ಬೆಂಗಳೂರು: ಕಿಡ್ನಿ ವೈಫಲ್ಯಕ್ಕೆ ತುತ್ತಾದ ರೋಗಿಗಳಿಗೆ ಆಸರೆಯಾಗಿರುವ, ಏಷ್ಯಾದ ಅತಿದೊಡ್ಡ ಡಯಾಲಿಸಿಸ್ ಸೇವಾ ಜಾಲವಾದ ‘ನೆಫ್ರೋಪ್ಲಸ್’ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭರ್ಜರಿ ಆರ್ಥಿಕ ಪ್ರಗತಿ ಸಾಧಿಸಿದೆ. ಜೂನ್ 30, 2026ಕ್ಕೆ ಅಂತ್ಯಗೊಂಡ ತ್ರೈಮಾಸಿಕ ವರದಿಯನ್ನು ಕಂಪನಿ ಪ್ರಕಟಿಸಿದ್ದು, ಆದಾಯ ಮತ್ತು ಲಾಭದಲ್ಲಿ ಭಾರೀ ಏರಿಕೆಯಾಗಿದೆ.
ಕಂಪನಿಯ ಒಟ್ಟು ಆದಾಯ 281.8 ಕೋಟಿ ರೂ.ಗೆ ತಲುಪಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 23.7ರಷ್ಟು ಏರಿಕೆ ಕಂಡಿದೆ. ಇದೇ ವೇಳೆ ಕಂಪನಿಯ ನಿವ್ವಳ ಲಾಭ ಕೂಡ 36.8 ಕೋಟಿ ರೂ.ಗೆ ಜಿಗಿದಿದ್ದು, ಬರೋಬ್ಬರಿ ಶೇ. 41.7ರಷ್ಟು ಹೆಚ್ಚಾಗಿದೆ. ಕಾರ್ಯಾಚರಣೆ ಲಾಭ (ಎಬಿಟ್ಡಾ) ಕೂಡ ಶೇ. 30.7ರಷ್ಟು ಏರಿಕೆಯಾಗಿದ್ದು 65.1 ಕೋಟಿ ರೂ.ಗೆ ತಲುಪಿದೆ.
10 ಲಕ್ಷಕ್ಕೂ ಅಧಿಕ ಡಯಾಲಿಸಿಸ್ ಚಿಕಿತ್ಸೆ
ಕೇವಲ 3 ತಿಂಗಳ ಅವಧಿಯಲ್ಲಿ 10 ಲಕ್ಷಕ್ಕೂ ಅಧಿಕ (10,31,084) ಡಯಾಲಿಸಿಸ್ ಚಿಕಿತ್ಸೆಗಳನ್ನು ಯಶಸ್ವಿಯಾಗಿ ನೀಡಲಾಗಿದೆ. ಈ ಮೂಲಕ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 13.3ರಷ್ಟು ಹೆಚ್ಚಿನ ಡಯಾಲಿಸಿಸ್ ಸೇವೆಗಳನ್ನು ನೀಡಲಾಗಿದೆ. ನೆಫ್ರೋಪ್ಲಸ್ ಕೇಂದ್ರಗಳಲ್ಲಿ ಡಯಾಲಿಸಿಸ್ ಪಡೆಯುತ್ತಿರುವ ರೋಗಿಗಳ ಸಂಖ್ಯೆ 38,262 ಕ್ಕೆ ಏರಿಕೆಯಾಗಿದ್ದು, ಪ್ರತಿ ಚಿಕಿತ್ಸೆಯಿಂದ ಬರುವ ಆದಾಯವು (ಆರ್ಪಿಟಿ) 2,733 ರೂ.ಗೆ ತಲುಪಿದೆ.
ಈ ಭರ್ಜರಿ ಸಾಧನೆಯ ಬಗ್ಗೆ ಮಾತನಾಡಿದ ನೆಫ್ರೋಪ್ಲಸ್ನ ಚೇರ್ಮನ್ ಮತ್ತು ಎಂಡಿ ವಿಕ್ರಮ್ ವುಪ್ಪಲ, “ಮಧುಮೇಹ ಮತ್ತು ರಕ್ತದೊತ್ತಡ ಹೆಚ್ಚಾಗುತ್ತಿರುವುದರಿಂದ ಡಯಾಲಿಸಿಸ್ ಸೇವೆಗಳ ಬೇಡಿಕೆಯೂ ಹೆಚ್ಚಾಗುತ್ತಿದೆ. ಪ್ರಸ್ತುತ ಭಾರತದಲ್ಲಿ ಶೇ. 21ರಷ್ಟು ಡಯಾಲಿಸಿಸ್ ಸೇವೆಗಳನ್ನು ಮಾತ್ರ ನಮ್ಮಂತಹ ಸಂಘಟಿತ ನೆಟ್ವರ್ಕ್ಗಳು ನೀಡುತ್ತಿವೆ. ಈ ಸಂಖ್ಯೆ 16 ವರ್ಷಗಳ ಹಿಂದೆ ಸೊನ್ನೆಯಾಗಿತ್ತು. ನಮ್ಮ ಗುಣಮಟ್ಟದ ಸೇವೆಯಿಂದಾಗಿ ನೆಫ್ರೋಪ್ಲಸ್ ಅತಿ ವೇಗವಾಗಿ ಬೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ಎರಡು ಮತ್ತು ಮೂರನೇ ಸ್ತರದ ನಗರಗಳಿಗೂ ಹಾಗೂ ಬೇರೆ ದೇಶಗಳಿಗೂ ನಮ್ಮ ಸೇವೆಯನ್ನು ವಿಸ್ತರಿಸಲಿದ್ದೇವೆ,” ಎಂದರು.
ಜಾಗತಿಕ ಮಟ್ಟದ ನರ್ಸಿಂಗ್ ಅಕಾಡೆಮಿ ಸ್ಥಾಪನೆ
ಇದೇ ಸಂದರ್ಭದಲ್ಲಿ ಗ್ರೂಪ್ ಸಿಇಒ ರೋಹಿತ್ ಸಿಂಗ್, “ನೆಫ್ರೋಪ್ಲಸ್ ಈಗ ವಿಶ್ವದ 5 ದೇಶಗಳಲ್ಲಿ 550 ಕ್ಲಿನಿಕ್ಗಳನ್ನು ಹೊಂದಿದೆ. ಫಿಲಿಪೈನ್ಸ್ನಲ್ಲಿ 50 ಕ್ಲಿನಿಕ್ಗಳನ್ನು ತೆರೆಯುವ ಮೂಲಕ ಹೊಸ ಮೈಲಿಗಲ್ಲು ತಲುಪಿದ್ದೇವೆ. ಜಗತ್ತಿನಾದ್ಯಂತ ಇರುವ ಡಯಾಲಿಸಿಸ್ ನರ್ಸ್ಗಳ ಕೊರತೆಯನ್ನು ನೀಗಿಸಲು, ನಾವು ಭಾರತ ಮತ್ತು ಫಿಲಿಪೈನ್ಸ್ನಲ್ಲಿ ‘ನೆಫ್ರೋಪ್ಲಸ್ ಇಂಟರ್ನ್ಯಾಷನಲ್ ಡಯಾಲಿಸಿಸ್ ಅಕಾಡೆಮಿ’ (ಎನ್ಐಡಿಎ) ಯನ್ನು ಪ್ರಾರಂಭಿಸಿದ್ದೇವೆ. ಇದು ಜಾಗತಿಕ ಮಟ್ಟದಲ್ಲಿ ಕೆಲಸ ಮಾಡಬಲ್ಲ ಪರಿಣಿತ ನರ್ಸ್ಗಳನ್ನು ತಯಾರು ಮಾಡಲಿದೆ,” ಎಂದರು.
“ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಸೇವೆ ನೀಡುವ ಮೂಲಕ ಭಾರತೀಯ ಮೂಲದ ನೆಫ್ರೋಪ್ಲಸ್ ಜಾಗತಿಕ ಮಟ್ಟದಲ್ಲಿ ಲಾಭದಾಯಕವಾಗಿ ಯಶಸ್ವಿಯಾಗುತ್ತಿದೆ. ಆದಾಯಕ್ಕಿಂತ ವೇಗವಾಗಿ ನಮ್ಮ ಲಾಭಾಂಶ ಬೆಳೆಯುತ್ತಿರುವುದು ಕಂಪನಿಯ ಬಲವನ್ನು ತೋರಿಸುತ್ತದೆ. ಬಂಡವಾಳವನ್ನು ಬಹಳ ಶಿಸ್ತಿನಿಂದ ಬಳಸುತ್ತಿದ್ದು, ದೀರ್ಘಕಾಲೀನ ಮೌಲ್ಯ ಸೃಷ್ಟಿಯತ್ತ ನಾವು ಗಮನಹರಿಸಿದ್ದೇವೆ,” ಎಂದು ಸಿಎಫ್ಒ ಪ್ರಶಾಂತ್ ಗೋಯೆಂಕಾ ಮಾಹಿತಿ ನೀಡಿದ್ದಾರೆ.
ನೆಫ್ರೋಪ್ಲಸ್ ಏಷ್ಯಾದ ಅತಿದೊಡ್ಡ ಡಯಾಲಿಸಿಸ್ ನೆಟ್ವರ್ಕ್ ಆಗಿದ್ದು, ಭಾರತ, ನೇಪಾಳ, ಫಿಲಿಪೈನ್ಸ್, ಉಜ್ಬೇಕಿಸ್ತಾನ್ ಮತ್ತು ಸೌದಿ ಅರೇಬಿಯಾದಾದ್ಯಂತ 550ಕ್ಕೂ ಹೆಚ್ಚು ಡಯಾಲಿಸಿಸ್ ಕೇಂದ್ರಗಳನ್ನು ಹೊಂದಿದೆ.





