ಬಿಗ್ ಬಾಸ್ ಕನ್ನಡ ಸೀಸನ್ 12ರ ವಿಜೇತ ಗಿಲ್ಲಿ ನಟ ಮೂರು ತಿಂಗಳ ಬಳಿಕ ಕಪ್ ಗೆದ್ದು ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ಬಿಗ್‌ಬಾಸ್ ಟ್ರೋಫಿ ಜತೆ ತಮ್ಮ ಹುಟ್ಟೂರಿಗೆ ಮರಳಿದ ಗಿಲ್ಲಿ ಅವರಿಗೆ ಅದ್ಭುತ ಸ್ವಾಗತ ಸಿಕ್ಕಿದೆ. ಇದನ್ನ ಕಂಡು ಗಿಲ್ಲಿ ಸಂಪೂರ್ಣವಾಗಿ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಭಾವುಕರಾಗಿದ್ದಾರೆ.
ಬಿಗ್‌ಬಾಸ್ ಮನೆಯಿಮದ ಬಂದ ನಂತರ ಮೊದಲ ಬಾರಿಗೆ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯಿಸಿರುವ ಗಿಲ್ಲಿ, ಜನರಿಂದ ಇಷ್ಟೊಂದು ಪ್ರೋತ್ಸಾಹ ಮತ್ತು ಅಭಿಮಾನ ಸಿಗುತ್ತಿರುವುದನ್ನ ನಾನು ನಂಬಲು ಸಾಧ್ಯವಾಗುತ್ತಿಲ್ಲ. ಬಿಗ್ ಬಾಸ್ ಮನೆಯಲ್ಲಿದ್ದಾಗಲೇ ಈ ಎಲ್ಲ ಬೆಂಬಲ ನನಗೆ ದೊರೆಯುತ್ತಿದೆಯೆಂದು ಗೊತ್ತಿರಲಿಲ್ಲ ಎಂದು ಅಭಿಮಾನಿಗಳಿಗೆ ಕೃತಜ್ಞತೆಯನ್ನು ತಿಳಿಸಿದ್ದಾರೆ.
ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು. ನನ್ನ ಗೆಲುವಿಗಾಗಿ ವೋಟ್ ಮಾಡಿದ ಪ್ರತಿಯೊಬ್ಬರಿಗೂ, ನನ್ನ ಹೆಸರಿನಲ್ಲಿ ಹರಕೆ ಹೊತ್ತವರಿಗೂ, ಟ್ಯಾಟೂ ಹಾಕಿಸಿಕೊಂಡ ಅಭಿಮಾನಿಗಳಿಗೂ, ಮಾಧ್ಯಮಗಳಿಗೂ ಮತ್ತು ಸೋಶಿಯಲ್ ಮೀಡಿಯಾದಲ್ಲಿ ನಿರಂತರ ಬೆಂಬಲ ನೀಡಿದ ಎಲ್ಲರಿಗೂ ನನ್ನ ಧನ್ಯವಾದ ಎಂದು ಹೇಳಿದ್ದಾರೆ.
ಈ ವಿಡಿಯೋ ಕ್ಯಾಪ್ಷನ್‌ನಲ್ಲಿ, ಇಷ್ಟು ದೂರ ಕರ್ಕೊಂಡು ಬಂದಿದ್ದೀರಾ.. ಮನಸ್ಸಲ್ಲಿ ಜಾಗ ಕೊಟ್ಟಿದ್ದೀರಾ.. ಕೈ ಮೇಲೆ ಹಚ್ಚೆ ಹಾಕಿಸ್ಕೊಂಡಿದ್ದೀರಾ.. ನಿರಂತರವಾಗಿ ಬೆಂಬಲಿಸಿದ್ದೀರಾ.. ಇದುವರೆಗೂ ಬರಿ ರನ್ನರ್ ಅಪ್ ಆಗೇ ಉಳ್ಕೊತಿದ್ದ ಗಿಲ್ಲಿಗೆ ಗೆಲುವಿನ ಕಿರೀಟ ತೊಡಿಸಿದ್ದೀರಾ.. ಮೆರೆಸಿದ್ದೀರಾ.. ಈ ಪ್ರೀತಿಗೆ ಏನು ಹೇಳಿದ್ರು, ಎಷ್ಟು ಹೇಳಿದ್ರು ಕಡಿಮೇನೆ. ಗಿಲ್ಲಿ ಗೆಲುವಿಗಾಗಿ ವೋಟ್ ಮಾಡಿದವರಿಗೆ, ಹರಕೆ ಹೊತ್ತೋರಿಗೆ, ಅಭಿಮಾನದಿಂದ ಜೊತೆ ನಿಂತೋರಿಗೆ ರೆಲೆಂಟ್ ಕ್ರಿಯೇಷನ್ಸ್ ಕಡೆಯಿಂದ ದೊಡ್ಡ ನಮಸ್ಕಾರ ಹಾಗೂ ತುಂಬು ಹೃದಯದ ಧನ್ಯವಾದಗಳು. ಈ ಗೆಲುವಿನ ಬೆನ್ನಲ್ಲೇ ಹೊಸ ಹೆಜ್ಜೆ ಹೊಸ ದಾರಿ ಕಡೆ ಮುಖ ಮಾಡೋ ಹೊತ್ತು!!
ಈ ಕೊನೆಯ ಬರಹವು ಗಿಲ್ಲಿ ನಟ ಭವಿಷ್ಯದ ಯೋಜನೆಗಳ ಬಗ್ಗೆ ಸೂಚನೆ ನೀಡಿದೆ. ಹೊಸ ಹೆಜ್ಜೆ ಹೊಸ ದಾರಿ ಎಂಬ ಬರಹವು ಅಭಿಮಾನಿಗಳಲ್ಲಿ ಹೊಸ ಕುತೂಹಲವನ್ನು ಸೃಷ್ಟಿಸಿದೆ. ಬಹುಶಃ ಬಿಗ್ ಬಾಸ್ ಗೆಲುವಿನ ನಂತರ ಹೊಸ ಯೋಜನೆಗಳ ಕಡೆ ಗಮನ ಹರಿಸಲಿದ್ದಾರೆ ಎಂದು ಅಭಿಮಾನಿಗಳು ಯೋಚಿಸಿದ್ದಾರೆ.
ಈ ನಡುವೆ, ಗಿಚ್ಚಿ ಗಿಲಿಗಿಲಿ ಎಂಬ ಹೊಸ ಶೋ ಬರಲಿದ್ದು ಅದರ ನಿರೂಪಕರಾಗಿ ಗಿಲ್ಲಿ ನಟ ಅವರು ಕಾಣಿಸಿಕೊಳ್ಳಬಹುದೇ ಎಂಬ ಪ್ರಶ್ನೆಗಳು ಹೊರಹೊಮ್ಮಿವೆ. ಕೆಲವರು ಈ ಶೋಗೆ ಗಿಲ್ಲಿ ನಟ ನಿರೂಪಕರಾಗಬೇಕು ಎಂದು ಬೇಡಿಕೆ ಸಹ ಮಾಡಿದ್ದಾರೆ. ಗಿಲ್ಲಿ ಅವರ ಮುಂದಿನ ನಡೆ ಏನಾಗಬಹುದು ಎಂಬುದು ಇದೀಗ ಎಲ್ಲರ ಕುತೂಹಲದ ಕೇಂದ್ರವಾಗಿದೆ.





