂರ್ಣವಾಗಿ ಬದಲಿಸಿ, ಹೊಸ ಸಾಲುಗಳೊಂದಿಗೆ ಶೀಘ್ರದಲ್ಲೇ ಹಾಡನ್ನು ಮರು ಬಿಡುಗಡೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ‘ಕೆಡಿ’ ಸಿನಿಮಾ ಬಿಡುಗಡೆಗೆ ಕೆಲವೇ ವಾರಗಳು ಬಾಕಿ ಇರುವಾಗ ಈ ಬೆಳವಣಿಗೆ ಚಿತ್ರತಂಡಕ್ಕೆ ತುಸು ಹಿನ್ನಡೆಯಾದರೂ, ಜನರ ಆಕ್ರೋಶಕ್ಕೆ ಮಣಿದು ನಿರ್ಧಾರ ಕೈಗೊಂಡಿರುವುದು ಗಮನಾರ್ಹ.





