ನವದೆಹಲಿ, ನವೆಂಬರ್ 20: ಭಾರತದ 138 ಕೋಟಿಗೂ ಹೆಚ್ಚು ಜನರ ಗುರುತಿನ ಚೀಟಿಯಾಗಿರುವ ಆಧಾರ್ ಕಾರ್ಡ್ ಶೀಘ್ರದಲ್ಲೇ ಸಂಪೂರ್ಣ ರೂಪ ಬದಲಿಸಿಕೊಳ್ಳಲಿದೆ. ಆಧಾರ್ ಕಾರ್ಡ್ ದುರ್ಬಳಕೆಯನ್ನು ತಡೆಯಲು ಹಾಗೂ ವೈಯಕ್ತಿಕ ಮಾಹಿತಿಯ ಭದ್ರತೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ದೊಡ್ಡ ನಿರ್ಧಾರಕ್ಕೆ ಮುಂದಾಗಿದೆ. ಯುಐಡಿಎಐ (UIDAI) ಹೊಸ ರೀತಿಯ ಆಧಾರ್ ಕಾರ್ಡ್ ಸ್ವರೂಪವನ್ನು ಜಾರಿಗೆ ತರುವ ಕುರಿತು ಚಿಂತನೆ ನಡೆಸಿದ್ದು, ಶೀಘ್ರದಲ್ಲೇ ದೇಶಾದ್ಯಂತ ಹೊಸ ಮಾದರಿಯ ಆಧಾರ್ ಕಾರ್ಡ್ ವಿತರಣೆ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆ ಇದೆ.
ಈಗಿರುವ ಆಧಾರ್ ಕಾರ್ಡ್‌ನಲ್ಲಿ ಹೆಸರು, ವಿಳಾಸ, ಜನ್ಮದಿನಾಂಕ, ಆಧಾರ್ ಸಂಖ್ಯೆ ಸೇರಿದಂತೆ ಹಲವು ವೈಯಕ್ತಿಕ ಮಾಹಿತಿ ಕಾಣುತ್ತದೆ. ಇವೆಲ್ಲಾ ಮಾಹಿತಿಯನ್ನು ದುರುಪಯೋಗಿಸಿಕೊಳ್ಳುವ ಅನೇಕ ಪ್ರಕರಣಗಳ ಹಿನ್ನೆಲೆ ಸರ್ಕಾರ ಮತ್ತಷ್ಟು ಸುರಕ್ಷತಾ ಕ್ರಮಕ್ಕೆ ಮುಂದಾಗಿದೆ. ಹೊಸ ಕಾರ್ಡ್‌ನಲ್ಲಿ ಫೋಟೋ ಮತ್ತು ಕ್ಯುಆರ್ ಕೋಡ್ ಮಾತ್ರವೇ ಕಾಣಲಿದ್ದು, ಉಳಿದ ಎಲ್ಲ ಮಾಹಿತಿ UIDAI ಡಾಟಾಬೇಸ್‌ನಲ್ಲಿ ಮಾತ್ರ ಉಳಿಯಲಿದೆ.
ಬ್ಯಾಂಕ್ ವ್ಯವಹಾರಗಳು, ಹೋಟೆಲ್ ಬುಕ್ಕಿಂಗ್, ಸಿಮ್ ಕಾರ್ಡ್, ಹಣಕಾಸು ಸೇವೆಗಳು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಆಧಾರ್ ಕಾರ್ಡ್ ಗುರುತಿನ ದಾಖಲೆಯಾಗಿ ಬಳಸಲಾಗುತ್ತದೆ. ಇಂಥ ಸಂದರ್ಭಗಳಲ್ಲಿ ಕಾರ್ಡ್‌ನಲ್ಲಿರುವ ಹೆಸರು, ವಿಳಾಸ, ಆಧಾರ್ ಸಂಖ್ಯೆ ದುರುಪಯೋಗಕ್ಕೆ ಗುರಿಯಾಗುವ ಭೀತಿ ಇದೆ. ವೈಯಕ್ತಿಕ ಮಾಹಿತಿ ಸೋರಿಕೆ ಹಾಗೂ ಕಳ್ಳತನ ಸಮಸ್ಯೆಯನ್ನು ತಡೆಯಲು UIDAI ಸರಳ ಹಾಗೂ ಹೆಚ್ಚು ಸುರಕ್ಷಿತ ಪರಿಹಾರವನ್ನು ಹುಡುಕಿದೆ.
ಹೊಸ ಕಾರ್ಡ್‌ನಲ್ಲಿ ಹೆಸರು, ವಿಳಾಸ, ಜನ್ಮದಿನಾಂಕ, ಆಧಾರ್ ಸಂಖ್ಯೆ ಯಾವುದೂ ಕಾಣುವುದಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಡ್ ತೋರಿಸಿದಾಗ ವೈಯಕ್ತಿಕ ಮಾಹಿತಿ ಯಾರಿಗೂ ತಿಳಿಯುವುದಿಲ್ಲ. ಪ್ರತಿಷ್ಠಿತ ಸಂಸ್ಥೆಗಳು ಮಾತ್ರ UIDAI ಜಾರಿಗೆ ತರುವ ಆನ್‌ಲೈನ್ ವೆರಿಫಿಕೇಶನ್ ವ್ಯವಸ್ಥೆಯ ಮೂಲಕ ವ್ಯಕ್ತಿಯ ಮಾಹಿತಿಯನ್ನು ಪರಿಶೀಲಿಸಬಹುದು.
ಹೊಸದಾಗಿ ಹೇಗಿರಲಿದೆ ಆಧಾರ್ ಕಾರ್ಡ್?
ಹೊಸದಾಗಿ ಬಿಡುಗಡೆಗೊಳ್ಳಲಿರುವ ಕಾರ್ಡ್ ಬಹಳ ಸರಳವಾಗಿರಲಿದ್ದು, ವೈಯಕ್ತಿಕ ಫೋಟೋ ಮತ್ತು ಕ್ಯುಆರ್ ಕೋಡ್ ಮಾತ್ರವೇ ಮುದ್ರಿತವಾಗಿರುತ್ತದೆ.
-
ಕ್ಯುಆರ್ ಕೋಡ್‌ನಲ್ಲಿ ಆಧಾರ್ ಹೊಂದಿದವರ ಮೂಲ ಮಾಹಿತಿಯ ಡಿಜಿಟಲ್ ರೂಪ ಮಾತ್ರ ಸಂಗ್ರಹವಾಗಿರುತ್ತದೆ.
-
ಯಾವುದೇ ಸಂಸ್ಥೆ UIDAI ಅನುಮೋದಿತ ಸ್ಕ್ಯಾನರ್ ಮೂಲಕ ಈ ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ ಮಾತ್ರ ಮಾಹಿತಿ ಲಭ್ಯವಾಗುತ್ತದೆ.
-
ಇದರ ಮೂಲಕ ಮಾಹಿತಿ ಮುದ್ರಿತ ಕಾರ್ಡ್‌ನಲ್ಲಿ ಕಾಣಿಸದಿರುವುದರಿಂದ ದುರುಪಯೋಗದ ಸಾಧ್ಯತೆ ತುಂಬಾ ಕಡಿಮೆಯಾಗುತ್ತದೆ.
UIDAI ಪ್ರಕಾರ, ಡಿಸೆಂಬರ್‌ನಲ್ಲೇ ಹೊಸ ಸ್ವರೂಪದ ಆಧಾರ್ ಕಾರ್ಡ್ ವಿತರಣೆ ಪ್ರಕ್ರಿಯೆ ಆರಂಭಿಸಬಹುದಾಗಿದೆ ಎಂದು ವರದಿಗಳು ಸೂಚಿಸುತ್ತವೆ.
ಆಫ್‌ಲೈನ್ ವೆರಿಫಿಕೇಶನ್ ಗೆ ಬ್ರೇಕ್: ಕೇವಲ ಆನ್‌ಲೈನ್ ದೃಢೀಕರಣ
ಹೊಸ ಕಾರ್ಡ್ ಜಾರಿಗೆ ಬಂದ ಮೇಲೆ ಆಫ್‌ಲೈನ್ ಆಧಾರ್ ಪರೀಕ್ಷೆ (xerox, print copy ಇತ್ಯಾದಿ) ಅನಗತ್ಯವಾಗುತ್ತದೆ. ಈಗಿನಿಂದ ಯಾರೇ ಆದರೂ UIDAI ಅನುಮೋದಿತ ಆನ್‌ಲೈನ್ ವ್ಯವಸ್ಥೆ ಮೂಲಕ ಮಾತ್ರ ಆಧಾರ್ ಪರಿಶೀಲಿಸಬೇಕು. ಇದರಿಂದ ಅನಧಿಕೃತ ಸಂಸ್ಥೆಗಳ ಮೂಲಕ ಮಾಹಿತಿಯ ದುರುಪಯೋಗ ಸಾಧ್ಯತೆ ತಡೆಗಟ್ಟಬಹುದು. ಬ್ಯಾಂಕ್, ಫೈನಾನ್ಸ್ ಕಂಪನಿಗಳು, ಹೋಟೆಲ್‌ಗಳು ಮುಂತಾದ ಸಂಸ್ಥೆಗಳೊಂದಿಗೆ ಈ ಸಂಬಂಧ UIDAI ಸಮಾಲೋಚನೆ ನಡೆಸುತ್ತಿದೆ.
UIDAI ಹೊಸ ಆಧಾರ್ ಮಾದರಿಗಾಗಿ mAadhaar ಆಪ್‌ನ್ನು ಇನ್ನಷ್ಟು ಸುಧಾರಿಸಲಿದೆ. ಮನೆ ವಿಳಾಸ ಬದಲಾವಣೆ, ಮೊಬೈಲ್ ಫೋನ್ ಇಲ್ಲದ ಕುಟುಂಬ ಸದಸ್ಯರ ಆಧಾರ್ ನೋಂದಣಿ, ದಾಖಲೆ ಅಪ್‌ಲೋಡ್ ಮತ್ತು ಪರಿಶೀಲನೆ, ಅಪಾಯಿಂಟ್‌ಮೆಂಟ್ ಬುಕ್ಕಿಂಗ್, ಇತ್ಯಾದಿ ಸೇವೆಗಳನ್ನು ಬಳಸಲು ಈ ಆಪ್ ಬಹಳ ಉಪಯುಕ್ತವಾಗಲಿದೆ.





