ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಇದೀಗ ಫೈನಲ್‌ಗೆ ಕೇವಲ 3 ವಾರಗಳಷ್ಟು ಬಾಕಿಯಿದೆ. ಮನೆಯಲ್ಲಿ 11 ಮಂದಿ ಸ್ಪರ್ಧಿಗಳು ಉಳಿದಿದ್ದು, ಡಬಲ್ ಎಲಿಮಿನೇಷನ್ ಸಾಧ್ಯತೆ ಇದೆ. ಈ ವಾರದ ಕಾವ್ಯ ಶೈವಾ ಅವರ ಕ್ಯಾಪ್ಟನ್ಸಿ, ರಕ್ಷಿತಾ ಶೆಟ್ಟಿ ಅವರ ವಿರೋಧ, ಗಿಲ್ಲಿ ನಟ ಅವರ ಕಾಮಿಡಿ ಟಾಸ್ಕ್‌ಗಳು ಮತ್ತು ರಘು-ರಕ್ಷಿತಾ ಸಂಬಂಧದ ಭ್ರಮೆ ಈ ಪ್ರಮುಖ ಘಟನೆಗಳ ಬಗ್ಗೆ ಚರ್ಚೆಯಾಗಿವೆ. ಕಿಚ್ಚ ಸುದೀಪ್ ಅವರು ಶನಿವಾರದ ಎಪಿಸೋಡ್‌ನಲ್ಲಿ ಸ್ವಲ್ಪ ಗರಂ ಆಗಿದ್ದರೂ, ಭಾನುವಾರ ಕಾಮಿಡಿ ಪಂಚಾಯ್ತಿ ನಡೆಸಿದ್ದಾರೆ.
ಭ್ರಮೆ ಬಲೂನ್ ಟಾಸ್ಕ್
ಈ ವಾರ ಬಿಗ್ ಬಾಸ್ ಕೊಟ್ಟ ಟಾಸ್ಕ್ ಮನೆಮಂದಿಯ ಭ್ರಮೆಗಳನ್ನು ಒಡೆದು ಹಾಕುವಂತಿತ್ತು. ಯಾರು ಯಾವ ಭ್ರಮೆಯಲ್ಲಿ ಇದ್ದಾರೆ ಎಂಬುದನ್ನು ನೇರವಾಗಿ ಹೇಳಿ, ಸೂಜಿಯಿಂದ ಬಲೂನ್ ಒಡೆಯುವ ಟಾಸ್ಕ್ ನೀಡಲಾಗಿತ್ತು.
ಈ ಟಾಸ್ಕ್‌ನಲ್ಲಿ ಗಿಲ್ಲಿ, ರಘು ಬಗ್ಗೆ ಮಾತನಾಡುತ್ತಾ, “ಫ್ರೆಂಡ್‌ಶಿಪ್ ಹೆಸರಿನಲ್ಲಿ ನಾನು ರಘು ಅಣ್ಣನಿಗೆ ಅವಮಾನ ಮಾಡುತ್ತಿದ್ದೇನೆ ಎಂಬ ಭ್ರಮೆಯಲ್ಲಿ ಅವರು ಇದ್ದಾರೆ. ಅದು ಸಂಪೂರ್ಣ ಸುಳ್ಳು” ಎಂದು ನೇರವಾಗಿ ಹೇಳಿದ್ದಾರೆ.
ಇನ್ನೊಂದೆಡೆ ಧ್ರುವಂತ್, ರಕ್ಷಿತಾ ಬಗ್ಗೆ ಮಾತನಾಡಿ, “ಅವರು ಹೇಳಿದ್ದೇ ಕರೆಕ್ಟ್, ಅವರು ಬಿಟ್ಟರೆ ಯಾರೂ ಸರಿ ಇಲ್ಲ ಎನ್ನುವ ಭ್ರಮೆಯಲ್ಲಿ ಇದ್ದಾರೆ” ಎಂದು ಹೇಳಿದ್ದಾರೆ. ಇದು ಮನೆಯೊಳಗೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಕಾವ್ಯ ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, “ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಇಲ್ಲದೆ ಸ್ಪಾರ್ಕ್ ಇರಲ್ಲ ಅನ್ನೋ ಭ್ರಮೆಯಲ್ಲಿ ಇದ್ದಾರೆ” ಎಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಗಿಲ್ಲಿ, ರಕ್ಷಿತಾಗೆ ಓವರ್ ಕಾನ್‌ಫಿಡೆನ್ಸ್ ಜಾಸ್ತಿ ಇದೆ ಎಂದು ಚಾಟಿ ಬೀಸಿದ್ದಾರೆ.
ಕಣ್ಣು ಕಟ್ಟಿ ಟಾಸ್ಕ್‌ನಲ್ಲಿ ಗಿಲ್ಲಿ–ರಜತ್
ಇನ್ನೊಂದು ಟಾಸ್ಕ್‌ನಲ್ಲಿ ಗಿಲ್ಲಿ ಹಾಗೂ ರಜತ್‌ಗೆ ಕಣ್ಣು ಕಟ್ಟಿಸಿ, ಕೈಯಿಂದ ಮುಟ್ಟದೇ ತಿಂಡಿ ತಿನಿಸುಗಳನ್ನು ಗುರುತಿಸುವ ಸವಾಲು ನೀಡಲಾಯಿತು. ಟೇಸ್ಟ್ ಹಾಗೂ ವಾಸನೆ ಮೂಲಕ ತಿನಿಸು ಏನು ಎಂದು ಊಹಿಸಲು ಇಬ್ಬರೂ ಪರದಾಡಿದ್ದಾರೆ.
ಗಿಲ್ಲಿಗೆ ರುಚಿ ಅರ್ಥವಾಗದೇ, “ರವೆ ಥರ ಇದೆ… ನನಗೆ ಕೊರೋನಾ ಬಂದಿದ್ಯಾ?” ಎಂದು ಹೇಳಿದ್ದು ವೀಕ್ಷಕರಿಗೆ ಭರ್ಜರಿ ನಗು ತಂದಿದೆ. “ಸೋತು ಬಿಡೋಣ ಬಿಡೋಲೋ” ಎಂದು ರಜತ್ ಹೇಳಿದಾಗ, “ಪಕ್ಕಾ ಸೋತ್ವಿ” ಎಂದು ಗಿಲ್ಲಿ ಉತ್ತರಿಸಿದ್ದು ಟಾಸ್ಕ್‌ನ ಹೈಲೈಟ್ ಆಗಿದೆ.
ಯಾರು ಮನೆಯಿಂದ ಹೊರ ಹೋಗ್ತಾರೆ?
ಫಿನಾಲೆಗೆ ಇನ್ನೂ ಕೇವಲ 3 ವಾರಗಳು ಮಾತ್ರ ಬಾಕಿ. ಸದ್ಯ ಮನೆಯಲ್ಲಿ 11 ಮಂದಿ ಸ್ಪರ್ಧಿಗಳಿದ್ದು, ಮುಂದಿನ ವೀಕೆಂಡ್‌ನಲ್ಲಿ ಡಬಲ್ ಎಲಿಮಿನೇಷನ್ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಮೂಲಗಳ ಪ್ರಕಾರ, ಅತಿಥಿಗಳಾಗಿ ಮನೆಯೊಳಗೆ ಇದ್ದ ಚೈತ್ರಾ ಮತ್ತು ರಜತ್ ಅವರನ್ನು ಈ ವಾರ ಹೊರಗೆ ಕರೆಸಿಕೊಳ್ಳುವ ಸಾಧ್ಯತೆ ಇದೆ. ಕಳೆದ ವಾರದಂತೆ ಈ ವಾರವೂ ವೋಟಿಂಗ್ ಲೈನ್ಸ್ ತೆರೆಯದ ಕಾರಣ, ಈ ವಾರ ಎಲಿಮಿನೇಷನ್ ನಡೆಯುವುದಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.





