ಆಪಲ್ ತನ್ನ ಬಹುನಿರೀಕ್ಷಿತ iOS 27 ಅಪ್ಡೇಟ್ ಅನ್ನು ಜಾಗತಿಕವಾಗಿ ಬಿಡುಗಡೆ ಮಾಡಿದೆ. ಭಾರತದ ಐಫೋನ್ ಬಳಕೆದಾರರೂ ಈ ಹೊಸ ಅಪ್ಡೇಟ್ ಪಡೆಯಬಹುದಾಗಿದೆ. ಹೊಸ ಆವೃತ್ತಿಯಲ್ಲಿ ಮುಂದಿನ ಪೀಳಿಗೆಯ Apple Intelligence, ಹೊಸ Siri AI, ವೇಗದ ಕಾರ್ಯಕ್ಷಮತೆ ಸೇರಿದಂತೆ ಹಲವು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಲಾಗಿದೆ.
ಹೊಸ Siri AI
iOS 27ರ ಪ್ರಮುಖ ಆಕರ್ಷಣೆ Siri AI. ಇದು ಹಿಂದಿನ Siriಗಿಂತ ಹೆಚ್ಚು ಸಂಭಾಷಣಾತ್ಮಕವಾಗಿದ್ದು, ಬಳಕೆದಾರರ ವೈಯಕ್ತಿಕ ಸಂದರ್ಭವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಮೆಸೇಜ್ಗಳು, ಇಮೇಲ್ಗಳು, ಫೋಟೋಗಳು ಸೇರಿದಂತೆ ವಿವಿಧ ಮಾಹಿತಿಯನ್ನು ಅರ್ಥಮಾಡಿಕೊಂಡು ಬಳಕೆದಾರರಿಗೆ ಬೇಕಾದ ಮಾಹಿತಿಯನ್ನು ತ್ವರಿತವಾಗಿ ಹುಡುಕಲು ಇದು ನೆರವಾಗಲಿದೆ.
ಸ್ಕ್ರೀನ್ನಲ್ಲಿ ಕಾಣುತ್ತಿರುವ ವಿಷಯದ ಕುರಿತು Siriಗೆ ಪ್ರಶ್ನೆ ಕೇಳಬಹುದು. ಕ್ಯಾಮೆರಾ ಮೂಲಕ ಸುತ್ತಮುತ್ತಲಿನ ವಸ್ತುಗಳ ಬಗ್ಗೆ ಮಾಹಿತಿ ಪಡೆಯುವುದರ ಜೊತೆಗೆ, ಬಿಲ್ ಹಂಚಿಕೆ, ಪಾವತಿ ಅಥವಾ ವಾಲೆಟ್ಗೆ ಪಾಸ್ ಸೇರಿಸುವಂತಹ ಕಾರ್ಯಗಳಿಗೂ ಸಹಾಯ ಮಾಡಲಿದೆ. ಆರಂಭದಲ್ಲಿ Siri AI ಇಂಗ್ಲಿಷ್ನಲ್ಲಿ ಬೀಟಾ ರೂಪದಲ್ಲಿ ಲಭ್ಯವಿದ್ದು, ಇತರೆ ಭಾಷೆಗಳ ಬೆಂಬಲ ಹಂತ ಹಂತವಾಗಿ ವಿಸ್ತರಿಸಲಿದೆ.
Apple Intelligenceನಲ್ಲಿ ಹೊಸ ಫೀಚರ್ಸ್
Photos ಆಪ್ನಲ್ಲಿ ಹೊಸ ಎಡಿಟಿಂಗ್ ಪರಿಕರಗಳು, Spatial Reframing ಮತ್ತು ಸುಧಾರಿತ Clean Up ಟೂಲ್ ಲಭ್ಯವಾಗಿವೆ. Image Playground ಮೂಲಕ ವಿವಿಧ ಶೈಲಿಗಳಲ್ಲಿ ಚಿತ್ರಗಳನ್ನು ರಚಿಸಬಹುದು. AI ಮೂಲಕ ರಚಿಸಲಾದ ಅಥವಾ ಎಡಿಟ್ ಮಾಡಲಾದ ಚಿತ್ರಗಳನ್ನು ಗುರುತಿಸಲು SynthID ಮಾನದಂಡಕ್ಕೂ ಬೆಂಬಲ ನೀಡಲಾಗುತ್ತಿದೆ.
Safariಯಲ್ಲಿ ಟ್ಯಾಬ್ಗಳನ್ನು ಸ್ವಯಂಚಾಲಿತವಾಗಿ ಸಂಘಟಿಸುವುದು, ಉತ್ಪನ್ನದ ಬೆಲೆ ಇಳಿಕೆ ಅಥವಾ ಮರುಪೂರಣದಂತಹ ಬದಲಾವಣೆಗಳ ಕುರಿತು ಮಾಹಿತಿ ನೀಡುವುದು ಸೇರಿದಂತೆ ಹಲವು ಹೊಸ ಸೌಲಭ್ಯಗಳಿವೆ.
iOS 27ನಲ್ಲಿ ಕಾರ್ಯಕ್ಷಮತೆಯ ಮೇಲೂ ಗಮನಹರಿಸಲಾಗಿದೆ. ಐಫೋನ್ ಮತ್ತು ಐಪ್ಯಾಡ್ನಲ್ಲಿ ಆ್ಯಪ್ಗಳು ವೇಗವಾಗಿ ತೆರೆಯಲಿದ್ದು, Photos ಲೋಡಿಂಗ್ ಮತ್ತು AirDrop ವರ್ಗಾವಣೆ ಕೂಡ ಸುಧಾರಿಸಲಾಗಿದೆ. ಐಪ್ಯಾಡ್ನಲ್ಲಿ ಫೈಲ್ಗಳನ್ನು ಬ್ರೌಸ್ ಮಾಡುವುದು ಹಾಗೂ USB ಡ್ರೈವ್ಗೆ ವರ್ಗಾಯಿಸುವ ವೇಗದಲ್ಲೂ ಗಮನಾರ್ಹ ಸುಧಾರಣೆ ತರಲಾಗಿದೆ.
ಇನ್ನಷ್ಟು ಹೊಸ ಸೌಲಭ್ಯಗಳು
iCloud Shared Albumsನಲ್ಲಿ ಪೂರ್ಣ ರೆಸಲ್ಯೂಶನ್ ಫೋಟೋ ಮತ್ತು ವಿಡಿಯೋ ಹಂಚಿಕೆ, Health ಆಪ್ನಲ್ಲಿ Cycle Tracking ಸುಧಾರಣೆ, AirPodsಗೆ Custom EQ, Apple Mapsನಲ್ಲಿ ಸುಧಾರಿತ Flyover, Apple Watchನಲ್ಲಿ ಹೊಸ Smart Stack ಸಲಹೆಗಳು ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ.
iOS 27 ಡೌನ್ಲೋಡ್ ಮಾಡುವುದು ಹೇಗೆ?
ಅಪ್ಡೇಟ್ ಮಾಡುವ ಮೊದಲು Wi-Fi ಸಂಪರ್ಕ ಹಾಗೂ ಸಾಕಷ್ಟು ಬ್ಯಾಟರಿ ಇರುವುದನ್ನು ಖಚಿತಪಡಿಸಿಕೊಳ್ಳಿ. ಸಾಧ್ಯವಾದರೆ iCloud ಬ್ಯಾಕಪ್ ತೆಗೆದುಕೊಳ್ಳುವುದು ಉತ್ತಮ.
Settings → General → Software Updateಗೆ ತೆರಳಿ iOS 27 ಕಾಣಿಸಿಕೊಂಡರೆ Download and Install ಆಯ್ಕೆ ಮಾಡಬೇಕು. ಪಾಸ್ಕೋಡ್ ನಮೂದಿಸಿದ ಬಳಿಕ ಅಪ್ಡೇಟ್ ಪ್ರಕ್ರಿಯೆ ಆರಂಭವಾಗುತ್ತದೆ. Mac ಮೂಲಕವೂ Finder ಬಳಸಿ ಐಫೋನ್ಗೆ iOS 27 ಅಪ್ಡೇಟ್ ಮಾಡಬಹುದು.
ಆದರೆ ಎಲ್ಲಾ iOS 27 ವೈಶಿಷ್ಟ್ಯಗಳು ಪ್ರತಿಯೊಂದು ಐಫೋನ್ ಮಾದರಿ, ಪ್ರದೇಶ ಅಥವಾ ಭಾಷೆಯಲ್ಲಿ ಲಭ್ಯವಿರುವುದಿಲ್ಲ. ವಿಶೇಷವಾಗಿ Apple Intelligence ಮತ್ತು Siri AIಗೆ ಹೊಂದಾಣಿಕೆಯ ಸಾಧನ ಅಗತ್ಯವಿರುತ್ತದೆ.





