ಬಿಗ್ ಬಾಸ್ ಕನ್ನಡ ಸೀಸನ್ 12 ಭರ್ಜರಿಯಾಗಿ ಆರಂಭವಾಗಿದೆ. ಸೆಪ್ಟೆಂಬರ್ 28ರಂದು ಆರಂಭಗೊಂಡ ಈ ಶೋನಲ್ಲಿ ಒಟ್ಟು 19 ಸ್ಪರ್ಧಿಗಳು ಮನೆಯೊಳಗೆ ಕಾಲಿಟ್ಟರು. ಆದರೆ, ಆರಂಭದಲ್ಲೇ ಬಿಗ್ ಬಾಸ್ ದೊಡ್ಡ ಟ್ವಿಸ್ಟ್ ನೀಡಿದ್ದಾರೆ. ಮೊದಲ ದಿನವೇ ಒಬ್ಬ ಸ್ಪರ್ಧಿಯನ್ನು ಎಲಿಮಿನೇಟ್ ಮಾಡಿ ಎಲ್ಲರಿಗೂ ಆಘಾತ ನೀಡಿದ್ದಾರೆ. ತುಳುನಾಡಿನ ಜನಪ್ರಿಯ ಯೂಟ್ಯೂಬರ್ ರಕ್ಷಿತಾ ಶೆಟ್ಟಿ ಅವರಿಗೆ ಗೇಟ್ ಪಾಸ್ ಸಿಕ್ಕಿದೆ. ಬಂದ ದಾರಿಯಲ್ಲೇ ವಾಪಸ್ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಶೋನ ಆರಂಭದಲ್ಲಿ ಸ್ಪರ್ಧಿಗಳನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಲಾಯಿತು. 6 ಸ್ಪರ್ಧಿಗಳು ಒಂಟಿಗಳಾಗಿ (ಸಿಂಗಲ್ಸ್), 5 ಸ್ಪರ್ಧಿಗಳು ಜಂಟಿಗಳಾಗಿ (ಪೇರ್ಸ್) ಮತ್ತು 3 ಸ್ಪರ್ಧಿಗಳು ಅತಂತ್ರರಾಗಿ (ವೈಲ್ಡ್ ಕಾರ್ಡ್ ಎಂಟ್ರಿ) ಮನೆಗೆ ಪ್ರವೇಶಿಸಿದರು. ರಕ್ಷಿತಾ ಶೆಟ್ಟಿ, ಮಾಳು ನಿಪನಾಳ ಮತ್ತು ಸ್ಪಂದನಾ ಅವರು ಅತಂತ್ರ ಸ್ಥಿತಿಯಲ್ಲಿದ್ದರು. ಈ ಮೂವರಲ್ಲಿ ಇಬ್ಬರನ್ನು ಮಾತ್ರ ಉಳಿಸಿಕೊಳ್ಳಬೇಕು, ಒಬ್ಬರನ್ನು ಹೊರಗೆ ಕಳುಹಿಸಬೇಕು ಎಂಬ ನಿಯಮ ಬಿಗ್ ಬಾಸ್ ಹೇರಿದರು. ಈ ನಿರ್ಧಾರದ ಅಧಿಕಾರವನ್ನು 6 ಒಂಟಿಗಳಿಗೆ ನೀಡಲಾಯಿತು. ಇದು ಶೋಗೆ ಹೊಸ ರೂಪ ನೀಡಿತ್ತು ಮತ್ತು ಸ್ಪರ್ಧಿಗಳ ನಡುವೆ ಆರಂಭದಲ್ಲೇ ಟೆನ್ಷನ್ ಸೃಷ್ಟಿಸಿತು.
ರಕ್ಷಿತಾ ಶೆಟ್ಟಿ ಅವರು ತುಳುನಾಡಿನ ಹೆಮ್ಮೆಯ ಯೂಟ್ಯೂಬರ್. ಅವರ ವಿಡಿಯೋಗಳು ಹಾಸ್ಯ, ಸಾಮಾಜಿಕ ಸಂದೇಶಗಳು ಮತ್ತು ತುಳು ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಮುಂಬೈನಲ್ಲಿ ಬೆಳೆದ ಅವರು ಕನ್ನಡದೊಂದಿಗೆ ತುಳು ಭಾಷೆಯನ್ನು ಮಿಶ್ರಣ ಮಾಡಿ ಮಾತನಾಡುವ ಶೈಲಿ ಅವರನ್ನು ಜನಪ್ರಿಯಗೊಳಿಸಿದೆ. ಬಿಗ್ ಬಾಸ್ ಮನೆಗೆ ಪ್ರವೇಶಿಸುತ್ತಿದ್ದಂತೆಯೇ ಅವರು ಉತ್ಸಾಹದಿಂದ ತಮ್ಮನ್ನು ಪರಿಚಯಿಸಿಕೊಂಡರು. ಆದರೆ, ಆರಂಭದ ಟಾಸ್ಕ್‌ಗಳು ಮತ್ತು ನಿಯಮಗಳು ಅವರಿಗೆ ದೊಡ್ಡ ಸವಾಲು ಒಡ್ಡಿದವು. ಮೊದಲ ದಿನವೇ ಎಲಿಮಿನೇಷನ್ ಪ್ರಕ್ರಿಯೆ ಆರಂಭವಾಗಿ, ಅವರ ಜರ್ನಿ ಅಕಾಲಿಕವಾಗಿ ಕೊನೆಗೊಂಡಿತು.
ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಮೂವರು ಸ್ಪರ್ಧಿಗಳು ಒಂಟಿಗಳ ಎದುರು ನಿಂತು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಬೇಕಿತ್ತು. ಮಾಳು ನಿಪನಾಳ ಅವರು ತಮ್ಮನ್ನು ಮಿಡ್ಲ್ ಕ್ಲಾಸ್ ಹುಡುಗ ಎಂದು ಪರಿಚಯಿಸಿಕೊಂಡು, “ಕನಿಷ್ಠ 2-3 ದಿನಗಳಾದರೂ ಮನೆಯಲ್ಲಿ ಇರಬೇಕು ಎಂಬ ಆಸೆ ಇದೆ. ನಿಮ್ಮ ಕೈಯಲ್ಲಿದೆ ಉಳಿಸುವುದು ಬಿಡುವುದು” ಎಂದು ಮನವಿ ಮಾಡಿದರು. ಅವರ ಸರಳತೆ ಮತ್ತು ನೇರ ಮಾತುಗಳು ಒಂಟಿಗಳ ಮನಸ್ಸನ್ನು ಗೆದ್ದವು. ಸ್ಪಂದನಾ ಅವರು “ಸ್ಟ್ರಾಂಗ್ ಮನಸ್ಥಿತಿಯ ಹುಡುಗಿ ನಾನು. ಈ ಜರ್ನಿ ನನಗೆ ಬಹಳ ಮುಖ್ಯ. ನನ್ನನ್ನು ಸೆಲೆಕ್ಟ್ ಮಾಡಿ” ಎಂದು ಧೈರ್ಯದಿಂದ ಹೇಳಿದರು.
ರಕ್ಷಿತಾ ಶೆಟ್ಟಿ ಅವರು ತಮ್ಮ ಪ್ರಯತ್ನದಲ್ಲಿ “ಇವತ್ತು ನಿಮ್ಮನ್ನು ಹೇಗೆ ಮನವೊಲಿಸಬೇಕು ಎಂದು ಗೊತ್ತಿಲ್ಲ. ಈ ಅವಕಾಶ ನನಗೆ ಸಿಕ್ಕಿದೆ. ತುಳುನಾಡಲ್ಲಿ ನಾನು ಸ್ವಲ್ಪ ಜನಪ್ರಿಯಳು. ಬಿಗ್ ಬಾಸ್ ಮೂಲಕ ಹೆಚ್ಚಿನ ಜನರೊಂದಿಗೆ ಕನೆಕ್ಟ್ ಆಗಬಹುದು. ಬೆಳೆದಿದ್ದು ತುಳು ಮತ್ತು ಮುಂಬೈ ವಾತಾವರಣದಲ್ಲಿ. ಇಲ್ಲಿ ಇದ್ದರೆ ಕನ್ನಡ ಕಲಿಯುತ್ತೇನೆ” ಎಂದು ಹೇಳಿದರು. ಆದರೆ, ಒಂಟಿಗಳಲ್ಲಿ ಕೆಲವರು ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ತಪ್ಪು ಕನ್ನಡ ಮಾತನಾಡಿ ಫೇಮಸ್ ಆದವಳು ಎಂದು ಟೀಕಿಸಿದರು. “ಅವಳಿಗೆ ಬೇರೆ ಕೆಲಸಗಳಿವೆ” ಎಂಬ ಅಭಿಪ್ರಾಯಗಳು ಕೇಳಿಬಂದವು.
ಅಂತಿಮ ನಿರ್ಧಾರವನ್ನು ಅಶ್ವಿನಿ ಗೌಡ ಅವರು ಘೋಷಿಸಿದರು. ಮಾಳು ನಿಪನಾಳ ಮತ್ತು ಸ್ಪಂದನಾ ಅವರನ್ನು ಉಳಿಸಿಕೊಂಡು, ರಕ್ಷಿತಾ ಶೆಟ್ಟಿಗೆ ಗೇಟ್ ಪಾಸ್ ನೀಡಲಾಯಿತು. ರಕ್ಷಿತಾ ಅವರು ಎಮೋಷನಲ್ ಆಗದೆ ಪಾಸಿಟಿವ್ ಆಗಿ ಪ್ರತಿಕ್ರಿಯಿಸಿದರು. “ಬಂದಿದ್ದನ್ನು ಒಪ್ಪಿಕೊಳ್ಳುತ್ತೇನೆ” ಎಂದು ಹೇಳಿ ಮುಖ್ಯದ್ವಾರದಿಂದ ಹೊರನಡೆದರು.