ಬೆಂಗಳೂರು: ಬಣ್ಣದ ಲೋಕದ ಮಿಂಚು, ಸಾವಿರಾರು ಅಭಿಮಾನಿಗಳ ಆರ್ಭಟ, ಕೋಟಿ ಕೋಟಿ ಹಣದ ಸುರಿಮಳೆ, ಮತ್ತು ಸ್ಯಾಂಡಲ್‌ವುಡ್‌ನ ‘ಸುಲ್ತಾನ್’ ಎಂಬ ಪಟ್ಟ. ಇದು ನಟ ದರ್ಶನ್ ಅವರ ಒಂದು ಕಾಲದ ಸಾಮ್ರಾಜ್ಯ. ಆದರೆ ವಿಧಿಯಾಟ ಮತ್ತು ಅಂದು ಮಾಡಿದ ಒಂದು ತಪ್ಪು ಹೆಜ್ಜೆ ಇಂದು ಅವರನ್ನು ಜೈಲಿನ ಕತ್ತಲ ಕೋಣೆಗೆ ತಳ್ಳಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್, ಇಂದು ಜೈಲು ವಾಸ ಆರಂಭಿಸಿ ಸರಿಯಾಗಿ ಒಂದು ವರ್ಷ (365 ದಿನಗಳು) ಪೂರೈಸಿದ್ದಾರೆ.
ಕಳೆದ ಮೂರು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಭದ್ರ ಕೋಟೆ ಕಟ್ಟಿಕೊಂಡಿದ್ದ ದರ್ಶನ್, ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದರು. ಆದರೆ, ಜೂನ್ 2024ರಲ್ಲಿ ನಡೆದ ಆ ಒಂದು ಘಟನೆ ಇಡೀ ಚಿತ್ರರಂಗವನ್ನೇ ನಡುಗಿಸಿದೆ. ಆಪ್ತ ಗೆಳತಿ ಪವಿತ್ರಾ ಗೌಡ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ಪದ ಬಳಸಿ ಕಿರುಕುಳ ನೀಡಿದ ಎಂಬ ಕಾರಣಕ್ಕೆ, ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಅಪಹರಿಸಿ ಹತ್ಯೆ ಮಾಡಿದ ಆರೋಪ ದರ್ಶನ್ ವಿರುದ್ದ ಕೇಳಿಬಂದಿದೆ.
2024ರ ಜೂನ್ 11ರಂದು ಮೈಸೂರಿನ ಫಾರ್ಮ್ ಹೌಸ್‌ನಲ್ಲಿ ಪೊಲೀಸರು ಅವರನ್ನು ಮೊದಲ ಬಾರಿಗೆ ಬಂಧಿಸಿದಾಗ ಅಭಿಮಾನಿಗಳು ಕಂಗಾಲಾಗಿದ್ದರು. ಆರಂಭದ 131 ದಿನಗಳನ್ನು ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಮತ್ತು ನಂತರ ಭದ್ರತೆಯ ದೃಷ್ಟಿಯಿಂದ ಬಳ್ಳಾರಿ ಜೈಲಿನಲ್ಲಿ ಕಳೆದರು. ಮಧ್ಯಂತರದಲ್ಲಿ ಅನಾರೋಗ್ಯದ ಕಾರಣ ನೀಡಿ ಹೈಕೋರ್ಟ್‌ನಿಂದ ಜಾಮೀನು ಪಡೆದು ಹೊರಬಂದರಾದರೂ, ಆ ನೆಮ್ಮದಿ ಹೆಚ್ಚು ಕಾಲ ಉಳಿಯಲಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ರದ್ದಾದ ಕಾರಣ, 2025ರ ಆಗಸ್ಟ್ 14ರಂದು ಅವರು ಮತ್ತೆ ಜೈಲು ಸೇರಬೇಕಾಯಿತು. ಅಂದಿನಿಂದ ಇಂದಿನವರೆಗೆ ಸತತ 226 ದಿನಗಳಿಂದ ದರ್ಶನ್ ಜೈಲಿನಲ್ಲೇ ಇದ್ದಾರೆ.
ಒಂದೆಡೆ ದರ್ಶನ್ ಜೈಲಿನಲ್ಲಿದ್ದರೆ, ಅವರ ನಟನೆಯ ಬಹುನಿರೀಕ್ಷಿತ ‘ಡೆವಿಲ್’ ಸಿನಿಮಾ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ. ಆದರೆ, ಈ ಯಶಸ್ಸನ್ನು ಸಂಭ್ರಮಿಸಲು ಚಿತ್ರದ ನಾಯಕನೇ ಜೈಲಿನ ಗೋಡೆಗಳ ಮಧ್ಯೆ ಬಂಧಿಯಾಗಿದ್ದಾರೆ. ಇದು ಅವರ ಅಭಿಮಾನಿಗಳಿಗೆ ನುಂಗಲಾರದ ತುತ್ತಾಗಿದೆ. ಶೂಟಿಂಗ್ ಸ್ಪಾಟ್‌ನಲ್ಲಿ ರಾಜನಂತೆ ಮೆರೆಯುತ್ತಿದ್ದ ನಟ, ಇಂದು ಜೈಲಿನ ಊಟ ಸವಿಯುತ್ತಾ ಕಾನೂನು ಹೋರಾಟದಲ್ಲಿ ಮುಳುಗಿರುವುದು ಕಾಲದ ಕ್ರೂರ ವ್ಯಂಗ್ಯ.
ರೇಣುಕಾಸ್ವಾಮಿ ಕೊಲೆ ನಡೆದು ಈಗ 20 ತಿಂಗಳುಗಳು ಕಳೆದಿವೆ. ತನಿಖೆ ಮುಗಿದು ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದರೂ, ಪ್ರಕರಣದ ಗಂಭೀರತೆಯಿಂದಾಗಿ ದರ್ಶನ್ ಅವರಿಗೆ ಬಿಡುಗಡೆಯ ಭಾಗ್ಯ ಇನ್ನೂ ದೊರೆತಿಲ್ಲ. ಸ್ಟಾರ್ ಪಟ್ಟದಲ್ಲಿದ್ದ ನಟನೊಬ್ಬ ಒಂದು ವರ್ಷದ ಕಾಲ ವನವಾಸ ಅನುಭವಿಸುತ್ತಿರುವುದು ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ದೊಡ್ಡ ಕಪ್ಪು ಚುಕ್ಕೆಯಾಗಿ ಉಳಿದಿದೆ.





