ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ನಲ್ಲಿ ಪ್ರತಿ ವಾರವೂ ಹೊಸ ತಿರುವುಗಳು, ಅಚ್ಚರಿಗಳು, ಭಾವನಾತ್ಮಕ ಕ್ಷಣಗಳು ಪ್ರೇಕ್ಷಕರನ್ನು ಗಮನ ಸೆಳೆಯುತ್ತಿವೆ. ಈ ವಾರದ ಎಲಿಮಿನೇಷನ್ ಎಪಿಸೋಡ್ ಕೂಡ ಅಂಥದ್ದೇ ಸಸ್ಪೆನ್ಸ್, ಕಣ್ಣೀರು ಮತ್ತು ಡ್ರಾಮಾಗಳಿಂದ ತುಂಬಿತ್ತು. ಧ್ರುವಂತ್ ಹಾಗೂ ರಕ್ಷಿತಾ ಶೆಟ್ಟಿ ಮನೆಯಿಂದ ಔಟ್ ಆಗಿದ್ದಾರೆ ಎನ್ನುವ ಘೋಷಣೆಯು ಮನೆಮಂದಿಯನ್ನು ಮಾತ್ರವಲ್ಲದೆ ವೀಕ್ಷಕರಿಗೂ ಶಾಕ್ ನೀಡಿತ್ತು. ಆದರೆ ಬಿಗ್ ಬಾಸ್ ಇಬ್ಬರನ್ನು ಸೀಕ್ರೆಟ್ ರೂಮ್ನಲ್ಲಿಸಿರುವುದು ಅನಿರೀಕ್ಷಿತ ತಿರುವು ನೀಡಿದೆ.
ಈ ವಾರ ಅಶ್ವಿನಿ, ಗಿಲ್ಲಿ, ರಜತ್, ಧ್ರುವಂತ್, ರಕ್ಷಿತಾ, ಸ್ಪಂದನಾ ಸೇರಿದಂತೆ ಹಲವು ಸ್ಪರ್ಧಿಗಳು ನಾಮಿನೇಷನ್ ಪಟ್ಟಿಯಲ್ಲಿ ಇದ್ದರು. ಒಂದೊಂದಾಗಿ ಸ್ಪರ್ಧಿಗಳು ಸೇಫ್ ಆಗುತ್ತಿದ್ದಂತೆ ಕೊನೆಗೆ ಧ್ರುವಂತ್ ಹಾಗೂ ರಕ್ಷಿತಾ ಶೆಟ್ಟಿ ಅಂತಿಮ ಔಟ್ ಎಂದು ಬಿಗ್ ಬಾಸ್ ಘೋಷಿಸಿದರು. ಈ ಘೋಷಣೆ ಕೇಳುತ್ತಿದ್ದಂತೆ ಮನೆಯೊಳಗೆ ಮೌನ ಆವರಿಸಿತ್ತು. ಕೆಲವರ ಕಣ್ಣಲ್ಲಿ ನೀರು, ಕೆಲವರ ಮುಖದಲ್ಲಿ ಅಚ್ಚರಿ ಕಂಡುಬಂದಿತ್ತು.
ಧ್ರುವಂತ್ ಮತ್ತು ರಕ್ಷಿತಾ ಮನೆ ಬಿಟ್ಟು ಹೊರಗೆ ಬರುತ್ತಿದ್ದ ಕ್ಷಣ ಭಾವನಾತ್ಮಕವಾಗಿತ್ತು. ರಕ್ಷಿತಾ ಹೊರಡುವಾಗ ಬಹುತೇಕ ಸದಸ್ಯರ ಕಣ್ಣಲ್ಲಿ ನೀರು ತುಂಬಿಕೊಂಡಿತ್ತು. ಆದರೆ ಧ್ರುವಂತ್ ಬಗ್ಗೆ ಮಾತ್ರ ಭಿನ್ನವಾದ ಪ್ರತಿಕ್ರಿಯೆ ಕಂಡುಬಂತು. ಅವರೊಂದಿಗೆ ಮಾತನಾಡಲು ಯಾರೂ ಮುಂದಾಗಲಿಲ್ಲ ಎಂಬ ಮಾತುಗಳು ಕೇಳಿಬಂದವು. ಈ ವೇಳೆ ರಕ್ಷಿತಾ, “ನನ್ನ ಜನ ನನ್ನನ್ನು ಬಿಟ್ಟುಕೊಡಲಿಲ್ಲ” ಎಂದು ಹೇಳಿದ್ದು ಸಾಕಷ್ಟು ಚರ್ಚೆಗೆ ಕಾರಣವಾಯಿತು.
ಆದರೆ ನಿಜವಾದ ಟ್ವಿಸ್ಟ್ ಇಲ್ಲಿಂದ ಶುರು ಆಯಿತು. ಧ್ರುವಂತ್ ಮತ್ತು ರಕ್ಷಿತಾ ನಿಜವಾಗಿಯೂ ಔಟ್ ಆಗದೇ, ಬಿಗ್ ಬಾಸ್ ಅವರಿಬ್ಬರನ್ನು ಸೀಕ್ರೆಟ್ ರೂಮ್ಗೆ ಕಳುಹಿಸಿದ್ದಾರೆ ಎಂಬುದು ಬಹಿರಂಗವಾಯಿತು. ಮನೆಯೊಳಗಿನ ಸದಸ್ಯರು ಇವರಿಬ್ಬರೂ ಸಂಪೂರ್ಣವಾಗಿ ಹೊರ ಹೋಗಿದ್ದಾರೆ ಎಂದು ಭಾವಿಸುತ್ತಿದ್ದರೆ, ಸೀಕ್ರೆಟ್ ರೂಮ್ನಲ್ಲಿ ಕುಳಿತಿರುವ ಧ್ರುವಂತ್ ಮತ್ತು ರಕ್ಷಿತಾ ಮನೆಯವರ ನಿಜವಾದ ಮಾತು, ಅಭಿಪ್ರಾಯಗಳನ್ನು ನೇರವಾಗಿ ಕೇಳುವ ಅವಕಾಶ ಪಡೆದರು.
ಮನೆಯೊಳಗೆ ಚೈತ್ರಾ ಅವರು ರಾಶಿಕಾ ಜೊತೆ ಮಾತನಾಡುತ್ತಾ, “ರಕ್ಷಿತಾಗೆ ಒಂದೇ ಸಮಸ್ಯೆ ಅಂದ್ರೆ ತುಂಬಾ ಕನ್ಫ್ಯೂಸ್ ಆಗಿರ್ತಾ ಇದ್ಲು” ಎಂದು ಹೇಳಿದ ಮಾತು ಸೀಕ್ರೆಟ್ ರೂಮ್ನಲ್ಲಿ ಕುಳಿತಿದ್ದ ರಕ್ಷಿತಾಗೆ ತಟ್ಟಿತ್ತು. ಇನ್ನು ಕೆಲವರು ರಕ್ಷಿತಾ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದರೆ, ಧ್ರುವಂತ್ ಮಾತ್ರ ಅದನ್ನು ವ್ಯಂಗ್ಯವಾಗಿ ಸ್ವೀಕರಿಸಿದರು.
“ನಿನ್ನಂಥವರನ್ನೇ, ನಿನ್ನ ಇಡೀ ಮನೆಯಲ್ಲಿ ನಡೆಯುವ ಡ್ರಾಮಾಗಳನ್ನೆಲ್ಲಾ ನೋಡಿಕೊಂಡೇ ಬಂದಿದ್ದೇನೆ” ಎಂದು ಧ್ರುವಂತ್ ಹೇಳಿದರು. ಆದರೆ ಒಂದೇ ರೂಮ್ನಲ್ಲಿ ಧ್ರುವಂತ್ ಜೊತೆ ಇರಬೇಕಾದ ಪರಿಸ್ಥಿತಿಗೆ ರಕ್ಷಿತಾ ತಲೆ ಮೇಲೆ ಕೈ ಇಟ್ಟುಕೊಂಡು ಫುಲ್ ಟೆನ್ಷನ್ಗೆ ಒಳಗಾದರು. ‘ಅಯ್ಯೋ ದೇವರೇ, ನಿಮ್ಮ ಜೊತೆ ಒಂದೇ ರೂಮಲ್ಲಿ ಹೇಗೆ ಇರೋದು?’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇತ್ತ ಮನೆಯೊಳಗೆ ಗಿಲ್ಲಿ ಮತ್ತು ರಜತ್ ಇಬ್ಬರೂ ರಕ್ಷಿತಾ ಔಟ್ ಆಗಿದ್ದಾರೆ ಎನ್ನುವ ಭಾವನೆಯಲ್ಲಿ ತುಂಬಾ ಬೇಸರಗೊಂಡರು. ಗಿಲ್ಲಿ, “ನಾನು ಯಾರಿಗೂ ಕಣ್ಣೀರು ಹಾಕಿದವನಲ್ಲ, ಆದರೆ ರಕ್ಷಿತಾ ಹೋಗಿದ್ದು ತುಂಬಾ ಬೇಸರವಾಯ್ತು. ಆಕೆಯನ್ನು ಬಹಳ ಮಿಸ್ ಮಾಡಿಕೊಳ್ಳಲಿದ್ದೇನೆ” ಎಂದು ಮನಸಾರೆ ಹೇಳಿದರು.
ರಘು ಅವರು ರಕ್ಷಿತಾ ಹೊರಡುವಾಗ ನೆನಪಿಗಾಗಿ ತಮ್ಮ ಆಭರಣವನ್ನೇ ಕೊಟ್ಟಿದ್ದು ಎಲ್ಲರ ಮನಸ್ಸು ಕದ್ದಿತ್ತು. ರಜತ್ ಕೂಡ, “ಕಳೆದ ಸೀಸನ್ನಲ್ಲಿಯೂ ನಾನು ಯಾರನ್ನೂ ಹಚ್ಚಿಕೊಂಡಿರಲಿಲ್ಲ, ಆದರೆ ಈ ಸೀಸನ್ನಲ್ಲಿ ರಕ್ಷಿತಾಳಿಗೆ ಬಹಳ ಹತ್ತಿರವಾಗಿದ್ದೆ” ಎಂದು ಭಾವನಾತ್ಮಕವಾಗಿ ಮಾತನಾಡಿದರು.
ಈ ವಾರ ವೋಟಿಂಗ್ ಲೈನ್ಸ್ ಓಪನ್ ಇರಲಿಲ್ಲ ಎನ್ನುವುದೂ ಗಮನಾರ್ಹ. ಬಿಗ್ ಬಾಸ್ ಉದ್ದೇಶಪೂರ್ವಕವಾಗಿ ಧ್ರುವಂತ್ ಹಾಗೂ ರಕ್ಷಿತಾ ಅವರನ್ನು ಸೀಕ್ರೆಟ್ ರೂಮ್ಗೆ ಕಳುಹಿಸಿ, ಮನೆಯವರ ನಿಜವಾದ ಮುಖವನ್ನು ತೋರಿಸುವ ಆಟವಾಡಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಮುಂದಿನ ದಿನಗಳಲ್ಲಿ ಈ ಸೀಕ್ರೆಟ್ ರೂಮ್ ಟ್ವಿಸ್ಟ್ ಆಟಕ್ಕೆ ಯಾವ ರೀತಿಯ ತಿರುವು ಕೊಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.





