ಹಾಸನ: ನಟ ಯಶ್ (Actor Yash) ಅವರ ತಾಯಿ ಪುಷ್ಪ ಅವರು ಮನೆ ಪಕ್ಕದ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪ ದಿನೇದಿನೇ ತಿರುವು ಪಡೆಯುತ್ತಿದೆ. ಹಾಸನ ನಗರದ ವಿದ್ಯಾನಗರ ಪ್ರದೇಶದಲ್ಲಿರುವ ಸೈಟ್‌ಗೆ ಸಂಬಂಧಿಸಿದಂತೆ ಪುಷ್ಪ ಹಾಗೂ ಜಿಪಿಎ ಹೋಲ್ಡರ್ ದೇವರಾಜ್ ನಡುವಿನ ಗಲಾಟೆ ಇದೀಗ ಹೊಸ ತಿರುವು ಪಡೆದುಕೊಂಡಿದೆ.
ಈ ಜಾಗದ ಕುರಿತಾಗಿ ನ್ಯಾಯಾಲಯದ ಆದೇಶವಿದೆ ಎಂದು ಹೇಳಿಕೊಂಡು ದೇವರಾಜ್ ಅವರು ಇತ್ತೀಚೆಗೆ ಪುಷ್ಪ ಅವರು ನಿರ್ಮಿಸಿದ್ದ ಕಾಂಪೌಂಡ್‌ನ್ನು ತೆರವುಗೊಳಿಸಿದ್ದರು. ದೇವರಾಜ್ ಅವರ ಹೇಳಿಕೆಯ ಪ್ರಕಾರ, ಆರು ವರ್ಷಗಳ ಹಿಂದೆ ತಾವು ಸೈಟ್ ಖರೀದಿಸಿದ್ದು, ಅದರ ಮೇಲೆಯೇ ಪುಷ್ಪ ಅವರು ಯಾವುದೇ ಅನುಮತಿ ಇಲ್ಲದೆ ಕಾಂಪೌಂಡ್ ಹಾಕಿದ್ದರು ಎನ್ನಲಾಗಿದೆ. ಕಾಂಪೌಂಡ್ ತೆರವು ಬಳಿಕ ದೇವರಾಜ್ ಅವರು ಜಾಗದ ಸುತ್ತ ತಂತಿ ಬೇಲಿ ಹಾಕಿ, ‘ಕೋರ್ಟ್ ಆದೇಶದಂತೆ’ ಎಂಬ ಬೋರ್ಡ್ ಕೂಡ ಅಳವಡಿಸಿದ್ದರು.
ಆದರೆ ಘಟನೆ ಅಲ್ಲಿಗೆ ನಿಂತಿಲ್ಲ. ಇಂದು ಮತ್ತೆ ಪುಷ್ಪ ಅವರು ದೇವರಾಜ್ ಹಾಕಿದ್ದ ತಂತಿ ಬೇಲಿಯನ್ನು ತೆರವುಗೊಳಿಸಿ, ಜಾಗದ ಮೇಲೆ ಪುನಃ ಕಾಂಪೌಂಡ್ ನಿರ್ಮಿಸಲು ಸಿದ್ಧತೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ ದೇವರಾಜ್ ಅವರು ಹಾಕಿದ್ದ ‘ಕೋರ್ಟ್ ಆದೇಶವಿದೆ’ ಎಂಬ ಫಲಕವನ್ನೇ ಪುಷ್ಪ ಅವರು ಕಿತ್ತುಸೆದಿದ್ದಾರೆ ಎಂದು ತಿಳಿದು ಬಂದಿದೆ..
ಈ ವಿಚಾರ ತಿಳಿದು ಸ್ಥಳಕ್ಕೆ ಬಂದ ದೇವರಾಜ್ ಹಾಗೂ ಪುಷ್ಪ ಅವರ ನಡುವೆ ತೀವ್ರ ವಾಗ್ವಾದ ನಡೆದಿದೆ. ನಡುರಸ್ತೆಯಲ್ಲೇ ಇಬ್ಬರೂ ಪರಸ್ಪರ ಗಂಭೀರ ಆರೋಪಗಳನ್ನು ಮಾಡಿದ್ದಾರೆ. “ನೀನು ಯಾವ ಜಾಗದ ದಾಖಲೆ ತಂದಿದ್ದೀಯಾ? ರೌಡಿಸಂ ಮಾಡಲು ಬಂದಿದ್ದೀಯಾ?” ಎಂದು ಪುಷ್ಪ ಅವರು ದೇವರಾಜ್ ಮೇಲೆ ಗರಂ ಆಗಿದ್ದಾರೆ ಎನ್ನಲಾಗಿದೆ. “ನಾನು ಇದೇ ಊರಿನ ಮಗಳು. ನನ್ನನ್ನು ಹೆದರಿಸಲು ಬರಬೇಡ. ಇದು ನಮ್ಮ ಜಾಗ. ನಾನು ಖರೀದಿ ಮಾಡಿದ್ದೇನೆ. ಕೋರ್ಟ್ ಆದೇಶ ಇದ್ದರೆ ನ್ಯಾಯಾಲಯದ ಮೂಲಕ ಬಾ” ಎಂದು ಪುಷ್ಪ ಅವರು ತಿಳಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ದೇವರಾಜ್ ಅವರು, “ಈ ಜಾಗ ನನ್ನದು. ನಾನು ಮೂಲ ಓನರ್. ನಿಮ್ಮ ಸೈಟ್ ನನ್ನ ಐದು ಗುಂಟೆ ಜಾಗದ ಒಳಗೆ ಬರುತ್ತದೆ. ಎಲ್ಲಾ ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸಿದ್ದೇನೆ. ನಿಮಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ನೀವು ಕೋರ್ಟ್‌ಗೆ ಹೋಗಿ” ಎಂದು ಹೇಳಿದ್ದಾರೆ. “ಆರು ವರ್ಷಗಳ ನಂತರ ಬಂದು ಈಗ ಸಮಸ್ಯೆ ಮಾಡುತ್ತಿದ್ದಾರೆ ಎನ್ನುವುದು ತಪ್ಪು. ನಾನು ಕಾನೂನಿನ ಪ್ರಕಾರವೇ ನಡೆದುಕೊಂಡಿದ್ದೇನೆ” ಎಂದು ದೇವರಾಜ್ ಹೇಳಿದ್ದಾರೆ.
ಪುಷ್ಪ ಅವರು ತಮ್ಮ ವಾದದಲ್ಲಿ, “ಸೈಟ್ ನನ್ನ ಹೆಸರಲ್ಲೇ ಇದೆ. ನಾನು ನಿಯಮಿತವಾಗಿ ಟ್ಯಾಕ್ಸ್ ಕಟ್ಟುತ್ತಿದ್ದೇನೆ. ಇಲ್ಲಿ ಯಾವುದೇ ಒತ್ತುವರಿ ನಡೆದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. “ನಾನು ಸೈಟ್ ಕ್ಲೀನ್ ಮಾಡುತ್ತಿದ್ದಾಗ ನೀನು ಎಲ್ಲಿಗೆ ಹೋಗಿದ್ದೆ? ಈಗ ಏಕೆ ಬಂದಿದ್ದೀಯ?” ಎಂದು ದೇವರಾಜ್ ಅವರನ್ನು ಪ್ರಶ್ನಿಸಿರುವುದಾಗಿ ತಿಳಿದುಬಂದಿದೆ.





