ಬಿಗ್ ಬಾಸ್ ಕನ್ನಡ 12ರ ಮನೆಯಲ್ಲಿ ಈ ವಾರದ ಆಟ ಸಂಪೂರ್ಣವಾಗಿ ತಿರುವು ಪಡೆದುಕೊಂಡಿದೆ. ‘ಸೀಕ್ರೆಟ್ ರೂಮ್’ ಎನ್ನುವ ಪದವೇ ಈಗ ಸೀಕ್ರೆಟ್ ಆಗಿ ಉಳಿದಿಲ್ಲ. ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿಯನ್ನು ಮನೆಯಿಂದ ಎಲಿಮಿನೇಟ್ ಮಾಡದೇ ಸೀಕ್ರೆಟ್ ರೂಮ್‌ನಲ್ಲಿ ಇಡಲಾಗಿದೆ ಎಂಬ ಅನುಮಾನ ಸ್ಪರ್ಧಿಗಳಲ್ಲಿಯೇ ಹುಟ್ಟಿಕೊಂಡಿದೆ. ವಿಶೇಷವಾಗಿ ಕಾವ್ಯ ಮತ್ತು ಗಿಲ್ಲಿ ನಟ ಅವರು ಈ ಬಗ್ಗೆ ಬಹಿರಂಗವಾಗಿ ಮಾತನಾಡಿರುವುದು ಮನೆಮಂದಿಯಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಈ ವಾರ ಬಿಗ್ ಬಾಸ್ ಮನೆಯೊಳಗೆ ಸೀಕ್ರೆಟ್ ರೂಮ್ ಟಾಸ್ಕ್ ಜಾರಿಯಲ್ಲಿದೆ. ಧ್ರುವಂತ್ ಹಾಗೂ ರಕ್ಷಿತಾ ಶೆಟ್ಟಿಯನ್ನು ಎಲಿಮಿನೇಟ್ ಮಾಡಿದಂತೆ ತೋರಿಸಿ, ಅವರನ್ನು ಸೀಕ್ರೆಟ್ ರೂಮ್‌ಗೆ ಕಳುಹಿಸಲಾಗಿದೆ. ಅಲ್ಲಿ ಕುಳಿತಿರುವ ಅವರು ಮನೆಯೊಳಗೆ ನಡೆಯುವ ಪ್ರತಿಯೊಂದು ಮಾತು, ತಂತ್ರ, ಚರ್ಚೆಯನ್ನು ನೇರವಾಗಿ ವೀಕ್ಷಿಸುತ್ತಿದ್ದಾರೆ. ಮನೆಯೊಳಗಿನ ಸ್ಪರ್ಧಿಗಳು ಮಾತ್ರ ಅವರು ಸಂಪೂರ್ಣವಾಗಿ ಹೊರಗಿದ್ದಾರೆ ಎಂದು ನಂಬಿಸಲಾಗಿತ್ತು.
ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿಯ ಎಲಿಮಿನೇಶನ್ ಬಹುತೇಕರಿಗೆ ಅಚ್ಚರಿಯನ್ನೇ ಮೂಡಿಸಿತ್ತು. ಆಟದಲ್ಲಿ ಸಕ್ರಿಯವಾಗಿದ್ದ ಇಬ್ಬರನ್ನು ಏಕಾಏಕಿ ಹೊರಹಾಕಿದ್ದು ಅನುಮಾನ ಹುಟ್ಟಿಸಿತ್ತು. ಇದಕ್ಕೂ ಮುನ್ನ ರಘು ಅವರು “ಇವರು ಸೀಕ್ರೆಟ್ ರೂಮ್‌ಗೆ ಹೋಗಿರಬಹುದಾ?” ಎಂದು ಡೌಟ್ ವ್ಯಕ್ತಪಡಿಸಿದ್ದರು. ಈಗ ಅದೇ ಅನುಮಾನ ಕಾವ್ಯ ಮತ್ತು ಗಿಲ್ಲಿಗೂ ಬಂದಿದೆ.
ಗಾರ್ಡನ್ ಏರಿಯಾದಲ್ಲಿ ನಡೆದ ಮಾತುಕತೆ
ಮನೆಯ ಗಾರ್ಡನ್ ಏರಿಯಾದಲ್ಲಿ ಕುಳಿತಿದ್ದ ಕಾವ್ಯ ಮತ್ತು ಗಿಲ್ಲಿ, ಸೀಕ್ರೆಟ್ ರೂಮ್ ವಿಚಾರವಾಗಿ ಮುಕ್ತವಾಗಿ ಮಾತನಾಡಿದ್ದಾರೆ. “ಅವರಿಬ್ಬರನ್ನು ಇದೇ ಸೆಟ್‌ನಲ್ಲೇ, ಪಕ್ಕದಲ್ಲಿ ಯಾವುದೋ ವ್ಯವಸ್ಥೆ ಮಾಡಿ ಇಟ್ಟಿರಬಹುದಾ? ಅವರು ಅಲ್ಲಿಂದ ನಮ್ಮನ್ನು ನೋಡೋ ರೀತಿಯಲ್ಲಿ ಬಿಗ್ ಬಾಸ್ ಸೆಟಪ್ ಮಾಡಿರಬಹುದು” ಎಂದು ಗಿಲ್ಲಿ ತಮ್ಮ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.
ಕಾವ್ಯ ಮಾಡಿದ ಇಂಟರೆಸ್ಟಿಂಗ್ ಊಹೆ
ಕಾವ್ಯ ಇನ್ನೊಂದು ಕುತೂಹಲಕರ ವಿಚಾರವನ್ನು ಮುಂದಿಟ್ಟಿದ್ದಾರೆ. “ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಮನೆಯಲ್ಲಿ ಇದ್ದಾಗ ಹೆಚ್ಚು ಮಾತಾಡಿಕೊಂಡಿರಲಿಲ್ಲ. ಈಗ ಅವರನ್ನು ಒಂದೇ ರೂಮ್‌ನಲ್ಲಿ ಇಟ್ಟಿದ್ದರೆ, ಅವರಿಬ್ಬರ ಮಧ್ಯೆ ಏನು ಮಾತುಕತೆ ನಡೆಯುತ್ತೆ ಅನ್ನೋದನ್ನ ಆಡಿಯನ್ಸ್‌ಗೆ ತೋರಿಸೋದು ಬಿಗ್ ಬಾಸ್ ಪ್ಲಾನ್ ಇರಬಹುದು” ಎಂದು ಹೇಳಿದ್ದಾರೆ.
ಸದ್ಯ ಸೀಕ್ರೆಟ್ ರೂಮ್‌ನಲ್ಲಿ ನಡೆಯುತ್ತಿರುವುದನ್ನು ನೋಡಿದರೆ, ಕಾವ್ಯ ಊಹೆ ಬಹುತೇಕ ನಿಜವಾಗುತ್ತಿರುವಂತೆಯೇ ಕಾಣುತ್ತಿದೆ.
ಸೀಕ್ರೆಟ್ ರೂಮ್‌ನಲ್ಲೂ ಗಲಾಟೆ
ಸೀಕ್ರೆಟ್ ರೂಮ್‌ಗೆ ಹೋದ ಮೇಲೂ ಧ್ರುವಂತ್ ಮತ್ತು ರಕ್ಷಿತಾ ನಡುವೆ ವಾಗ್ವಾದ ನಿಂತಿಲ್ಲ. ಮನೆಯೊಳಗೆ ಇದ್ದಾಗ ಹೇಗಿತ್ತೋ, ಅದೇ ರೀತಿ ಅಲ್ಲಿಯೂ ಇಬ್ಬರ ನಡುವೆ ಮಾತಿನ ಚಕಮಕಿ ಮುಂದುವರೆದಿದೆ. ಇದು ವೀಕ್ಷಕರಿಗೆ ಮತ್ತಷ್ಟು ಎಂಟರ್‌ಟೈನ್‌ಮೆಂಟ್ ನೀಡುತ್ತಿದೆ.
ಮನೆಗೆ ಮರಳೋದು ಯಾವಾಗ?
ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಮತ್ತೆ ಬಿಗ್ ಬಾಸ್ ಮನೆಯೊಳಗೆ ಯಾವಾಗ ಎಂಟ್ರಿ ಕೊಡುತ್ತಾರೆ? ಇದೀಗ ಎಲ್ಲರಲ್ಲೂ ಇರುವ ದೊಡ್ಡ ಪ್ರಶ್ನೆ ಮೂಡಿದೆ. ಅವರು ಮನೆಗೆ ಮರಳಿದಾಗ ಸ್ಪರ್ಧಿಗಳ ರಿಯಾಕ್ಷನ್ ಹೇಗಿರುತ್ತದೆ ಎಂಬುದನ್ನು ನೋಡಲು ವೀಕ್ಷಕರಲ್ಲಿ ಭಾರೀ ಕುತೂಹಲವಿದೆ. ಆದರೆ ಕಾವ್ಯ ಮತ್ತು ಗಿಲ್ಲಿ ನಟಗೆ ಮಾತ್ರ ಇದು ದೊಡ್ಡ ಶಾಕ್ ಆಗುವ ಸಾಧ್ಯತೆ ಇದೆ ಕಡಿಮೆ. ಏಕೆಂದರೆ ಅವರು ಈಗಾಗಲೇ ಸೀಕ್ರೆಟ್ ರೂಮ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಹೊಸ ಟಾಸ್ಕ್‌ಗೆ ವೇದಿಕೆ ಸಿದ್ಧ
ಇನ್ನೊಂದು ಕಡೆ, ಸೀಕ್ರೆಟ್ ರೂಮ್‌ನಲ್ಲಿರುವ ಧ್ರುವಂತ್ ಮತ್ತು ರಕ್ಷಿತಾ, ಮನೆಯ ಸದಸ್ಯರಿಗೆ ದೊಡ್ಡ ಟಾಸ್ಕ್ ಒಂದನ್ನು ನೀಡಿದ್ದಾರೆ. ಅದರ ಪ್ರೋಮೋ ಈಗಾಗಲೇ ರಿಲೀಸ್ ಆಗಿದ್ದು, ಮುಂದಿನ ದಿನಗಳಲ್ಲಿ ಆಟ ಇನ್ನಷ್ಟು ರೋಚಕವಾಗುವ ಎಲ್ಲಾ ಲಕ್ಷಣಗಳಿವೆ. ಸೀಕ್ರೆಟ್ ರೂಮ್ ಟ್ವಿಸ್ಟ್ ಮೂಲಕ ಬಿಗ್ ಬಾಸ್ ಮತ್ತೆ ವೀಕ್ಷಕರ ಗಮನ ಸೆಳೆದಿದ್ದಾರೆ.





