ಬಿಗ್‌ಬಾಸ್ 12: ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಈಗ ತನ್ನ ಅಂತಿಮ ಘಟ್ಟಕ್ಕೆ ತಲುಪಿದೆ. ಫಿನಾಲೆಗೆ ಕೇವಲ ಒಂದು ವಾರ ಬಾಕಿ ಇರುವ ಈ ಸಮಯದಲ್ಲಿ, ಬಿಗ್ ಮನೆಯಲ್ಲಿ ಕುತೂಹಲದ ವಾತಾವರಣ ಮನೆಮಾಡಿದೆ. ಈ ಬಾರಿ ಯಾರು ಕಿರೀಟ ಪಡೆಯುತ್ತಾರೆ ಎಂಬ ಚರ್ಚೆಗಳು ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿ ನಡೆಯುತ್ತಿರುವಾಗಲೇ, ಧನುಷ್ ಗೌಡ ಅವರು ಅಚ್ಚರಿ ಎನ್ನುವಂತೆ ಫಿನಾಲೆಗೆ ಮೊದಲ ಸ್ಪರ್ಧಿಯಾಗಿ ನೇರ ಪ್ರವೇಶ ಪಡೆದಿದ್ದಾರೆ.
ಕಳೆದ ವಾರ ಧನುಷ್ ಗೌಡ ಅವರು ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದರು. ಈ ಸೀಸನ್‌ನ ಕೊನೆಯ ಕ್ಯಾಪ್ಟನ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಇವರಿಗೆ ಬಿಗ್ ಬಾಸ್ ಕೆಲವು ವಿಶೇಷ ಅಧಿಕಾರಗಳನ್ನು ನೀಡಿದ್ದರು. ಟಾಪ್ 6 ಆಟದಲ್ಲಿ ನೇರವಾಗಿ ಸ್ಪರ್ಧಿಸುವ ಸುವರ್ಣಾವಕಾಶ ಧನುಷ್ ಪಾಲಾಗಿತ್ತು. ಈ ಅವಕಾಶವನ್ನು ಅತ್ಯಂತ ಚಾಣಾಕ್ಷತನದಿಂದ ಬಳಸಿಕೊಂಡ ಧನುಷ್, ಸತತ ಪರಿಶ್ರಮ ಮತ್ತು ಏಕಾಗ್ರತೆಯಿಂದ ಕೊನೆಯ ಟಾಸ್ಕ್‌ನಲ್ಲಿ ಗೆದ್ದು ಟಾಪ್ 6ನೇ ಸ್ಪರ್ಧಿಯಾಗಿ ಆಯ್ಕೆಯಾಗಿದ್ದಾರೆ.
ಫಿನಾಲೆ ಟಿಕೆಟ್‌ಗಾಗಿ ನಡೆದ ಅಂತಿಮ ಟಾಸ್ಕ್‌ನಲ್ಲಿ ಕಠಿಣ ಪೈಪೋಟಿ ಇತ್ತು. ಧನುಷ್ ಗೌಡ ಜೊತೆಗೆ ಅಶ್ವಿನಿ ಗೌಡ, ಕಾವ್ಯಾ ಶೈವ ಮತ್ತು ಮ್ಯೂಟೆಂಟ್ ರಘು ಕಣದಲ್ಲಿದ್ದರು. ಇದು ಕೇವಲ ಬಲದ ಆಟವಾಗಿರದೆ, ಸಮಯ ಪ್ರಜ್ಞೆಯ ಪರೀಕ್ಷೆಯೂ ಆಗಿತ್ತು. ಅತಿ ಕಡಿಮೆ ಸಮಯದಲ್ಲಿ ಅತ್ಯಂತ ನಿಖರವಾಗಿ ಟಾಸ್ಕ್ ಪೂರ್ಣಗೊಳಿಸಿದ ಧನುಷ್, ಉಳಿದ ಸ್ಪರ್ಧಿಗಳನ್ನು ಹಿಂದಿಕ್ಕಿ ‘ಟಿಕೆಟ್ ಟು ಫಿನಾಲೆ’ (Ticket to Finale) ತನ್ನದಾಗಿಸಿಕೊಂಡರು.
ಟಿಕೆಟ್ ಟು ಫಿನಾಲೆ ಪಡೆದ ಧನುಷ್ ಕಂಡು, ಮನೆಯೊಳಗೆ ಧನುಷ್ ಅವರ ಆಪ್ತ ಸ್ನೇಹಿತೆ ರಾಶಿಕಾ ಶೆಟ್ಟಿ ಅತ್ಯಂತ ಹೆಚ್ಚು ಖುಷಿಪಟ್ಟರು. ಇನ್ನು ಈ ಬಾರಿಯ ಟ್ರೋಫಿ ಗೆಲ್ಲುತ್ತಾರೆ ಎಂದು ಬಿಂಬಿತವಾಗಿದ್ದ ಗಿಲ್ಲಿನಟಗಿಂತ ಮೊದಲೇ ಧನುಷ್ ಫಿನಾಲೆಗೆ ಲಗ್ಗೆ ಇಟ್ಟಿದ್ದು ವೀಕ್ಷಕರಲ್ಲಿ ಅಚ್ಚರಿ ಮೂಡಿಸಿದೆ.
ಧನುಷ್ ಗೌಡ ಈಗಾಗಲೇ ಫಿನಾಲೆ ಸೀಟ್ ಕನ್ಫರ್ಮ್ ಮಾಡಿಕೊಂಡಿದ್ದರೂ, ಉಳಿದ ಸ್ಥಾನಗಳಿಗಾಗಿ ತೀವ್ರ ಪೈಪೋಟಿ ನಡೆಯುತ್ತಿದೆ. ಗಿಲ್ಲಿ ನಟ, ಅಶ್ವಿನಿ ಮತ್ತು ಕಾವ್ಯಾ ಶೈವ ಅವರ ನಡುವೆ ವೋಟಿಂಗ್ ಸಮರ ನಡೆಯಲಿದ್ದು, ಈ ವಾರದ ಅಂತ್ಯಕ್ಕೆ ಫಿನಾಲೆ ವೇದಿಕೆಯಲ್ಲಿ ನಿಲ್ಲುವ ಟಾಪ್ ಸ್ಪರ್ಧಿಗಳ ಪಟ್ಟಿ ಹೊರಬೀಳಲಿದೆ. ಮುಂದಿನ ಟಾಪ್ 5 ಸ್ಪರ್ಧಿಗಳು ಯಾರು ಎಂಬುದನ್ನ ಕಾದು ನೋಡಬೇಕಿದೆ.





