ಬೆಂಗಳೂರು, ಮಾರ್ಚ್ 30: ಹೊಸ ಹಣಕಾಸು ವ್ಯವಸ್ಥೆ ಆರಂಭವಾಗುತ್ತಿದ್ದಂತೆಯೇ ಕರ್ನಾಟಕದ ಗ್ರಾಹಕರಿಗೆ ದೊಡ್ಡ ಆಘಾತ ಎದುರಾಗಲಿದೆ. ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂ) ಅನುಭವಿಸುತ್ತಿರುವ ಭಾರೀ ನಷ್ಟವನ್ನು ಸರಿದೂಗಿಸುವ ನಿಟ್ಟಿನಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್ಸಿ) ಯೂನಿಟ್‌ಗೆ ಸರಾಸರಿ 40 ರಿಂದ 45 ಪೈಸೆಗಳಷ್ಟು ವಿದ್ಯುತ್ ದರ ಹೆಚ್ಚಳ ಮಾಡಲು ಸಜ್ಜಾಗಿದೆ. ಉಪಚುನಾವಣೆ ನೀತಿ ಸಂಹಿತೆ ಮುಗಿಯುತ್ತಿದ್ದಂತೆ ಏಪ್ರಿಲ್ 1ರಿಂದ ಪೂರ್ವಾನ್ವಯ ಆಗುವಂತೆ ಅಧಿಕೃತ ಆದೇಶ ಹೊರಬೀಳುವ ನಿರೀಕ್ಷೆಯಿದೆ.
ಎಸ್ಕಾಂಗಳ ನಷ್ಟ ಎಷ್ಟು?
ವಿದ್ಯುತ್ ಸರಬರಾಜು ಕಂಪನಿಗಳು ಇತ್ತೀಚೆಗೆ ಕೆಇಆರ್ಸಿಗೆ ಸಲ್ಲಿಸಿದ ತಮ್ಮ ವಾರ್ಷಿಕ ಕಾರ್ಯಕ್ಷಮತೆ ವರದಿ (ಎಆರ್ಆರ್) ಪ್ರಕಾರ, ಒಟ್ಟು 4,900 ಕೋಟಿ ರೂಪಾಯಿಗಳಷ್ಟು ಆದಾಯದ ಕೊರತೆ (ಆದಾಯ ಖೋತಾ) ಉಂಟಾಗಿದೆ. ಈ ನಷ್ಟವನ್ನು ಸರಿದೂಗಿಸಲು ಎಸ್ಕಾಂಗಳು ಯೂನಿಟ್‌ಗೆ ಸರಾಸರಿ 68 ಪೈಸೆಗಳಷ್ಟು ಹೆಚ್ಚಳ ಮಾಡಬೇಕೆಂದು ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು. ಆದರೆ ಆಯೋಗವು ಈ ಪ್ರಸ್ತಾವನೆಯನ್ನು ಅಳೆದು ತೂಗಿ ಸರಾಸರಿ 40 ರಿಂದ 45 ಪೈಸೆಗಳಷ್ಟು ಹೆಚ್ಚಳ ಮಾಡಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಬೆಸ್ಕಾಂ ಗ್ರಾಹಕರಿಗೆ ಅಘಾತ
ಬೆಂಗಳೂರು ಮಹಾನಗರದ ವಿದ್ಯುತ್ ವ್ಯಾಪ್ತಿಯಲ್ಲಿರುವ ಬೆಸ್ಕಾಂ ಗ್ರಾಹಕರಿಗೆ ಈ ದರ ಏರಿಕೆಯ ಆಘಾತ ತಂದಿದೆ. ಒಟ್ಟು 4,900 ಕೋಟಿ ರೂಪಾಯಿಗಳ ನಷ್ಟದಲ್ಲಿ ಬೆಸ್ಕಾಂನ ನಷ್ಟದ ಬಾಬತ್ತು ಅತಿಹೆಚ್ಚು ಅಂದರೆ 2,03 ಕೋಟಿ ರೂಪಾಯಿಗಳಷ್ಟಿದೆ. ಈ ಹಿನ್ನೆಲೆಯಲ್ಲಿ ಬೆಸ್ಕಾಂ ವ್ಯಾಪ್ತಿಯ ಗ್ರಾಹಕರಿಗೆ ಯೂನಿಟ್‌ಗೆ ಸುಮಾರು 55 ಪೈಸೆಗಳಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಉಪಚುನಾವಣೆಯ ನಂತರ ಆದೇಶ
ರಾಜ್ಯದಲ್ಲಿ ಉಪಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ, ವಿದ್ಯುತ್ ದರ ಪರಿಷ್ಕರಣೆ ಕುರಿತು ತಕ್ಷಣ ಅಧಿಕೃತ ಆದೇಶ ಹೊರಡಿಸಲು ಸಾಧ್ಯವಿಲ್ಲ. ಏಪ್ರಿಲ್ 9 ರಂದು ಉಪಚುನಾವಣೆ ಮತದಾನ ನಡೆಯಲಿದೆ. ಮತದಾನ ಮುಗಿಯುತ್ತಿದ್ದಂತೆ ಏಪ್ರಿಲ್ 1 ರಿಂದ ಪೂರ್ವಾನ್ವಯ ಆಗುವಂತೆ ದರ ಪರಿಷ್ಕರಣೆ ಆದೇಶ ಹೊರಬೀಳುವ ನಿರೀಕ್ಷೆಯಿದೆ.
ಈಗಾಗಲೇ ವಾಣಿಜ್ಯ, ಕೈಗಾರಿಕೆಗಳಿಗೆ ಏರಿಕೆ
ಈ ಹಿಂದೆಯೇ ಮಾರ್ಚ್ 3 ರಂದು ಮರುಪರಿಶೀಲನಾ ಅರ್ಜಿಗೆ ಸಂಬಂಧಿಸಿದಂತೆ ಆಯೋಗವು ವಾಣಿಜ್ಯ ಮತ್ತು ಕೈಗಾರಿಕಾ ವಲಯಗಳಿಗೆ ಪ್ರತಿ ಯೂನಿಟ್‌ಗೆ ಕನಿಷ್ಠ 10 ಪೈಸೆಯಿಂದ ಗರಿಷ್ಠ 95 ಪೈಸೆಗಳಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು. ಈಗ ಸಾರ್ವಜನಿಕ ಮತ್ತು ಮನೆ ಬಳಕೆಯ ಗ್ರಾಹಕರಿಗೂ ದರ ಏರಿಕೆಯ ಹೊರೆ ಬೀಳಲಿದೆ.
ಬಹುವಾರ್ಷಿಕ ದರ ಪದ್ಧತಿ ಅಡಿ ಏರಿಕೆ
ಬಹುವಾರ್ಷಿಕ ದರ ಪದ್ಧತಿ ಅಡಿಯಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಪ್ರತಿ ಯೂನಿಟ್‌ಗೆ 35 ಪೈಸೆ ವಸೂಲು ಮಾಡಲಾಗುತ್ತಿದೆ. ಇದರ ಹೊರತಾಗಿಯೂ ಎಸ್ಕಾಂಗಳು ಅನುಭವಿಸುತ್ತಿರುವ ನಷ್ಟವನ್ನು ಸರಿದೂಗಿಸಲು ಮತ್ತೆ ಯೂನಿಟ್‌ಗೆ ಸರಾಸರಿ 40-45 ಪೈಸೆ ಹೆಚ್ಚಳ ಮಾಡಲಾಗುತ್ತಿದೆ. ಒಟ್ಟಾರೆ ಏರಿಕೆಯ ಪ್ರಮಾಣ ಸುಮಾರು 75-80 ಪೈಸೆಗಳಷ್ಟಾಗಲಿದೆ ಎಂದು ಅಂದಾಜಿಸಲಾಗಿದೆ.





