Bigg Boss Kannada Season 12 ಮನೆಗೆ ಈ ವಾರ ಕ್ಯಾಪ್ಟನ್ಸಿ ಟಾಸ್ಕ್ ಹೊಸ ಟ್ವಿಸ್ಟ್‌ಗಳನ್ನು ತಂದಿದೆ. ಈಗಾಗಲೇ ಕೆಲವು ಜೋಡಿಗಳು ಹೊರಬಿದ್ದಿದ್ದು, ಮನೆಯಲ್ಲಿ ಉಳಿದಿರುವ ಸ್ಪರ್ಧಿಗಳು ಮತ್ತಷ್ಟು ಸವಾಲನ್ನು ಎದುರಿಸುತ್ತಿದ್ದಾರೆ. ಈ ಬಾರಿ ಬಿಗ್ ಬಾಸ್ ನೀಡಿರುವ ಟಾಸ್ಕ್ ಸ್ಪರ್ಧಿಗಳ ಬುದ್ಧಿವಂತಿಕೆ, ಟೀಮ್‌ವರ್ಕ್ ಪರೀಕ್ಷೆಯಂತಾಗಿದೆ.
ಪೆಟ್ಟಿಗೆಗಳಲ್ಲಿ ಪುರುಷ ಸ್ಪರ್ಧಿಗಳು-ಮಹಿಳೆಯರು ಕೀ ಹುಡುಕಾಟ
ಬಿಗ್ ಬಾಸ್ ಪುರುಷ ಸ್ಪರ್ಧಿಗಳನ್ನು ಶವ ಪೆಟ್ಟಿಗೆ ಮಾದರಿಯ ಬಾಕ್ಸ್‌ಗಳೊಳಗೆ ಕೂರಿಸಿರುವುದನ್ನು ತೋರಿಸಲಾಗಿದೆ. ಪ್ರತಿ ಜೋಡಿಯ ಮಹಿಳಾ ಸ್ಪರ್ಧಿಗಳೇ ತಮ್ಮ ಪಾರ್ಟ್ನರ್‌ರನ್ನು ಬಿಡುಗಡೆ ಮಾಡಬೇಕಾಗಿರುವ ಟಾಸ್ಕ್ ಇದು. ಮನೆ ಹೊರಗಿನ ವೀಕ್ಷಕರಿಗೆ ಇದು ಕುತೂಹಲವನ್ನು ಸೃಷ್ಟಿಸಿದೆ.
ಕೀ ಹುಡುಕುವಾಗ ಪುರುಷ ಸ್ಪರ್ಧಿಗಳು ಪೆಟ್ಟಿಗೆಯೊಳಗೇ ಸುಳಿವು, ಸೂಚನೆಗಳನ್ನು ನೀಡಿ ತಮ್ಮ ಜೋಡಿದಾರರಿಗೆ ಸಹಕಾರ ನೀಡಬೇಕಿದೆ. ಆದರೆ ಕೀಲಿಯನ್ನು ಪತ್ತೆಹಚ್ಚುವುದು ಸುಲಭವಲ್ಲ. ಹಲವು ಕೀಲುಗಳ ನಡುವೆ ಸರಿಯಾದ ಕೀಲಿಯನ್ನು ಮಹಿಳಾ ಸ್ಪರ್ಧಿಗಳು ಆಯ್ಕೆ ಮಾಡಬೇಕು. ಗೊಂದಲ, ಒತ್ತಡ, ಗಾಬರಿ ಎಲ್ಲವನ್ನೂ ಎದುರಿಸಿ ಪೆಟ್ಟಿಗೆ ತೆರೆಯುವುದು ಈ ಟಾಸ್ಕ್‌ನ ಸವಾಲಾಗಿದೆ.
ಯಾವ ಜೋಡಿ ಕ್ಯಾಪ್ಟನ್ಸಿ ರೇಸ್‌ಗೆ?
ಈ ವಾರದ ಕ್ಯಾಪ್ಟನ್ಸಿ ಟಾಸ್ಕ್ ಅನ್ನು ಜೋಡಿಗಳಾಗಿ ಆಡಲಾಗುತ್ತಿದೆ. ಮನೆಯಲ್ಲಿ ಗಿಲ್ಲಿ–ಕಾವ್ಯ, ರಘು–ಅಶ್ವಿನಿ, ಮಾಳು–ರಕ್ಷಿತಾ, ಸೂರಜ್–ರಾಶಿಕಾ, ಅಭಿ–ಸ್ಪಂದನಾ ಹಾಗೂ ರಜತ್–ಚೈತ್ರಾ ಜೋಡಿಗಳಾಗಿ ಸ್ಪರ್ಧಿಸುತ್ತಿದ್ದಾರೆ.
ರಾಶಿಕಾ–ಸೂರಜ್ ಜೋಡಿ ಹೊರಬಿದ್ದಿದೆ. ಕಾವ್ಯ–ಗಿಲ್ಲಿ ಜೋಡಿ ಕೂಡ ಆಟದಿಂದ ಹೊರಬಿದ್ದಿದೆ ಎನ್ನಲಾಗಿದೆ. ಹೀಗಾಗಿ ಕ್ಯಾಪ್ಟನ್ಸಿ ರೇಸ್‌ನಲ್ಲಿ ಉಳಿದ ಜೋಡಿಗಳ ನಡುವೆ ಭಾರೀ ಪೈಪೋಟಿ ಮೂಡಿದೆ.
ಈವರೆಗಿನ ಟಾಸ್ಕ್‌ಗಳಲ್ಲಿ ಇದುವೇ ಕಡೆಯ ಟಾಸ್ಕ್. ಅತಿ ಹೆಚ್ಚು ಅಂಕ ಗಳಿಸಿದ ಮೂರು ಜೋಡಿಗಳು ಈ ವಾರ ಕ್ಯಾಪ್ಟನ್ಸಿ ಅಭ್ಯರ್ಥಿಗಳಾಗಿ ನಿಲ್ಲಲಿದ್ದಾರೆ. ಹೀಗಾಗಿ ಇಂದು ಯಾರು ಗೆಲ್ಲುತ್ತಾರೆ ಎಂಬುದು ವೀಕ್ಷಕರಲ್ಲಿ ದೊಡ್ಡ ಪ್ರಶ್ನೆಯಾಗಿದೆ.
ಟಾಸ್ಕ್‌ಗಳ ಭಾರಿ ಒತ್ತಡದ ನಡುವೆ, ಮನೆಯಲ್ಲಿ ಮತ್ತೊಂದು ಕುತೂಹಲಕಾರಿ ಕ್ಷಣ ಹೊರಬಿದ್ದಿದೆ. ಗಿಲ್ಲಿ ಅವರು ಧ್ರುವಂತ್ ಜೊತೆ ನಡೆಸಿದ ಹಾಸ್ಯಭರಿತ ಸಂಭಾಷಣೆ ಮನೆಗೆ ನಗು ತರಿಸಿದೆ.
“ನಿನ್ನ ಬಗ್ಗೆ ಪುಸ್ತಕ ಬರೆಯೋಣ ಅಂತಿಂದೆ. ಅದರ ಟೈಟಲ್ ನಾ ಕಂಡ ಧ್ರುವಂತ, ಆಚೆಗೆ ಹೋದ ಜೀವಂತ!” ಎಂದು ಗಿಲ್ಲಿ ಹೇಳಿದಾಗ ಧ್ರುವಂತ್ ಕೂಡ ಖುಷಿಯಾಗಿ ಪ್ರತಿಕ್ರಿಯಿಸಿದ್ದಾರೆ. ಗಿಲ್ಲಿ ಕೇಳಿದ ಪ್ರಶ್ನೆಗಳಿಗೆ ಧ್ರುವಂತ್ ನೀಡಿದ ಫನ್ನಿ ಉತ್ತರಗಳೂ ಪ್ರೇಕ್ಷಕರಿಗೆ ಮನರಂಜನೆ ನೀಡಲಿವೆ. ಇತ್ತೀಚೆಗೆ ಧ್ರುವಂತ್ ಮನೆ ಬಿಟ್ಟುಹೋಗುವ ಬಗ್ಗೆ ಚರ್ಚೆ ನಡೆದಿದ್ದು, ಸುದೀಪ್ ಎದುರಿನಲ್ಲಿ ಕೂಡ ಇದೇ ಮಾತು ಕೇಳಿಬಂದಿತ್ತು. ಈ ಹಾಸ್ಯ ಸಂಭಾಷಣೆ ಆ ವಿಷಯಕ್ಕೆ ಮತ್ತೊಂದು ತಿರುವು ನೀಡಿದಂತಾಗಿದೆ.





