ಇಷ್ಟು ದಿನ ಡಿಬಾಸ್ ಕಥೆ ಆಯ್ತು. ಈಗ ಬಿಗ್‌ಬಾಸ್ ಕಥೆ ಶುರುವಾಗಿದೆ. ಯೆಸ್.. ಡಿಬಾಸ್‌ನಂತೆ ಬಿಗ್‌ಬಾಸ್‌ಗೂ ಕಾನೂನು ಕಂಟಕ ಎದುರಾಗಿದೆ. ವೆಲ್ಸ್ ಗ್ರೂಪ್ ಮಾಡಿದ ತಪ್ಪಿಗೆ ಸೂಪರ್ ಸ್ಟಾರ್ ಸುದೀಪ್ ಶೋಗೆ ಬಹುದೊಡ್ಡ ಹೊಡೆತ ಬಿದ್ದಿದೆ. ಬಿಗ್‌ಬಾಸ್ ಮನೆಗೆ ಬೀಗ ಜಡಿದಿದ್ದು, ಶೂಟಿಂಗ್ ಸ್ಟಾಪ್ ಆಗಿದೆ. ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಅನ್ನುವಂತಾಗಿರೋ ಈ ಪ್ರಕರಣಕ್ಕೆ ಕನ್ನಡಿಗರು, ಬಿಗ್‌ಬಾಸ್ ಫ್ಯಾನ್ಸ್ ಜೊತೆ ಕಿಚ್ಚನ ಡೈಹಾರ್ಡ್ ಫ್ಯಾನ್ಸ್ ಕೂಡ ಬೇಸರಗೊಂಡಿದ್ದಾರೆ. ಇಷ್ಟಕ್ಕೂ ಯಾರು ಈ ಜಾಲಿವುಡ್ ಮಾಲೀಕ..? ಅವ್ರ ಹಿನ್ನೆಲೆ ಏನು ಅಂತೀರಾ..? ಇಲ್ಲಿದೆ ಪಿನ್ ಟು ಪಿನ್ ಡಿಟೈಲ್ಸ್ ನೋಡಿ.
ಅದ್ಯಾಕೋ ಬಾಸ್ ಅನ್ನೋ ಟೈಟಲ್‌ಗೂ ಕಾನೂನಿಗೂ ಅವಿನಾಭಾವ ಸಂಬಂಧ ಅನಿಸ್ತಿದೆ. ಯಾಕಂದ್ರೆ ಇಷ್ಟು ದಿನ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪ ಎದುರಿಸುತ್ತಿರೋ ಡಿಬಾಸ್ ದರ್ಶನ್ ಕಥೆ ಆಯ್ತು. ಈಗ ಬಿಗ್‌ಬಾಸ್ ಸೀಸನ್-12ರ ಬಿಗ್ ಮನೆ ಇರೋ ಜಾಲಿವುಡ್‌ಗೂ ಕಾನೂನು ಕಂಟಕ ಎದುರಾಗಿದೆ. ಬಿಡದಿಯಲ್ಲಿರೋ ಜಾಲಿವುಡ್‌ಗೆ ಪೊಲ್ಯೂಷನ್ ಕಂಟ್ರೋಲ್ ಬೋರ್ಡ್ ನೋಟಿಸ್ ನೀಡಿ ಬೀಗ ಜಡಿದಿದೆ.
ಇಷ್ಟು ದಿನ ಡಿಬಾಸ್ ಕಥೆ ಆಯ್ತು.. ಈಗ ಬಿಗ್‌ಬಾಸ್ ಕಥೆ
ಬಾಸ್ ಹೆಸರಿಗೇ ವಿಘ್ನ..? ಬಿಗ್ ಮನೆಗೆ ಸರಿ ಇಲ್ವಾ ವಾಸ್ತು?
ಹೌದು.. ಮೊನ್ನೆ ಅಂದ್ರೆ ಸೆಪ್ಟೆಂಬರ್ 28ರಂದು ಶುರುವಾದ ಬಿಗ್‌ಬಾಸ್ ಸೀಸನ್-12 ಶುರುವಾಗಿ 12 ದಿನ ಕೂಡ ಆಗಿಲ್ಲ. ಆಗ್ಲೇ ಕಾನೂನು ಕಂಟಕ ಎದುರಾಗಿದೆ. ಈ ಬಾರಿ ಯಾರೋ ಕಂಟಸ್ಟೆಂಟ್‌ಗೆ ಅಲ್ಲ, ಇಡೀ ಬಿಗ್‌ಬಾಸ್ ಶೋಗೆ ಹೊಡೆತ ಬಿದ್ದಿದೆ. ಮೊದಲ ವಾರದಲ್ಲೇ ಕಿಚ್ಚನ ಪಂಚಾಯ್ತಿಯಲ್ಲಿ ಇಬ್ಬರು ಎಲಿಮಿನೇಟ್ ಆಗಿದ್ರು. ಆದ್ರೀಗ ಅಲ್ಲಿದ್ದ 17 ಮಂದಿ ಸ್ಪರ್ಧಿಗಳು ಕೂಡ ಬಿಗ್ ಮನೆಯಿಂದ ಹೊರಬರುವಂತಾಗಿದೆ.
ಈ ಎಲ್ಲಾ ಬೆಳವಣಿಗೆಗಳಿಗೆ ಕಾರಣ ಬಿಗ್ ಬಾಸ್ ಮನೆ ಇರೋ ಅಂತಹ ಜಾಲಿವುಡ್ ಸ್ಟುಡಿಯೋಸ್. ಹೌದು.. ಜಾಲಿವುಡ್‌ನಿಂದ ಹೊರಬರುವ ತ್ಯಾಜ್ಯ ನೀರಿಗೆ ಸಂಸ್ಕರಣಾ ಘಟಕ ಇಲ್ಲದಿರೋದು, ಅಲ್ಲಿಂದ ಹೊರಬರ್ತಿರೋ ಕಲುಷಿತ ನೀರು ಪರಿಸರ ಹಾನಿ ಮಾಡ್ತಿದೆ ಅನ್ನೋದು ಇದಕ್ಕೆಲ್ಲಾ ಕಾರಣ ಆಗಿದೆ. ಅದೇ ಕಾರಣದಿಂದ ತಹಶೀಲ್ದಾರ್ ಜಾಲಿವುಡ್ ಮಾಲೀಕರಿಗೆ ನೋಟಿಸ್ ನೀಡಿದ್ದಾರೆ. ಅಲ್ಲದೆ ಬೆಸ್ಕಾಂ ಹಾಗೂ ರಾಮನಗರ ಡಿಸಿಗೂ ನೋಟಿಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ಅಧಿಕಾರಿಗಳು ತೆರಳಿ, ಪವರ್ ಕಟ್ ಮಾಡಿ, ಅಲ್ಲಿದ್ದ ಎಲ್ಲರನ್ನ ಹೊರಕ್ಕೆ ಕಳಿಸಿ, ಇಡೀ ಜಾಲಿವುಡ್ ಸ್ಟುಡಿಯೋಗೆ ಬೀಗ ಜಡಿದು, ಸೀಲ್ ಡೌನ್ ಮಾಡಿದೆ.
ನಿಜ ಆಯ್ತಾ ರಕ್ಷಿತಾ ಶೆಟ್ಟಿ ಮಾತು.. ಎಲ್ಲರೂ ಎಲಿಮಿನೇಟ್
10ನೇ ದಿನಕ್ಕೆ ಬಿಗ್ ಬಾಸ್ ಬಂದ್.. ಆತಂಕದಲ್ಲಿ ಸ್ಪರ್ಧಿಗಳು
ಯೆಸ್.. ಈ ಬಾರಿ ಕಂಟೆಸ್ಟೆಂಟ್‌ಗಳಲ್ಲಿ ಒಬ್ಬರಾದ ರಕ್ಷಿತಾ ಶೆಟ್ಟಿಯನ್ನ ಕಿಚ್ಚ ಸುದೀಪ್ ಅವರು ನೀವು ಯಾರನ್ನ ಎಲಿಮಿನೇಟ್ ಮಾಡಲು ಬಯಸ್ತೀರಾ ಎಂದಾಗ, ನಾ ಎಲ್ಲರನ್ನ ಮಾಡ್ತೀನಿ ಅಂದಿದ್ರು. ಆಕೆಯ ಮಾತು ಅಕ್ಷರಶಃ ನಿಜವಾಗಿದೆ. ಆಕೆ ಸಮೇತ ಎಲ್ಲರೂ ಬಿಗ್ ಮನೆಯಿಂದ ಹೊರಬಂದಿದ್ದಾರೆ. ಜಾಲಿವುಡ್ ಹತ್ತಿರದಲ್ಲೇ ಇರೋ ಈಗಲ್ಟನ್ ರೆಸಾರ್ಟ್ ಹೋಟೆಲ್‌ಗೆ ಶಿಫ್ಟ್ ಆಗಿದ್ದಾರೆ ಈ ಬಾರಿಯ 17 ಮಂದಿ ಕಂಟೆಸ್ಟೆಂಟ್ಸ್.
ಅಂದಹಾಗೆ ಮಾಜಿ ಬಿಗ್‌ಬಾಸ್ ಕಂಟೆಸ್ಟೆಂಟ್ ಹಾಗೂ ಖ್ಯಾತ ಜ್ಯೋತಿಷಿಗಳು ಕೂಡ ಆಗಿರೋ ಆರ್ಯವರ್ಧನ್ ಗುರೂಜಿ ಹೇಳುವಂತೆ ಈ ಬಾರಿಯ ಬಿಗ್‌ಬಾಸ್ ಮನೆಗೆ ವಾಸ್ತುವೇ ಸರಿಯಿಲ್ಲ. ಜೊತೆಗೆ ಈ ಬಾರಿಯ ಸೀಸನ್ ಶುರು ಮಾಡಿದ ಸಮಯ ಕೂಡ ಸರಿ ಇರಲಿಲ್ಲವಂತೆ. ಅವೆರಡೂ ಕಾರಣಗಳಿಂದ ಈ ರೀತಿಯ ದೊಡ್ಡ ವಿಘ್ನ ಎದುರಾಗಿದೆ ಎಂದಿದ್ದಾರೆ.
ಬಿಗ್ ಮನೆ ಇರೋ ವೆಲ್ಸ್ ಗ್ರೂಪ್ ಮಾಲೀಕರ ಹಿನ್ನೆಲೆ ಗೊತ್ತಾ ?
ದುನಿಯಾ ವಿಜಯ್‌ಗೂ ಚಿತ್ರ ನಿರ್ಮಾಣ ಮಾಡ್ತಿರೋ ಗಣೇಶ್!
ಈ ಬಾರಿಯ ಬಿಗ್‌ಬಾಸ್ ಶೋ ಕೂಡ ಕಲರ್ಸ್ ವಾಹಿನಿಯಿಂದಲೇ ಆಯೋಜನೆ ಆಗಿದೆ. ಆದ್ರೆ ಆ ಬಿಗ್ ಮನೆಯಿರೋ ಬಿಡದಿಯ ಜಾಲಿವುಡ್ ಅಮ್ಯೂಸ್‌ಮೆಂಟ್ ಪಾರ್ಕ್‌ನ ಒಡೆಯ ಮಾತ್ರ ವೆಲ್ಸ್ ಗ್ರೂಪ್ ಮಾಲೀಕ ಐಸಿರಿ ಗಣೇಶ್. ಅಂದಹಾಗೆ ಈತ ಯಾರು..? ಇವರ ಹಿನ್ನೆಲೆ ಏನು ಅಂತ ನೋಡೋದಾದ್ರೆ.. ಐಸಿರಿ ಗಣೇಶ್ ತಮಿಳುನಾಡು ಮೂಲದ ನಟ, ನಿರ್ಮಾಪಕರು. ಅಷ್ಟೇ ಅಲ್ಲ, ಬಹುದೊಡ್ಡ ಶಿಕ್ಷಣ ಸಂಸ್ಥೆಗಳನ್ನ ನಡೆಸ್ತಿರೋ ಬ್ಯುಸಿನೆಸ್‌ಮ್ಯಾನ್ ಕೂಡ ಹೌದು.
ಮಾಜಿ ರಾಷ್ಟ್ರಪತಿ ದಿವಂಗತ ಡಾ ಎಪಿಜೆ ಅಬ್ದುಲ್ ಕಲಾಂ, ತಮಿಳುನಾಡಿ ಮಾಜಿ ಸಿಎಂ ದಿವಂಗತ ಕರುಣಾನಿಧಿ ಸೇರಿದಂತೆ ಸೂಪರ್ ಸ್ಟಾರ್ ರಜನೀಕಾಂತ್, ಕಮಲ್ ಹಾಸನ್, ಪ್ರಭುದೇವ, ನಯನತಾರಾ, ಕಾರ್ತಿ, ಅನಿರುದ್ದ್ ರವಿಚಂದರ್, ಧನುಷ್, ಶರತ್ ಕುಮಾರ್, ವಿಕ್ರಮ್, ಗೌತಮ್ ವಾಸುದೇವ ಮೆನನ್, ಎಆರ್ ರೆಹಮಾನ್ ಹೀಗೆ ಸಾಕಷ್ಟು ಮಂದಿ ಕಲಾವಿದರು ಹಾಗೂ ತಂತ್ರಜ್ಞರ ಜೊತೆ ಒಡನಾಟ ಇರೋ ವ್ಯಕ್ತಿ ಈ ವೆಲ್ಸ್ ಗ್ರೂಪ್‌ನ ಐಸಿರಿ ಗಣೇಶ್. ಅಷ್ಟೇ ಯಾಕೆ ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಗಣೇಶ್‌ಗೆ ಆಪ್ತರು.
ತಮಿಳುನಾಡು ಮೂಲದ ಜಾಲಿವುಡ್ ಒಡೆಯ ಬಹುದೊಡ್ಡ ಕುಳ
ನಟ, ನಿರ್ಮಾಪಕರೂ ಹೌದು.. ಶೈಕ್ಷಣಿಕ ವಲಯದಲ್ಲೂ ಛಾಪು..!
ಎಲ್ಲಕ್ಕಿಂತ ಇಂಟರೆಸ್ಟಿಂಗ್ ವಿಷಯ ಏನಪ್ಪಾಂದ್ರೆ, ಸದ್ಯ ನಮ್ಮ ದುನಿಯಾ ವಿಜಯ್ ಹಾಗೂ ಗರುಡ ರಾಮ್ ನಟಿಸ್ತಿರೋ ತಮಿಳಿನ ಮೂಕುತಿ ಅಮ್ಮನ್-2 ಚಿತ್ರದ ನಿರ್ಮಾಪಕರು ಇದೇ ಗಣೇಶ್. ಹೌದು.. ನಟ, ನಿರ್ದೇಶಕರಾಗಿ ಕಮಾಲ್ ಮಾಡ್ತಿರೋ ಕನ್ನಡದ ಹೆಮ್ಮೆಯ ಸ್ಟಾರ್ ದುನಿಯಾ ವಿಜಯ್ ಸದ್ಯ ನಯನತಾರಾ ನಟನೆಯ ಮೂಕುತಿ ಅಮ್ಮನ್-2 ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅದ್ರ ಮುಹೂರ್ತ ಕಾರ್ಯಕ್ರಮದ ವಿಡಿಯೋ ಝಲಕ್ ಕೂಡ ಇಲ್ಲಿ ನೋಡಬಹುದು.
ಇಷ್ಟೆಲ್ಲಾ ಹಣ, ಆಸ್ತಿ, ಅಂತಸ್ತು ಮಾಡಿರೋ ವೆಲ್ಸ್ ಗ್ರೂಪ್ ಮಾಲೀಕ ಗಣೇಶ್, ಹೀಗೆ ಪೂರ್ವಾಪರಗಳಿಲ್ಲದೆ, ರೂಲ್ಸ್‌ನ ಬ್ರೇಕ್ ಮಾಡಿರೋದು ನಿಜಕ್ಕೂ ಅಚ್ಚರಿ ತಂದಿದೆ. ಇಲ್ಲಿ ಹಣಕ್ಕಿಂತ ಹೆಚ್ಚಾಗಿ ಪ್ರತಿಷ್ಠೆಗೆ ಬಿದ್ದು ನಮ್ಮ ಕರ್ನಾಟಕ ಸರ್ಕಾರವನ್ನು ಹಾಗೂ ಕನ್ನಡಪರ ಹೋರಾಟಗಾರರನ್ನ ಎದುರು ಹಾಕಿಕೊಂಡಂತಿದೆ ಐಸಿರಿ ಗಣೇಶ್. ಸದ್ಯ ಅವರು ಮಾಡಿದ ತಪ್ಪಿಗೆ ಅಲ್ಲಿ ಕೆಲಸ ಮಾಡ್ತಿದ್ದ ಬಿಗ್ ಬಾಸ್ ಮನೆಯ ಕಾರ್ಮಿಕರೆಲ್ಲಾ ಬೀದಿಗೆ ಬಂದಂತಾಗಿದೆ. ಬಹುದೊಡ್ಡ ಪಾಪ್ಯುಲರ್ ಶೋ ಸ್ಥಗಿತಗೊಂಡಿದೆ. ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಅನ್ನುವಂತೆ. ಗಣೇಶ್ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ ಬಿಗ್‌ಬಾಸ್ ಶೋ ಶಿಕ್ಷೆ ಅನುಭವಿಸುವಂತಾಗಿದೆ.
ಇಷ್ಟಕ್ಕೂ ಜಾಲಿವುಡ್ ಲಾಂಚ್ ಮಾಡಿದ್ದೇ ಡಿಸಿಎಂ ಡಿಕೆಶಿ
ಡಿಕೆಶಿಗೆ ಸಾಥ್ ನೀಡಿದ್ರು ಕರುನಾಡ ಚಕ್ರವರ್ತಿ ಡಾ. ಶಿವಣ್ಣ
ಬಿಗ್‌ಬಾಸ್ ಶೋ ಬಂದ್ ಸ್ಟಾಪ್ ಆಗೋಕೆ, ಜಾಲಿವುಡ್ ಸ್ಟುಡಿಯೋಗೆ ಬೀಗ ಬೀಳೋಕೆ ಪ್ರಮುಖ ಕಾರಣ ಡಿಸಿಎಂ ಡಿಕೆ ಶಿವಕುಮಾರ್ ಅನ್ನೋ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ದಟ್ಟವಾಗಿ ಕೇಳಿಬರ್ತಿವೆ. ಆದ್ರೆ ಜಾಲಿವುಡ್ ಸ್ಟುಡಿಯೋಸ್‌ನ ಲಾಂಚ್ ಮಾಡಿದ್ದೇ ಡಿಸಿಎಂ ಡಿಕೆ ಶಿವಕುಮಾರ್ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ. ಅದಕ್ಕೆ ಕರುನಾಡ ಚಕ್ರವರ್ತಿ ಡಾ ಶಿವರಾಜ್‌ಕುಮಾರ್ ಕೂಡ ಸಾಕ್ಷಿ ಆಗಿದ್ರು. ಹೀಗಿದ್ದಾಗ ಅವರೇ ಉದ್ಘಾಟಿಸಿದ್ದ ಜಾಲಿವುಡ್‌ನ ಅವ್ರೇ ಬಂದ್ ಮಾಡಿಸೋಕೆ ಸಾಧ್ಯವೇ..? ನೀವೇ ಊಹಿಸಿ.
ಈ ಎಲ್ಲಾ ಬೆಳವಣಿಗೆಗೆಳ ಮಧ್ಯೆ ನಟ್ಟು ಬೋಲ್ಟ್ ಸ್ಟಾರ್ ಡಿಕೆಶಿ ಅಂತ ವ್ಯಂಗ್ಯವಾಗಿ ಪೋಸ್ಟ್ ಹಾಕಿದೆ. ಯಾಕಂದ್ರೆ ಈ ಹಿಂದೆ ಚಿತ್ರರಂಗದವರ ನಟ್ಟು ಬೋಲ್ಟ್ ಟೈಟ್ ಮಾಡ್ತೀನಿ ಅಂದಿದ್ರು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್. ಆದ್ರೆ ಅವರು ಹಾಗೆ ಹೇಳುವವರಲ್ಲ. ಅದಕ್ಕೆ ಕಾರಣ ಸಾಧು ಕೋಕಿಲಾ. ಅವರೇ ಹೇಳಿಸಿ ಹೀಗೆ ಮಾಡಿಸಿರೋದು ಅಂತ ಸುದೀಪ್ ಕೂಡ ಆ ಬಗ್ಗೆ ಒಮ್ಮೆ ಮಾತನಾಡಿದ್ರು. ಅದೀಗ ಕೊಂಕಣ ಸುತ್ತಿ ಬಂದು ಮತ್ತೆ ಡಿಕೆಶಿ, ಸಾಧು ಕೋಕಿಲಾ ಹತ್ತಿರವೇ ಬಂದಿದೆ.