ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ದಿನದಿಂದ ದಿನಕ್ಕೆ ಹೆಚ್ಚು ರೋಚಕವಾಗುತ್ತಿದೆ. ಈ ವಾರ ನಡೆಯುತ್ತಿರುವ ಫ್ಯಾಮಿಲಿ ವೀಕ್ ಬಿಗ್ ಬಾಸ್ ಮನೆಗೆ ನಗು, ಕಾಮಿಡಿ ಮತ್ತು ಸಂಬಂಧಗಳ ಆಳವನ್ನು ಮತ್ತಷ್ಟು ಹೆಚ್ಚಿಸಿದೆ. ಸ್ಪರ್ಧಿಗಳ ಕುಟುಂಬದವರು ಒಬ್ಬೊಬ್ಬರಾಗಿ ದೊಡ್ಮನೆಗೆ ಕಾಲಿಟ್ಟಿದ್ದು, ಮನೆಮಂದಿ ಜೊತೆಗೆ ವೀಕ್ಷಕರಿಗೂ ಭಾವನಾತ್ಮಕ ಅನುಭವ ನೀಡಿದೆ.
ಈ ಫ್ಯಾಮಿಲಿ ವೀಕ್‌ನಲ್ಲಿ ಅಶ್ವಿನಿ ಗೌಡ ಅವರ ತಾಯಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಕ್ಷಣವೇ ಅಶ್ವಿನಿ ಭಾವುಕರಾದರು. ತಾಯಿಯನ್ನು ಕಂಡು ಕಣ್ಣೀರಿಟ್ಟ ಅಶ್ವಿನಿ, ಅಮ್ಮನನ್ನು ಅಪ್ಪಿಕೊಂಡು ಸಂತೋಷ ಹಂಚಿಕೊಂಡರು. ಈ ವೇಳೆ ಅಶ್ವಿನಿ ತಾಯಿ, ಗಿಲ್ಲಿ ನಟನಿಗೆ ವಿಶೇಷ ಸಲಹೆ ನೀಡಿದ್ದು ಗಮನ ಸೆಳೆದಿತ್ತು. “ಒಬ್ಬರಿಗೊಬ್ಬರು ಮನಸ್ತಾಪ ಮಾಡಿಕೊಳ್ಳಬೇಡಿ, ಚೆನ್ನಾಗಿರಿ” ಎಂದು ಗಿಲ್ಲಿಗೆ ಹೇಳಿದ್ದಾರೆ.
ಅಶ್ವಿನಿ ಮತ್ತು ಗಿಲ್ಲಿ ನಡುವಿನ ಜಗಳಗಳು ಮನೆಮಂದಿಗೆ ತಿಳಿದೇ ಇರುವ ವಿಚಾರ. ಆದರೂ ಇವರಿಬ್ಬರ ನಡುವಿನ ಬಾಂಡ್ ಪ್ರೀತಿ ಮತ್ತು ಸ್ನೇಹದಿಂದ ಕೂಡಿದೆ. ಇದೇ ಸಂದರ್ಭದಲ್ಲಿ ಅಶ್ವಿನಿ ತಾಯಿ ಎದುರು ನಡೆದ ಹಾಸ್ಯಮಯ ಸಂಭಾಷಣೆ ಬಿಗ್ ಬಾಸ್ ಮನೆಯನ್ನು ನಗೆಯಲ್ಲಿ ಮುಳುಗಿಸಿತ್ತು. ಅಶ್ವಿನಿ ತಾಯಿಯ ಬಳಿ ತಮಾಷೆ ಮಾಡುತ್ತ, “ಗಿಲ್ಲಿ ವಿಗ್ ಹಾಕಿಕೊಳ್ಳುತ್ತೀರಾ, ಹಲ್ಲು ಸೆಟ್ ಅಂತ ರೆಗಿಸ್ತಾನೆ” ಎಂದು ಹೇಳಿದಾಗ ಎಲ್ಲರೂ ನಗಿದರು.
ಅದಕ್ಕೆ ಗಿಲ್ಲಿ ಕೂಡ ಹಿಂದೆ ಸರಿಯದೇ, “ಅತ್ತೆ ಮಗಳಿಗೆ ಇಷ್ಟೂ ಹೇಳದಿದ್ರೆ ಹೇಗೆ?” ಎಂದು ತಮಾಷೆ ಮಾಡಿ ಮನೆಮಂದಿಯನ್ನು ನಕ್ಕೂ ನಕ್ಕೂ ಸುಸ್ತಾಗುವಂತೆ ಮಾಡಿದರು. “ಅತ್ತೆ ಮಗಳು ಅಂದ್ರೆ ಅಷ್ಟು ಸಲುಗೆ ಇರಬೇಕು ಅಲ್ವಾ?” ಎಂಬ ಗಿಲ್ಲಿಯ ಡೈಲಾಗ್ ಹೊಡೆದರು. ಕೊನೆಗೆ ಅಶ್ವಿನಿ ಗೌಡ ಅವರ ತಾಯಿ ಜೊತೆ ‘ಅತ್ತೆ ಅತ್ತೆ’ ಎಂದು ಮಾತನಾಡಿಸಿದ ಕ್ಷಣ ಬಿಗ್ ಬಾಸ್ ಮನೆಯ ಅತ್ಯಂತ ಮನರಂಜನೆಯ ಕ್ಷಣಗಳಲ್ಲಿ ಒಂದಾಗಿತು.
ಫ್ಯಾಮಿಲಿ ವೀಕ್‌ನಲ್ಲಿ ಇತರ ಸ್ಪರ್ಧಿಗಳ ಕುಟುಂಬದವರೂ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಸೂರಜ್ ಅವರ ತಾಯಿ, ರಾಶಿಕಾ ಅವರ ತಮ್ಮ ಮತ್ತು ಅಮ್ಮ, ಧನುಷ್ ಅವರ ತಾಯಿ ಹಾಗೂ ರಕ್ಷಿತಾ ಶೆಟ್ಟಿ ಅವರ ತಾಯಿ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ರಕ್ಷಿತಾ ತಾಯಿ ಮನೆಗೆ ಬರುತ್ತಿದ್ದಂತೆಯೇ ಮಗಳಿಗೆ “ಯಾರೊಂದಿಗೂ ಜಗಳ ಮಾಡಬೇಡ” ಎಂದು ತಾಯಿಯ ಕ್ಲಾಸ್ ತೆಗೆದುಕೊಂಡರು.
ಈ ನಡುವೆ ಗಿಲ್ಲಿ ಮತ್ತು ಧ್ರುವಂತ್ ನಡುವಿನ ಹಾಸ್ಯವೂ ಎಲ್ಲರ ಗಮನ ಸೆಳೆದಿತು. ಧ್ರುವಂತ್ “ಬೆತ್ತ ತರಲಿಲ್ವಾ?” ಎಂದು ಕೇಳಿದಾಗ, ಗಿಲ್ಲಿ “ತಂದಿದ್ದರೆ ನಿನಗೆ ಹೊಡಿತಾ ಇದ್ದರು” ಎಂದು ತಮಾಷೆ ಮಾಡಿದರು.
ಇನ್ನು ರಕ್ಷಿತಾ ಶೆಟ್ಟಿಗೆ ಬಿಗ್ ಬಾಸ್ ವಿಶೇಷ ಸರ್‌ಪ್ರೈಸ್ ನೀಡಿದರು. ಮನೆಯಲ್ಲಿ ಮೀನು, ಕ್ಯಾಮೆರಾ ನೀಡಿ ಲೈವ್ ಬ್ಲಾಗಿಂಗ್ ಮಾಡಲು ಅವಕಾಶ ಕೊಟ್ಟರು. ರಕ್ಷಿತಾ ಲೈವ್ ಬ್ಲಾಗಿಂಗ್ ಮಾಡುತ್ತ ಮೀನು ಫ್ರೈ ಮಾಡಿದ ದೃಶ್ಯ ವೀಕ್ಷಕರಿಗೆ ವಿಭಿನ್ನ ಅನುಭವ ನೀಡಿತ್ತು. ಆದರೆ ತಾಯಿ ಬಂದ ತಕ್ಷಣ ಮಗಳ ಕೂದಲನ್ನು ಸರಿಯಾಗಿ ಬಾಚಿ, “ಕೂದಲು ಸಹ ಸರಿ ಮಾಡಿಕೊಳ್ಳಲ್ಲ” ಎಂದು ತಾಯಿಯ ಪ್ರೀತಿ-ಕ್ಲಾಸ್ ಕೂಡ ಕಂಡುಬಂದಿತ್ತು.
ಮಕ್ಕಳು ಎಷ್ಟು ದೊಡ್ಡವರಾದರೂ ತಾಯಂದಿರ ಮುಂದೆ ಮಕ್ಕಳೇ ಎಂಬುದು ಮತ್ತೆ ಸಾಬೀತಾಯಿತು. ಧ್ರುವಂತ್ ಕೂಡ ರಕ್ಷಿತಾ ತಾಯಿಯ ಬಳಿ ಸಾಷ್ಟಾಂಗ ನಮಸ್ಕಾರ ಹಾಕಿ ಕ್ಷಮೆ ಕೇಳಿದ ದೃಶ್ಯ ಎಲ್ಲರ ಮನ ಗೆದ್ದಿತ್ತು.





