ಬಿಗ್ ಬಾಸ್ ಕನ್ನಡ ಸೀಸನ್ 12ಯಲ್ಲಿ ಈ ವಾರ ಡಬಲ್ ಎಲಿಮಿನೇಷನ್ ಟ್ವಿಸ್ಟ್ ಅಭಿಮಾನಿಗಳನ್ನು ಬೆರಗುಗೊಳಿಸಿದೆ. ಶನಿವಾರದ ಎಪಿಸೋಡ್‌ನಲ್ಲಿ ಅನಿರೀಕ್ಷಿತವಾಗಿ ಸೂರಜ್ ಸಿಂಗ್ ಎಲಿಮಿನೇಟ್ ಆಗಿ ಮನೆಯಿಂದ ಹೊರಬಿದ್ದರು. ಭಾನುವಾರದ ಎಪಿಸೋಡ್‌ನಲ್ಲಿ ಮಾಳು ನಿಪ್ಪನಾಳ್ ಕೂಡ ಎಲಿಮಿನೇಟ್ ಆಗಿ ಡಬಲ್ ಶಾಕ್ ನೀಡಿದ್ದಾರೆ. ಸ್ಪಂದನಾ ಸೇಫ್ ಆಗಿ ಮನೆಯಲ್ಲಿ ಮುಂದುವರೆಯುತ್ತಿದ್ದಾರೆ.
ಈ ವಾರ ಕಿಚ್ಚ ಸುದೀಪ್ ಅವರು ಆಗಮಿಸದೇ ಇದ್ದ ಕಾರಣ ಮಾಜಿ ಸ್ಪರ್ಧಿ ಮತ್ತು ನಟಿ ಅನುಪಮಾ ಗೌಡ ಅತಿಥಿಯಾಗಿ ಬಂದು ಸ್ಪರ್ಧಿಗಳೊಂದಿಗೆ ಫನ್ ಆಕ್ಟಿವಿಟಿಗಳನ್ನು ನಡೆಸಿದರು. ಕಾಫಿ ಕಪ್ ಆಕ್ಟಿವಿಟಿ ಮತ್ತು ಕೈಗೆ ಬಣ್ಣ ಮೆತ್ತುವ ಟಾಸ್ಕ್‌ಗಳ ಮೂಲಕ ನಾಮಿನೇಷನ್‌ನಿಂದ ಕೆಲವರನ್ನು ಕಾಪಾಡಲಾಯಿತು. ರಾಶಿಕಾ, ಧ್ರುವಂತ್, ರಕ್ಷಿತಾ ಸೇರಿದಂತೆ ಕೆಲವರು ಸೇಫ್ ಆದರು.
ಅಂತಿಮವಾಗಿ ಬಾಟಮ್ 2ರಲ್ಲಿ ಮಾಳು ನಿಪ್ಪನಾಳ್ ಮತ್ತು ಸ್ಪಂದನಾ ಉಳಿದರು. ಸ್ಪರ್ಧಿಗಳು ಇಬ್ಬರಲ್ಲಿ ಯಾರು ಉಳಿಯಬೇಕು ಎಂಬ ಬಗ್ಗೆ ಚರ್ಚೆ ನಡೆಸಿದರು. ಬಳಿಕ ಬಿಗ್ ಬಾಸ್ ಎರಡು ಕಾರುಗಳನ್ನು ಕರೆಸಿ, ಮಾಳು ಮತ್ತು ಸ್ಪಂದನಾ ತಲಾ ಒಂದು ಕಾರಿನಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿದರು. ಎರಡೂ ಕಾರುಗಳು ಮನೆಯಿಂದ ಹೊರಹೊರಟವು. ಆದರೆ ವಾಪಸ್ ಬಂದಿದ್ದು ಕೇವಲ ಒಂದು ಕಾರು – ಅದರಿಂದ ಸ್ಪಂದನಾ ಇಳಿದು ಮನೆಗೆ ಮರಳಿದರು. ಇದರಿಂದ ಮಾಳು ನಿಪ್ಪನಾಳ್ ಎಲಿಮಿನೇಟ್ ಆಗಿರುವುದು ದೃಢಪಟ್ಟಿದೆ.
ಈ ವಾರ ಸೂರಜ್ ಸಿಂಗ್ ಮತ್ತು ಮಾಳು ನಿಪ್ಪನಾಳ್ ಎಲಿಮಿನೇಟ್ ಆಗಿದ್ದಾರೆ. ಇಬ್ಬರೂ ಸುದೀಪ್ ಅವರನ್ನು ವೇದಿಕೆಯಲ್ಲಿ ಭೇಟಿಯಾಗುವ ಅವಕಾಶ ಕಳೆದುಕೊಂಡಿದ್ದಾರೆ. ಆದರೆ ಮುಂದಿನ ವಾರ ಇವರನ್ನು ವೇದಿಕೆಗೆ ಕರೆಸುವ ಸಾಧ್ಯತೆಯಿದೆ.
ಪ್ರಸ್ತುತ ಮನೆಯಲ್ಲಿ ಉಳಿದಿರುವ ಸ್ಪರ್ಧಿಗಳು ಅಶ್ವಿನಿ, ರಘು, ಗಿಲ್ಲಿ, ಕಾವ್ಯಾ, ಸ್ಪಂದನಾ, ರಕ್ಷಿತಾ, ಧ್ರುವಂತ್, ಧನುಶ್, ರಾಶಿಕಾ. ಫೈನಲ್ ಹತ್ತಿರವಾಗುತ್ತಿದ್ದಂತೆ ಸ್ಪರ್ಧೆ ಇನ್ನಷ್ಟು ಕಠಿಣವಾಗಲಿದೆ.





