ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಅಂತಿಮ ಹಂತಕ್ಕೆ ಕಾಲಿಟ್ಟಿರುವ ಬಿಗ್ ಬಾಸ್ ಮನೆಯಲ್ಲಿ ಸಂಭ್ರಮದ ವಾತಾವರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಫಿನಾಲೆಯ ಸಂಭ್ರಮದ ನಡುವೆ ಮಿಡ್ ವೀಕ್ ಎಲಿಮಿನೇಶನ್ (Mid Week Elimination) ಕೂಡ ವೀಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಇದರ ಜೊತೆಗೆ ಈ ವಾರದ ವಿಶೇಷ ಅಂದರೆ, ಅಭಿಮಾನಿಗಳೇ ನೇರವಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವುದು.
ಅಭಿಮಾನಿಗಳನ್ನು ಎದುರು ನೋಡಿದ ಕ್ಷಣದಿಂದಲೇ ಸ್ಪರ್ಧಿಗಳ ಮುಖದಲ್ಲಿ ಖುಷಿ, ಉತ್ಸಾಹ ಹಾಗೂ ಆತ್ಮವಿಶ್ವಾಸ ಕಾಣಿಸಿತ್ತು. ತಮ್ಮನ್ನು ಬೆಂಬಲಿಸುತ್ತಿರುವ ಫ್ಯಾನ್ಸ್ ಮುಂದೆ ಸ್ಪರ್ಧಿಗಳು ವೋಟ್‌ಗೆ ಮನವಿ ಮಾಡುತ್ತಾ, ತಮ್ಮ ಹೋರಾಟ, ಗತ್ತು ಹಾಗೂ ತಾಕತ್ತಿನ ಬಗ್ಗೆ ಮನಬಿಚ್ಚಿ ಮಾತನಾಡಿದರು.
ಹೊಸ ಪ್ರೋಮೋದಲ್ಲಿ ಹೈಲೈಟ್ ಆದ ಧ್ರುವಂತ್ ಅಬ್ಬರ
ಬಿಡುಗಡೆಯಾದ ಹೊಸ ಪ್ರೋಮೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. “ಗೆಲುವು-ಸೋಲು ಸಂಪೂರ್ಣವಾಗಿ ಅಭಿಮಾನಿಗಳ ಕೈಯಲ್ಲಿದೆ” ಎಂದು ಬಿಗ್ ಬಾಸ್ ಘೋಷಿಸಿದ ಕ್ಷಣದಿಂದಲೇ ಸ್ಪರ್ಧಿಗಳ ಮಾತುಗಳು ಇನ್ನಷ್ಟು ತೀಕ್ಷ್ಣವಾಗಿವೆ.
ಅದರಲ್ಲೂ ಧ್ರುವಂತ್ ನೀಡಿದ ಹೇಳಿಕೆ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. “ನನ್ನ ವ್ಯಕ್ತಿತ್ವದ ಮೇಲೆ ಪ್ರಶ್ನೆ ಬಂದಾಗ ಯಾರೇ ಆಗಿರಲಿ, ನಾನು ಯಾರನ್ನೂ ಬಿಡಲ್ಲ. ಅಷ್ಟೂ ಜನರನ್ನು ನಾನು ಮಟ್ಟ ಹಾಕಿದ್ದೀನಿ” ಎಂದು ಧ್ರುವಂತ್ ಹೇಳಿದ ಡೈಲಾಗ್ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿದೆ.
ಧನುಷ್, ಅಶ್ವಿನಿ ಹಾಗೂ ಕಾವ್ಯ ಮಾತುಗಳಿಗೆ ಶಬ್ಬಾಸ್
ಧನುಷ್ ತಮ್ಮ ಮಾತಿನ ಶೈಲಿಯಿಂದ ಅಭಿಮಾನಿಗಳ ಮನ ಗೆದ್ದರು. “ನಾನು ಎಷ್ಟು ಕಷ್ಟಪಟ್ಟಿದ್ದೀನಿ ಅಂತ ಹೇಳಿಕೊಳ್ಳಲ್ಲ. ಒಬ್ಬರು ಬೆಳಿಬೇಕು ಅಂದ್ರೆ ಅವರು ಅವರೇ ಕಷ್ಟ ಪಡಬೇಕು” ಎಂದು ಹೇಳಿದರು ಧನುಷ್. “ನೀವೆಲ್ಲ ನನಗೆ ಸ್ಟಾರ್‌ಗಳು” ಎಂದು ಹೇಳುವ ಮೂಲಕ ಫ್ಯಾನ್ಸ್ ನ ಮನ ಗೆದ್ದರು.
ಇನ್ನು ಕಾವ್ಯ ಅವರು ಅಭಿಮಾನಿಗಳನ್ನು ನೋಡಿದ ಸಂತಸವನ್ನು ವ್ಯಕ್ತಪಡಿಸಿದರು. “ಫ್ಯಾನ್ಸ್ ಎದುರು ಬಂದಾಗ ಖುಷಿ ಡಬಲ್ ಆಗುತ್ತದೆ” ಎಂದು ಹೇಳಿ ನಗುವಿನ ಮೂಲಕ ಗಮನ ಸೆಳೆದರು.
ಅಶ್ವಿನಿ ಅವರು ತಮ್ಮೊಳಗಿನ ‘ಫೈರ್’ ಬಗ್ಗೆ ಮಾತನಾಡುತ್ತಾ, “ಯಾವ ಬಿರುದೂ ಮುಖ್ಯವಲ್ಲ. ನಮ್ಮೊಳಗೆ ಒಂದು ಬೆಂಕಿ ಇದ್ದರೆ ಏನಾದರೂ ಸಾಧಿಸಬಹುದು. ನಾನು ಬಿಗ್ ಬಾಸ್ ಬ್ರ್ಯಾಂಡ್ – ಸೀಸನ್ 12” ಎಂದು ಹೇಳಿದರು.
ಟೈಟಲ್ ಆಟ: ಸ್ಪರ್ಧಿಗಳಿಗೆ ಅಭಿಮಾನಿಗಳು ಕೊಟ್ಟ ಬಿರುದು
ಈ ವಾರದ ಮತ್ತೊಂದು ವಿಶೇಷ ಅಂದರೆ, ಸ್ಪರ್ಧಿಗಳು ತಮಗೆ ಯಾವ ಬಿರುದು ಬೇಕು ಎಂದು ಆಯ್ಕೆ ಮಾಡಿಕೊಂಡುದು.
-
ಗಿಲ್ಲಿ- “ಸಕಲ ಕಲಾ ವಲ್ಲಭ, ಎಲ್ಲ ಆಟ ಬಲ್ಲವ”
-
ಧ್ರುವಂತ್ – “ಡ್ಯಾಶಿಂಗ್ ಧ್ರುವಂತ್”
-
ಅಶ್ವಿನಿ- “ಸೀಕ್ರೆಟ್ ರೂಂ ಹೀರೋ” (ಸಲಹೆ)
-
ಧನುಷ್- “ಸೀಕ್ರೆಟ್ ರೂಂ ಜೀರೋ” (ರಕ್ಷಿತಾ ವ್ಯಂಗ್ಯ)
ಇದರ ನಡುವೆ ಗಿಲ್ಲಿ ಅಭಿಮಾನಿಗಳು “ಗಿಲ್ಲಿ ಪ್ರೋಮೋ ಎಲ್ಲಿ?” ಎಂದು ಕಮೆಂಟ್ ಮಾಡುತ್ತಾ, ಆದಷ್ಟು ಬೇಗ ಪ್ರೋಮೋ ಬಿಡುಗಡೆ ಮಾಡುವಂತೆ ಕಲರ್ಸ್ ಕನ್ನಡಕ್ಕೆ ರಿಕ್ವೆಸ್ಟ್ ಮಾಡುತ್ತಿದ್ದಾರೆ.
ಮಿಡ್ ವೀಕ್ ಎಲಿಮಿನೇಶನ್: ಯಾರು ಹೊರಗೆ?
ಒಟ್ಟಾರೆ, ಅಭಿಮಾನಿಗಳ ಎಂಟ್ರಿ, ಪ್ರೋಮೋಗಳು ಹಾಗೂ ಸ್ಪರ್ಧಿಗಳ ಆತ್ಮವಿಶ್ವಾಸದ ಮಾತುಗಳು ಬಿಗ್ ಬಾಸ್ ಸೀಸನ್ 12 ಅನ್ನು ಮತ್ತಷ್ಟು ರೋಚಕವಾಗಿಸಿದೆ. ಮಿಡ್ ವೀಕ್ ಎಲಿಮಿನೇಶನ್‌ನಲ್ಲಿ ಯಾರು ಹೊರ ಹೋಗುತ್ತಾರೆ? ಯಾರು ಫಿನಾಲೆಗೆ ಹೆಜ್ಜೆ ಇಡುತ್ತಾರೆ? ಎಂಬ ಕುತೂಹಲ ವೀಕ್ಷಕರಲ್ಲಿ ಹೆಚ್ಚಾಗಿದೆ.





