ನವದೆಹಲಿ: ಕಳೆದ ಕೆಲವು ದಿನಗಳಿಂದ ಗಗನಕ್ಕೇರುತ್ತಿದ್ದ ಚಿನ್ನ ಮತ್ತು ಬೆಳ್ಳಿಯ ಬೆಲೆ ಇದೀಗ ದಿಢೀರ್ ಕುಸಿತ ಕಂಡಿದೆ. ಸೋಮವಾರದ ವಹಿವಾಟಿನಲ್ಲಿ ಚಿನ್ನದ ಬೆಲೆ ಬರೋಬ್ಬರಿ ₹9,050 ರಷ್ಟು ಇಳಿಕೆಯಾಗಿದೆ ಇದರಿಂದ ಗ್ರಾಹಕರು ಸಂತಸ ವ್ಯಕ್ತಪಡಿಸಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕೆಲವು ಮಹತ್ವದ ಬದಲಾವಣೆಗಳು ಈ ಬೆಲೆ ಇಳಿಕೆಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ.
ಇಂದಿನ ಲೇಟೆಸ್ಟ್ ದರ ಎಷ್ಟು ?
ಅಖಿಲ ಭಾರತ ಸರಾಫ್ ಅಸೋಸಿಯೇಷನ್ ನೀಡಿರುವ ಮಾಹಿತಿಯ ಪ್ರಕಾರ, ಚಿನ್ನ (99.9% ಪರಿಶುದ್ಧತೆ) 10 ಗ್ರಾಂ ಚಿನ್ನದ ದರವು ₹9,050 ರಷ್ಟು ಭಾರಿ ಕಡಿತಗೊಂಡು, ಈಗ ₹1,43,600 ಕ್ಕೆ ತಲುಪಿದೆ. ಇನ್ನೂ ಕೆ.ಜಿ ಬೆಳ್ಳಿಯ ದರದಲ್ಲಿ ₹10,500 ರಷ್ಟು ಇಳಿಕೆಯಾಗಿದ್ದು, ಪ್ರಸ್ತುತ ₹2.30 ಲಕ್ಷಕ್ಕೆ ಮಾರಾಟವಾಗುತ್ತಿದೆ.
ಬೆಲೆ ಇಳಿಕೆಗೆ ಕಾರಣವೇನು ?
ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ಜಾಗತಿಕ ಮಾರುಕಟ್ಟೆಯ ಮೇಲೆ ಗಾಢ ಪ್ರಭಾವ ಬೀರಿದೆ. ಎಚ್ಡಿಎಫ್ಸಿ ಸೆಕ್ಯುರಿಟೀಸ್ನ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ ಅವರ ಪ್ರಕಾರ, ಸಂಘರ್ಷದ ಹಿನ್ನೆಲೆಯಲ್ಲಿ ಕಚ್ಚಾ ತೈಲ ದರ ಏರಿಕೆಯಾಗಿದೆ. ಇದು ಜಾಗತಿಕವಾಗಿ ಹಣದುಬ್ಬರ ಹೆಚ್ಚಾಗುವ ಭೀತಿ ಮೂಡಿಸಿದೆ.
ಈ ಆರ್ಥಿಕ ಅನಿಶ್ಚಿತತೆಯ ನಡುವೆ ಅಮೆರಿಕದ ಡಾಲರ್ ಮೌಲ್ಯ ಮತ್ತು ಬಾಂಡ್ ಗಳಿಕೆ (Bond Yield) ಹೆಚ್ಚಾಗಿದೆ. ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ ಚಿನ್ನದ ಬದಲು ಡಾಲರ್ ಮತ್ತು ಬಾಂಡ್ಗಳತ್ತ ಮುಖ ಮಾಡುತ್ತಿರುವುದರಿಂದ, ಚಿನ್ನ ಮತ್ತು ಬೆಳ್ಳಿ ಮೇಲಿನ ಬೇಡಿಕೆ ಕಡಿಮೆಯಾಗಿ ಬೆಲೆ ಕುಸಿತ ಕಂಡಿದೆ.
ಖರೀದಿದಾರರಿಗೆ ಸುವರ್ಣಾವಕಾಶ
ಮದುವೆ ಹಾಗೂ ಹಬ್ಬದ ಸೀಸನ್ ಆರಂಭವಾಗುತ್ತಿರುವ ಈ ಸಮಯದಲ್ಲಿ ಚಿನ್ನದ ದರ ಇಷ್ಟು ದೊಡ್ಡ ಮಟ್ಟದಲ್ಲಿ ಇಳಿಕೆಯಾಗಿರುವುದು ಸಾಮಾನ್ಯ ಜನರಿಗೆ ವರದಾನವಾಗಿದೆ. ಮುಂದಿನ ದಿನಗಳಲ್ಲಿ ಮಾರುಕಟ್ಟೆಯ ಏರಿಳಿತದ ಮೇಲೆ ಬೆಲೆಗಳು ಮತ್ತಷ್ಟು ಬದಲಾಗುವ ಸಾಧ್ಯತೆ ಇದೆ ಎಂದು ಚಿನಿವಾರ ಪೇಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.





