ಬಿಗ್‌ಬಾಸ್ ಕನ್ನಡದ 12ನೇ ಸೀಸನ್ ರೋಚಕ ತಿರುವುಗಳೊಂದಿಗೆ ಮುಂದುವರಿಯುತ್ತಿದೆ. ಆದರೆ, ಈ ಬಾರಿ ಸ್ಪರ್ಧಿಗಳ ವರ್ತನೆಯಿಂದ ಕಿಚ್ಚ ಸುದೀಪ್ ಕೋಪಗೊಂಡ ಘಟನೆ ಗಮನ ಸೆಳೆದಿದೆ. 12 ಸೀಸನ್‌ಗಳಲ್ಲಿ ಸುದೀಪ್ ಒತ್ತಾಯದಿಂದ ಮನೆಯ ಬಾಗಿಲು ತೆರೆಸಿದ್ದು ಕೇವಲ ಎರಡು ಬಾರಿ ಮಾತ್ರ ಎಂದು ಅವರೇ ಹೇಳಿಕೊಂಡಿದ್ದಾರೆ. ಈ ಸೀಸನ್‌ನ ಎರಡನೇ ವಾರದಲ್ಲಿ ಸುದೀಪ್ ಮನೆಯ ಬಾಗಿಲು ತೆರೆಸಿ, ಸ್ಪರ್ಧಿಗಳಿಗೆ ತೀವ್ರ ಎಚ್ಚರಿಕೆ ನೀಡಿದ್ದಾರೆ.
ವಾರಾಂತ್ಯದ ಪಂಚಾಯಿತಿಯನ್ನು ಸುದೀಪ್ ತಮಾಷೆಯ ರೀತಿಯಲ್ಲಿ ಆರಂಭಿಸಿದರಾದರೂ, ಕಳೆದ ವಾರದ ಅಸುರ ಟಾಸ್ಕ್‌ನ ಬಗ್ಗೆ ವಿಚಾರಣೆ ಶುರುವಾದಾಗ ವಾತಾವರಣ ಗಂಭೀರವಾಯಿತು. ಕಾಕ್‌ರೂಚ್ ಸುಧಿಗೆ ನೀಡಲಾಗಿದ್ದ ಅಸುರ ಟಾಸ್ಕ್ ಕಷ್ಟಕರವಾಗಿತ್ತು ಎಂದು ಅವರು ಹೇಳಿದರು. ಮನೆಯ ಸದಸ್ಯರು ನಿಜವಾದ ಅಸುರರಂತೆ ವರ್ತಿಸಿದರು. ದೆವ್ವ-ಭೂತ ಬಂದರೂ ಇವರ ಜೊತೆ ಇರಲಾರದು. ಒಂದೇ ದಿನಕ್ಕೆ ಸುಸ್ತಾಗಿ ಟಾಸ್ಕ್ ಬಿಟ್ಟೆ, ಎಂದು ಸುಧಿ ತಮಾಷೆಯಾಗಿ ಹೇಳಿದರು. ಇತರ ಸ್ಪರ್ಧಿಗಳೂ ಅಸುರ, ಟಾಸ್ಕ್‌ನಲ್ಲಿ ಜೋಕರ್‌ನಂತೆ ವರ್ತಿಸಿದೆವು ಎಂದು ತಮಾಷೆ ಮಾಡಿದರು.
ಈ ಮಾತುಗಳಿಂದ ಸುದೀಪ್‌ಗೆ ಸಿಟ್ಟು ತಲೆಗೇರಿತು. ನಿಮಗೆ ಶೋನ ಗಂಭೀರತೆಯೇ ಅರ್ಥವಾಗಿಲ್ಲ. ಟಾಸ್ಕ್ ಮಾಡಲು ಆಗದವರು, ಶೋ ಅರ್ಥವಾಗದವರು, ಕಮ್ಯಾಂಡ್ ತೆಗೆದುಕೊಳ್ಳಲು ಬಾರದವರು, ಮನೆಯ ನೆನಪು ಕಾಡುವವರು ಈಗಲೇ ಮನೆ ಬಿಟ್ಟು ಹೊರಡಿ ಎಂದು ಕಿಡಿಕಾರಿದರು. ಅವರು ಬಿಗ್‌ಬಾಸ್ ಮನೆಯ ಬಾಗಿಲು ತೆರೆಸಿದರಾದರೂ, ಯಾರೂ ಹೊರಗೆ ಹೋಗಲು ಇಚ್ಛಿಸಲಿಲ್ಲ. ನಿಮ್ಮಲ್ಲಿ ಗಂಭೀರತೆ ಇಲ್ಲ, ಶೋನ ಬಗ್ಗೆ ಭಯ ಇಲ್ಲ, ಕೋಟ್ಯಂತರ ಜನರಿಗೆ ಗೌರವ ಇಲ್ಲ. ಶೋಗೆ ಸರಿಯಾದ ಕೊಡುಗೆ ನೀಡದಿದ್ದರೆ ಇರೋದೇನು ಪ್ರಯೋಜನ? ಎಂದು ಸುದೀಪ್ ಪ್ರಶ್ನಿಸಿದರು.
ಸುದೀಪ್ ಮುಂದುವರಿಯುತ್ತಾ, ಈ ಶೋ ಸರಾಗವಾಗಿ ನಡೆಯಲು ಎಷ್ಟೋ ಜನ ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ. ಅವರ ಶ್ರಮಕ್ಕೆ ಗೌರವ ಬೇಡವೇ ? ನಿಮ್ಮ ಕುಟುಂಬಗಳಿಗಾಗಿ ನಾವು ಹೊರಗೆ ಹೋರಾಡುತ್ತಿದ್ದೇವೆ, ಇದಕ್ಕೆ ಗೌರವವಿಲ್ಲವೇ? ಎಂದು ಕೇಳಿದರು.
ಬಳಿಕ, ಸುದೀಪ್ ಧನುಶ್, ಧ್ರುವ, ಮಾಳು, ಸ್ಪಂದನ, ಚಂದ್ರಪ್ರಭ, ಜಾನ್ವಿ ಇತರರನ್ನು ಉದ್ದೇಶಿಸಿ, ನಿಮ್ಮ ವ್ಯಕ್ತಿತ್ವ ಎಲ್ಲಿ? ನಿಮ್ಮ ಧ್ವನಿ, ಕ್ರಿಯಾಶೀಲತೆ ಎಲ್ಲಿ? ನೀವೆಲ್ಲ ಗುಂಪಿನಲ್ಲಿ ಕಳೆದುಹೋಗಿದ್ದೀರಿ. ಬಿಗ್‌ಬಾಸ್‌ಗೆ ಬರುವಾಗ ಏನು ಗುರಿಯಿಟ್ಟುಕೊಂಡಿದ್ದಿರಿ? ನಿಮ್ಮ ಕುಟುಂಬಕ್ಕೆ ಏನು ಹೇಳಿದ್ದಿರಿ? ಸ್ವತಃ ನೀವೇನು ಆಲೋಚಿಸಿದ್ದಿರಿ? ಎಂದು ಪ್ರಶ್ನಿಸಿ, ಛಲ ತುಂಬಿದರು. ಸ್ಪರ್ಧಿಗಳು ತಾವು ಇನ್ನು ಮುಂದೆ ಪೂರ್ಣ ಶಕ್ತಿಯಿಂದ ಆಟ ಆಡುವುದಾಗಿ ಭರವಸೆ ನೀಡಿದರು.





