ಬೆಂಗಳೂರು: ಜಾಗತಿಕ ಮಾರುಕಟ್ಟೆಯಲ್ಲಿನ ಅನಿರೀಕ್ಷಿತ ಬೆಳವಣಿಗೆಗಳಿಂದಾಗಿ ಕಳೆದ ಕೆಲವು ದಿನಗಳಿಂದ ಸತತವಾಗಿ ಕುಸಿಯುತ್ತಿದ್ದ ಚಿನ್ನದ ಬೆಲೆಗೆ ಇಂದು ಬ್ರೇಕ್ ಬಿದ್ದಿದೆ. ಮಾರ್ಚ್ ಆರಂಭದಿಂದ ಈವರೆಗೆ ಸುಮಾರು ಶೇ. 12 ರಿಂದ 17 ರಷ್ಟು ಕುಸಿತ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ದರಗಳು, ಬುಧವಾರದ ವಹಿವಾಟಿನಲ್ಲಿ ಭಾರಿ ಏರಿಕೆ ಕಾಣುವ ಮೂಲಕ ಹೂಡಿಕೆದಾರರಲ್ಲಿ ಹೊಸ ಸಂಚಲನ ಮೂಡಿಸಿವೆ.
ಮಾರುಕಟ್ಟೆ ತಜ್ಞರ ಪ್ರಕಾರ, ಇರಾನ್ ಮೇಲಿನ ದಾಳಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಸುಳಿವು ಹೂಡಿಕೆದಾರರ ಮೇಲೆ ಭಾರಿ ಪರಿಣಾಮ ಬೀರಿದೆ. ಯುದ್ಧದ ಭೀತಿಯ ನಡುವೆಯೂ ಆರ್ಥಿಕ ಸ್ಥಿರತೆಯ ನಿರೀಕ್ಷೆಯಲ್ಲಿ ಹೂಡಿಕೆದಾರರು ಮತ್ತೆ ಚಿನ್ನದತ್ತ ಆಕರ್ಷಿತರಾಗುತ್ತಿರುವುದು ಈ ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ.
ಇಂದಿನ ಚಿನ್ನದ ದರ ವಿವರ
ಭಾರತೀಯ ಮಾರುಕಟ್ಟೆಯಲ್ಲಿ ಇಂದು ಒಂದೇ ದಿನ 10 ಗ್ರಾಂ ಚಿನ್ನದ ಬೆಲೆಯಲ್ಲಿ 3,760 ರೂ. ಏರಿಕೆಯಾಗಿದೆ.
-
24 ಕ್ಯಾರೆಟ್ (ಶುದ್ಧ ಚಿನ್ನ): ಪ್ರತಿ ಗ್ರಾಂಗೆ ₹14,667 ತಲುಪಿದ್ದು, ನಿನ್ನೆಗಿಂತ ₹376 ಹೆಚ್ಚಾಗಿದೆ.
-
22 ಕ್ಯಾರೆಟ್ (ಆಭರಣ ಚಿನ್ನ): ಪ್ರತಿ ಗ್ರಾಂಗೆ ₹13,445 ದಾಖಲಾಗಿದ್ದು, ₹345 ರಷ್ಟು ಏರಿಕೆ ಕಂಡಿದೆ.
-
18 ಕ್ಯಾರೆಟ್ ಚಿನ್ನ: ಪ್ರತಿ ಗ್ರಾಂಗೆ ₹11,001 ಕ್ಕೆ ತಲುಪಿದೆ.
ಬೆಳ್ಳಿ ಬೆಲೆಯಲ್ಲೂ ಭಾರಿ ಜಿಗಿತ
ಚಿನ್ನದ ಹಾದಿಯಲ್ಲೇ ಸಾಗಿರುವ ಬೆಳ್ಳಿಯ ಬೆಲೆಯೂ ಇಂದು ಹೂಡಿಕೆದಾರರನ್ನು ಬೆಚ್ಚಿಬೀಳಿಸಿದೆ. ಒಂದೇ ದಿನದಲ್ಲಿ ಪ್ರತಿ ಕೆಜಿಗೆ ₹11,881 ರಷ್ಟು ಭಾರಿ ಏರಿಕೆ ಕಂಡ ಬೆಳ್ಳಿ, ಈಗ ₹2,36,338 ಕ್ಕೆ ತಲುಪಿದೆ. ಈ ಮೂಲಕ ಬೆಳ್ಳಿ ಬೆಲೆಯು 2.50 ಲಕ್ಷ ರೂಪಾಯಿಯ ಸಮೀಪಕ್ಕೆ ಧಾವಿಸುತ್ತಿದೆ.
ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ದರ (ಪ್ರತಿ ಗ್ರಾಂಗೆ)
ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇಂದಿನ ದರಗಳು ಬಹುತೇಕ ಸ್ಥಿರವಾಗಿದ್ದರೂ, ಚೆನ್ನೈನಲ್ಲಿ ಗರಿಷ್ಠ ಮಟ್ಟದಲ್ಲಿದೆ:
-
ಬೆಂಗಳೂರು, ಮುಂಬೈ, ಹೈದರಾಬಾದ್: ₹14,667
-
ಚೆನ್ನೈ: ₹14,837
-
ದೆಹಲಿ: ₹14,682
-
ಅಹಮದಾಬಾದ್: ₹14,672
ಕಳೆದ ಕೆಲವು ವಾರಗಳಿಂದ ಚಿನ್ನದ ದರವು ಕುಸಿತದ ಹಾದಿಯಲ್ಲಿದ್ದರೂ, ಇಂದಿನ ಈ ಪ್ರಬಲ ಚೇತರಿಕೆ ಮಾರುಕಟ್ಟೆಯಲ್ಲಿ ಮತ್ತೆ ಬಂಗಾರದ ಹವಾ ಶುರುವಾಗುವ ಮುನ್ಸೂಚನೆ ನೀಡಿದೆ.





