ನವದೆಹಲಿ, ಮಾರ್ಚ್ 23: ದೇಶದಲ್ಲಿ ಸೈಬರ್ ವಂಚನೆಗಳು ದಿನೇದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಹತ್ವದ ನಿರ್ಧಾರ ಕೈಗೊಂಡಿದೆ. ಏಪ್ರಿಲ್ 1, 2026 ರಿಂದ ಎಲ್ಲಾ ಆನ್‌ಲೈನ್ ವಹಿವಾಟುಗಳಿಗೆ ಟೂ-ಫ್ಯಾಕ್ಟರ್ ಅಥೆಂಟಿಕೇಶನ್ (Two-Factor Authentication) ಅನ್ನು ಕಡ್ಡಾಯಗೊಳಿಸಲಾಗಿದೆ. ಇದರೊಂದಿಗೆ ದೇಶದ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಅತಿದೊಡ್ಡ ಬದಲಾವಣೆಯಾಗಲಿದೆ. ಪ್ರತಿಯೊಬ್ಬ ಆನ್‌ಲೈನ್ ಪಾವತಿ ಬಳಕೆದಾರರ ಮೇಲೂ ಪರಿಣಾಮ ಬೀರಲಿರುವ ಈ ನಿಯಮಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳುವುದು ಅಗತ್ಯವಾಗಿದೆ.
ಟೂ-ಫ್ಯಾಕ್ಟರ್ ಅಥೆಂಟಿಕೇಶನ್ ಎಂದರೇನು?
ಟೂ-ಫ್ಯಾಕ್ಟರ್ ಅಥೆಂಟಿಕೇಶನ್ ಎಂದರೆ ಯಾವುದೇ ಡಿಜಿಟಲ್ ವಹಿವಾಟು ನಡೆಸಲು ಎರಡು ವಿಭಿನ್ನ ರೀತಿಯ ಧೃವೀಕರಣ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ಇದರಿಂದ ವಂಚನೆ ಮತ್ತು ಅನಧಿಕೃತ ವಹಿವಾಟುಗಳನ್ನು ತಡೆಗಟ್ಟಬಹುದಾಗಿದೆ.
ಎರಡು ಧೃವೀಕರಣ ವಿಧಾನಗಳು ಈ ಕೆಳಗಿನಂತಿರಬಹುದು.
-
ಮೊದಲನೆಯದು: ಪಾಸ್ವರ್ಡ್, ಪಿನ್, ಪಾಸ್ಫ್ರೇಸ್
-
ಎರಡನೆಯದು: ಹಾರ್ಡ್‌ವೇರ್ ಟೋಕನ್, ಸಾಫ್ಟ್‌ವೇರ್ ಆಧಾರಿತ ಟೋಕನ್, ಫಿಂಗರ್‌ಪ್ರಿಂಟ್, ಫೇಶಿಯಲ್ ರೆಕಗ್ನಿಷನ್, ಅಥವಾ ಒಟಿಪಿ
ಎರಡರಲ್ಲಿ ಒಂದು ಡೈನಾಮಿಕ್ (ಪ್ರತಿ ಬಾರಿ ಬದಲಾಗುವ) ಆಗಿರಬೇಕು ಮತ್ತು ಇನ್ನೊಂದನ್ನು ಪ್ರತ್ಯೇಕವಾಗಿ ವಿನ್ಯಾಸಗೊಳಿಸಬೇಕು ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.
ಏಪ್ರಿಲ್ 1 ರಿಂದ ಜಾರಿಗೆ ಬರುವ ಹೊಸ ನಿಯಮಗಳು:=
-
ಎಲ್ಲಾ ಡಿಜಿಟಲ್ ಪಾವತಿಗಳಿಗೆ ಕಡ್ಡಾಯ: ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಯುಪಿಐ ಸೇರಿದಂತೆ ಎಲ್ಲಾ ರೀತಿಯ ಆನ್‌ಲೈನ್ ವಹಿವಾಟುಗಳಿಗೆ ಟೂ-ಫ್ಯಾಕ್ಟರ್ ಅಥೆಂಟಿಕೇಶನ್ ಕಡ್ಡಾಯವಾಗಲಿದೆ.
-
ಬ್ಯಾಂಕುಗಳ ಜವಾಬ್ದಾರಿ: ಈ ನಿಯಮಗಳನ್ನು ಪಾಲಿಸದ ಕಾರಣ ವಂಚನೆ ಸಂಭವಿಸಿದಲ್ಲಿ, ಆ ನಷ್ಟವನ್ನು ಗ್ರಾಹಕರಿಗೆ ಬ್ಯಾಂಕುಗಳೇ ಭರಿಸಬೇಕಾಗುತ್ತದೆ. ಗ್ರಾಹಕರಿಗೆ ಸಂಪೂರ್ಣ ನಷ್ಟ ಪರಿಹಾರ ಪಾವತಿಸಬೇಕಾದ ಜವಾಬ್ದಾರಿ ಬ್ಯಾಂಕುಗಳ ಮೇಲಿರುತ್ತದೆ.
-
ರಿಸ್ಕ್ ಆಧಾರಿತ ವಹಿವಾಟುಗಳಿಗೆ ಪ್ರತ್ಯೇಕ ತಪಾಸಣೆ: ಅಪಾಯಕಾರಿ ಎಂದು ಗುರುತಿಸಲಾದ ವಹಿವಾಟುಗಳಿಗೆ ಹೆಚ್ಚುವರಿ ತಪಾಸಣಾ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಲಾಗಿದೆ.
-
ಅಕ್ಟೋಬರ್ 1 ರಿಂದ ಗಡಿ ರಹಿತ ವಹಿವಾಟುಗಳಿಗೂ ವಿಸ್ತರಣೆ: ಏಪ್ರಿಲ್ 1 ರಿಂದ ದೇಶದೊಳಗಿನ ವಹಿವಾಟುಗಳಿಗೆ ಈ ನಿಯಮ ಜಾರಿಯಾಗಲಿದೆ. ಅಕ್ಟೋಬರ್ 1, 2026 ರಿಂದ ಗಡಿ ರಹಿತ (ಕ್ರಾಸ್ ಬಾರ್ಡರ್) ವಹಿವಾಟುಗಳಿಗೂ ಈ ಅಥೆಂಟಿಕೇಶನ್ ಅಗತ್ಯವಾಗಲಿದೆ.
ಏಕೆ ಈ ನಿಯಮಗಳು?
ಕಳೆದ ಕೆಲವು ವರ್ಷಗಳಿಂದ ಯುಪಿಐ ಮತ್ತು ಇತರ ಡಿಜಿಟಲ್ ಪಾವತಿ ವ್ಯವಸ್ಥೆಗಳ ಬಳಕೆ ಅಪಾರವಾಗಿ ಹೆಚ್ಚಿದೆ. ಇದರೊಂದಿಗೆ ಸೈಬರ್ ವಂಚನೆಗಳು, ಫಿಶಿಂಗ್ ದಾಳಿಗಳು, ಸಿಮ್ ಸ್ವಾಪ್ ವಂಚನೆಗಳು ಮತ್ತು ಅನಧಿಕೃತ ವಹಿವಾಟುಗಳಲ್ಲೂ ಭಾರೀ ಏರಿಕೆ ಕಂಡುಬಂದಿದೆ. ಕೇವಲ ಒಟಿಪಿ ಆಧಾರಿತ ಭದ್ರತಾ ವ್ಯವಸ್ಥೆಯು ಸಾಕಾಗದೆ ಹೋಗಿದೆ. ಈ ಹಿನ್ನೆಲೆಯಲ್ಲಿ ಬಹುಸ್ತರದ ಭದ್ರತಾ ವ್ಯವಸ್ಥೆಯನ್ನು ಜಾರಿಗೊಳಿಸಲು ಆರ್‌ಬಿಐ ಈ ನಿರ್ಧಾರ ಕೈಗೊಂಡಿದೆ.
ಗ್ರಾಹಕರ ಮೇಲೆ ಪರಿಣಾಮ
ಹೊಸ ನಿಯಮಗಳು ಜಾರಿಗೆ ಬಂದ ನಂತರ, ಪ್ರತಿ ಆನ್‌ಲೈನ್ ವಹಿವಾಟು ನಡೆಸಲು ಸ್ವಲ್ಪ ಹೆಚ್ಚಿನ ಸಮಯ ಬೇಕಾಗಬಹುದು. ಆದರೆ ಇದರಿಂದ ಭದ್ರತಾ ಮಟ್ಟ ಗಣನೀಯವಾಗಿ ಹೆಚ್ಚಾಗಲಿದೆ. ವಂಚನೆ ಮತ್ತು ಅನಧಿಕೃತ ವಹಿವಾಟುಗಳಿಂದ ಗ್ರಾಹಕರ ಹಣ ಹೆಚ್ಚು ಸುರಕ್ಷಿತವಾಗಿರಲಿದೆ.
ಎಲ್ಲಾ ಹಣಕಾಸು ಸಂಸ್ಥೆಗಳು, ಬ್ಯಾಂಕುಗಳು, ಕಾರ್ಡ್ ನೆಟ್ವರ್ಕ್‌ಗಳು ಮತ್ತು ಫಿನ್ಟೆಕ್ ಕಂಪನಿಗಳು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಆರ್‌ಬಿಐ ಆದೇಶಿಸಿದೆ. ಹೊಸ ನಿಯಮಗಳು ಏಪ್ರಿಲ್ 1 ರಿಂದ ಜಾರಿಗೆ ಬರಲಿದ್ದು, ಬಳಕೆದಾರರು ತಮ್ಮ ಆನ್‌ಲೈನ್ ಪಾವತಿ ವ್ಯವಸ್ಥೆಗಳನ್ನು ಅದಕ್ಕೆ ಅನುಗುಣವಾಗಿ ಅಳವಡಿಸಿಕೊಳ್ಳಬೇಕಾಗುತ್ತದೆ.





