ಬಿಗ್ ಬಾಸ್ ಕನ್ನಡ ಸೀಸನ್ 12 ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ನಿರೂಪಕ ಕಿಚ್ಚ ಸುದೀಪ್ ಅವರು ವೀಕೆಂಡ್ ಎಪಿಸೋಡ್‌ಗೆ ಗೈರಾಗಿದ್ದರೂ, ಮನೆಯೊಳಗಿನ ಘಟನೆಗಳು ಅಭಿಮಾನಿಗಳಿಗೆ ಸಾಕಷ್ಟು ಮನರಂಜನೆ ನೀಡಿವೆ.
ಈ ವಾರ ವಿಶೇಷ ಅತಿಥಿಗಳಾಗಿ ನಟ ಪ್ರೇಮ್ ಹಾಗೂ ಭಾಗ್ಯಲಕ್ಷ್ಮೀ ತಂಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಇವರಿಬ್ಬರೂ ಮನೆಯವರೊಂದಿಗೆ ನಗುನಗುತ್ತಾ ಮಾತುಕತೆ ನಡೆಸಿ, ಬಿಗ್ ಬಾಸ್ ನೀಡಿದ ಕೆಲ ಟಾಸ್ಕ್‌ಗಳನ್ನು ನಿರ್ವಹಿಸಿದ್ದರು.
ನಿರೂಪಕಿ ಹಾಗೂ ಮಾಜಿ ಬಿಗ್ ಬಾಸ್ ಸ್ಪರ್ಧಿ ಅನುಪಮಾ ಅವರು ಮನೆಗೆ ಕಾಲಿಟ್ಟಿದ್ದು, ಸ್ಪರ್ಧಿಗಳಲ್ಲಿ ಹೊಸ ಉತ್ಸಾಹವನ್ನು ಮೂಡಿಸಿತ್ತು. ಅನುಪಮಾ ಅವರು ಮನೆಗೆ ಬಂದ ತಕ್ಷಣ ಎಲ್ಲರಿಗೂ ತಮ್ಮ ಪರಿಚಯವನ್ನು ನೀಡುವಂತೆ ಕೇಳಿದರು. ಈ ಸಂದರ್ಭದಲ್ಲೇ ಅಶ್ವಿನಿ ಗೌಡ ಅವರು ನೀಡಿದ ಮಾತುಗಳು ಮನೆಮಂದಿಯ ಗಮನ ಸೆಳೆದವು.
ಅಶ್ವಿನಿ ಮಾತನಾಡುತ್ತ, “14 ವಾರಗಳಲ್ಲಿ ನಾನು ರಘು ಅವರನ್ನು ಮೊದಲ ಬಾರಿಗೆ ಗಮನಿಸಿದೆ. ಈಗ ಮಗುವಿನಂತೆ ಅವರನ್ನು ನೋಡುತ್ತಿದ್ದೇನೆ. ಈ ಮನೆಯಲ್ಲಿ ಎಲ್ಲರೂ ಪ್ರೀತಿಯಿಂದ ರಘು ಅಣ್ಣ ಅಂತ ಕರೀತಾರೆ. ನಾನೂ ರಘು ಅಣ್ಣ ಅಂತ ಕರಿಬೇಕು ಅನ್ಸುತ್ತೆ. ಅವರು ನನ್ನನ್ನು ಅರ್ಥ ಮಾಡಿಕೊಂಡಿದ್ದಾರೆ, ನಾನೂ ಅವರನ್ನು ಅರ್ಥ ಮಾಡಿಕೊಂಡಿದ್ದೇನೆ” ಎಂದು ಹೇಳಿದರು. ಈ ಮಾತುಗಳು ತುಂಬಾ ಆತ್ಮೀಯವಾಗಿ ಕೇಳಿಬಂದವು.
ಇದಕ್ಕೆ ಪ್ರತಿಕ್ರಿಯಿಸಿದ ರಘು, ಅಶ್ವಿನಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು. ಇವರಿಬ್ಬರ ನಡುವಿನ ಈ ಸಂಭಾಷಣೆ ಮನೆಮಂದಿಗೆ ಮನರಂಜನೆ ನೀಡಿದರೆ, ಗಿಲ್ಲಿ ನಟ “ಇದು ಸ್ವಯಂವರದ ರೀತಿ ಫೀಲ್ ಆಗ್ತಿದೆ” ಎಂದು ಕಾಮೆಂಟ್ ಮಾಡಿ ಎಲ್ಲರನ್ನೂ ನಗಿಸಿದರು. ಈ ಸನ್ನಿವೇಶ ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗಿದೆ.
ಇನ್ನೊಂದೆಡೆ, ಫ್ಯಾಮಿಲಿ ವೀಕ್ ಅಧಿಕೃತವಾಗಿ ಮುಕ್ತಾಯಗೊಂಡಿದ್ದು, ಸೀಸನ್ ಅಂತ್ಯ ಹತ್ತಿರವಾಗುತ್ತಿದೆ. ಇದರಿಂದ ಸ್ಪರ್ಧಿಗಳಲ್ಲಿ ಎಲಿಮಿನೇಷನ್ ಭೀತಿ ಹೆಚ್ಚಾಗಿದೆ. ಈ ವಾರ ಒಂದಲ್ಲ, ಇಬ್ಬರು ಸ್ಪರ್ಧಿಗಳು ಮನೆ ಬಿಡಬೇಕಾಗುತ್ತದೆ ಎಂಬ ಸುದ್ದಿ ಈಗಾಗಲೇ ಹರಡಿತ್ತು.
ಆದರೆ ವೀಕ್ಷಕರು ಊಹಿಸದ ಟ್ವಿಸ್ಟ್ ಒಂದನ್ನು ಬಿಗ್ ಬಾಸ್ ನೀಡಿದ್ದಾರೆ. ಭಾನುವಾರ ಎಲಿಮಿನೇಷನ್ ನಡೆಯುತ್ತದೆ ಎಂದು ಎಲ್ಲರೂ ನಿರೀಕ್ಷಿಸಿದ್ದರೂ, ಆದರೆ ಶನಿವಾರವೇ ಒಂದು ಎಲಿಮಿನೇಷನ್ ನಡೆದಿದೆ. ಬೆಳಿಗ್ಗೆ ಎದ್ದ ತಕ್ಷಣ ಎಲ್ಲರಿಗೂ ಗಾರ್ಡನ್ ಏರಿಯಾಗೆ ಬರಲು ಬಿಗ್ ಬಾಸ್ ಸೂಚಿಸಿದರು. ಅಲ್ಲಿ ಮುಖ್ಯದ್ವಾರದ ಬಳಿ ತಿರುಗುವ ವಸ್ತುವೊಂದನ್ನು ಇಡಲಾಗಿತ್ತು.
ನಾಲ್ವರು ಸ್ಪರ್ಧಿಗಳನ್ನು ಅದರ ಮೇಲೆ ನಿಲ್ಲಿಸಲಾಯಿತು. ಮತಗಳ ಲೆಕ್ಕಾಚಾರದ ಬಳಿಕ, ಕಡಿಮೆ ಮತ ಪಡೆದ ಸೂರಜ್ ಅವರನ್ನು ತಕ್ಷಣವೇ ಮನೆಯಿಂದ ಹೊರಗೆ ಕಳುಹಿಸಲಾಯಿತು. ಇದು ಮನೆಮಂದಿಗೂ, ವೀಕ್ಷಕರಿಗೂ ಭಾರೀ ಶಾಕ್ ನೀಡಿತ್ತು. ತಮ್ಮದೇ ಸ್ಟ್ರಾಟೆಜಿಯೊಂದಿಗೆ ಆಟವಾಡುತ್ತಿದ್ದ ಸೂರಜ್ ಅವರ ಎಲಿಮಿನೇಷನ್ ಅನೇಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.
ಇದರ ಜೊತೆಗೆ, ಸ್ಪಂದನಾ ಸೋಮಣ್ಣ ಕೂಡ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಡಬಲ್ ಎಲಿಮಿನೇಷನ್ ಸೀಸನ್ ಅಂತ್ಯಕ್ಕೆ ಇನ್ನಷ್ಟು ರೋಚಕತೆ ತಂದಿದೆ.





