ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತ ನಟ ದರ್ಶನ್‌ಗೆ ಜೈಲಿನಲ್ಲಿ ಮೆತ್ತನೆಯ ಹಾಸಿಗೆ ಮತ್ತು ದಿಂಬು ಸೌಲಭ್ಯ ನೀಡಬೇಕೆಂದು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 25ರಂದು ತೀರ್ಪು ನೀಡಲಿರುವುದಾಗಿ 64ನೇ ಸಿಟಿ ಸಿವಿಲ್ ಕೋರ್ಟ್ ತಿಳಿಸಿದೆ.
ದರ್ಶನ್ ಸೇರಿದಂತೆ ಒಟ್ಟು 17 ಆರೋಪಿಗಳ ವಿರುದ್ಧ ಚಾರ್ಜ್ ಫ್ರೇಮ್ ಸಿದ್ಧತೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನ್ಯಾಯಾಲಯವು ಸೆಪ್ಟೆಂಬರ್ 25ರಂದು ಎಲ್ಲಾ ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸುವಂತೆ ಸೂಚನೆ ನೀಡಿದೆ. ಇದರೊಂದಿಗೆ ದರ್ಶನ್ ಅವರು ಸಲ್ಲಿಸಿರುವ ಹಾಸಿಗೆ ಮತ್ತು ದಿಂಬು ಸೌಲಭ್ಯಕ್ಕಾಗಿ ಅರ್ಜಿಯ ತೀರ್ಪು ಕೂಡ ಅಂದೇ ಬರಲಿದೆ.
ಪ್ರಕರಣದ ಹಿನ್ನೆಲೆ
ದರ್ಶನ್ ಅವರ ಆಪ್ತ ಗೆಳತಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಆರೋಪದ ಮೇಲೆ ರೇಣುಕಾಸ್ವಾಮಿಯನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿತ್ತು ಎಂಬ ಆರೋಪಗಳು ಕೇಳಿಬಂದಿವೆ. ಈ ಪ್ರಕರಣದಲ್ಲಿ ದರ್ಶನ್ ಅವರನ್ನು ಮುಖ್ಯ ಆರೋಪಿಯಾಗಿ ಬಂಧಿಸಲಾಗಿದ್ದು, ಅವರೊಂದಿಗೆ ಅವರ ಸಹಚರರು ಸೇರಿದಂತೆ 17 ಜನರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಪೊಲೀಸರು ಸಾಕ್ಷ್ಯಗಳನ್ನು ಸಂಗ್ರಹಿಸಿ, ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಇದೀಗ ಚಾರ್ಜ್ ಫ್ರೇಮ್ ಪ್ರಕ್ರಿಯೆ ಆರಂಭವಾಗಿದೆ.
ಸೆಪ್ಟೆಂಬರ್ 23ರಂದು 64ನೇ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ನಡೆದ ವಿಚಾರಣೆಯಲ್ಲಿ ದರ್ಶನ್ ಅವರ ಅರ್ಜಿಯ ಕುರಿತು ಚರ್ಚೆ ನಡೆಯಿತು. ದರ್ಶನ್ ಅವರು ಬಳ್ಳಾರಿ ಜೈಲಿಗೆ ವರ್ಗಾವಣೆ ಮತ್ತು ಹಾಸಿಗೆ, ದಿಂಬು ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಜೈಲು ಮ್ಯಾನುಯಲ್ ಪ್ರಕಾರ ಸೌಲಭ್ಯಗಳನ್ನು ನೀಡಬೇಕು ಎಂದು ಕೋರ್ಟ್ ಆದೇಶ ನೀಡಿದ್ದರೂ, ಅದು ಜಾರಿಯಾಗಿಲ್ಲ ಎಂದು ದರ್ಶನ್ ಪರ ವಕೀಲರು ವಾದಿಸಿದರು. ಇದಕ್ಕೆ ಸರ್ಕಾರಿ ವಕೀಲರು (ಎಸ್‌ಪಿಪಿ) ಪ್ರತಿವಾದ ಮಾಡಿದ್ದು, ಇಬ್ಬರ ನಡುವೆ ತೀವ್ರ ಚರ್ಚೆ ನಡೆಯಿತು. ಅಂತಿಮವಾಗಿ ಕೋರ್ಟ್ ಸೆಪ್ಟೆಂಬರ್ 25ಕ್ಕೆ ಆದೇಶ ಮುಂದೂಡಿದೆ. ಅಲ್ಲದೆ, 7 ಆರೋಪಿಗಳನ್ನು ನೇರವಾಗಿ ಕೋರ್ಟ್‌ಗೆ ಹಾಜರುಪಡಿಸುವಂತೆ ಸೂಚಿಸಿದೆ.