ತುಳು ಸಿನಿಮಾಗಳ ಮೂಲಕ ಸಿನಿರಂಗಕ್ಕೆ ಕಾಲಿಟ್ಟು, ನಂತರ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಮಿಂಚುತ್ತಿರುವ ನಟಿ ಸೋನಲ್ ಮೊಂಥೆರೋ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ನಟಿ ಸೋನಲ್ ಮೊಂಥೆರೋ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಸೋನಲ್ ತುಂಬು ಗರ್ಭಿಣಿಯಂತೆ ಕಾಣಿಸಿಕೊಂಡಿರುವುದರಿಂದ ಅವರು ತಾಯಿಯಾಗುತ್ತಿದ್ದಾರೆ ಎಂಬ ಊಹಾಪೋಹಗಳು ಹರಡಿವೆ. ಆದರೆ ಈ ವಿಡಿಯೋಗೂ ನಿಜಕ್ಕೂ ಸಂಬಂಧವಿದೆಯೇ ಎಂಬ ಪ್ರಶ್ನೆಗೆ ಇಲ್ಲಿದೆ ಸ್ಪಷ್ಟ ಉತ್ತರ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಸೋನಲ್ ಮೊಂಥೆರೋ ಹಸಿರು ಬಣ್ಣದ ಜರಿ ಸೀರೆ, ಹಳದಿ ಬಣ್ಣದ ಬ್ಲೌಸ್ ಧರಿಸಿ, ಕಿವಿಯೋಲೆ, ಮುಂದಾಲೆ, ನೆಕ್ಲೆಸ್ ಸೇರಿದಂತೆ ಸಂಪೂರ್ಣ ಆಭರಣಗಳನ್ನು ಧರಿಸಿ, ತಲೆ ತುಂಬಾ ಮಲ್ಲಿಗೆ ಹೂವು ಮುಡಿದು ಮುದ್ದಾಗಿ ನಗು ಬೀರುತ್ತಿರುವುದು ಕಾಣಿಸುತ್ತದೆ. ಅವರಿಗೆ ಹಸಿರು ಸೀರೆಯನ್ನು ಉಡಿಸಲಾಗುತ್ತಿರುವ ದೃಶ್ಯವಿದೆ. ಈ ವಿಡಿಯೋ ನೋಡಿದವರಿಗೆ ನಟಿ ಸೀಮಂತ ಸಮಾರಂಭಕ್ಕೆ ತಯಾರಿ ನಡೆಸುತ್ತಿರುವಂತೆ ಭಾಸವಾಗುತ್ತದೆ. ಹೀಗಾಗಿ ಸೋನಲ್ ತಾಯಿಯಾಗುತ್ತಿದ್ದಾರೆ ಎಂಬ ವದಣತಿ ಹರಡಿದೆ.
ಆದರೆ ನಿಜವೇನು?
ವೈರಲ್ ವಿಡಿಯೋದಲ್ಲಿ ಕಾಣಿಸಿರುವಂತೆ ಸೋನಲ್ ಮೊಂಥೆರೋ ಅವರು ಗರ್ಭಿಣಿಯಾಗಿಲ್ಲ. ಅಲ್ಲಿನ ದೃಶ್ಯ ನಿಜ ಜೀವನದ ಸೀಮಂತವೂ ಅಲ್ಲ. ಇದು ಅವರು ನಟಿಸುತ್ತಿರುವ ‘ರಾಧೇಯಾ’ ಎಂಬ ಸಿನಿಮಾದ ಶೂಟಿಂಗ್ ಸೆಟ್‌ನ ದೃಶ್ಯವಾಗಿದೆ. ಈ ಸಿನಿಮಾದಲ್ಲಿ ಸೋನಲ್ ಅವರು ಗರ್ಭಿಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೆಟ್‌ನಲ್ಲಿ ಯಾರೋ ತೆಗೆದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿದೆ. ಇದರಿಂದಾಗಿ ಸುಳ್ಳು ಸುದ್ದಿ ಹರಡುವಂತಾಗಿದೆ.
ಸೋನಲ್ ಮತ್ತು ತರುಣ್ ಲವ್ ಸ್ಟೋರಿ
ಸೋನಲ್ ಮೊಂಥೆರೋ ಅವರು 2024ರ ಆಗಸ್ಟ್ 11 ರಂದು ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕ ತರುಣ್ ಸುಧೀರ್ ಅವರನ್ನು ವಿವಾಹವಾಗಿದ್ದರು. ದರ್ಶನ್ ನಟನೆಯ ‘ರಾಬರ್ಟ್’ ಚಿತ್ರದ ನಿರ್ದೇಶನದ ವೇಳೆ ಇವರಿಬ್ಬರ ಪರಿಚಯವಾಗಿತ್ತು. ಆ ಚಿತ್ರದಲ್ಲಿ ಸೋನಲ್ ಕೂಡ ನಟಿಸಿದ್ದರು. ಆರಂಭದಲ್ಲಿ ಸ್ನೇಹಿತರಾಗಿದ್ದ ಇವರು ಬಳಿಕ ಈ ಜೋಡಿಯ ವಿವಾಹ ನಡೆದಿತ್ತು.
ಮದುವೆಯಾದ ಬಳಿಕವೂ ಸೋನಲ್ ಅವರಿಗೆ ಗರ್ಭಧಾರಣೆಯ ಬಗ್ಗೆ ಹಲವು ಬಾರಿ ಪ್ರಶ್ನೆಗಳು ಕೇಳಿಬಂದಿವೆ. ಹಿಂದೆ ಒಂದು ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದರು. “ಪ್ಲ್ಯಾನಿಂಗ್ ಅಂತೆಲ್ಲಾ ಏನು ಇಲ್ಲ. ದೇವರ ಆಶೀರ್ವಾದ ಯಾವಾಗ ಆಗಿದ್ರು ಸರಿ, ಅದನ್ನು ನಾನು ಒಪ್ಪಿಕೊಳ್ತೀನಿ” ಎಂದು ಹೇಳಿದ್ದರು. ಈಗ ವೈರಲ್ ವಿಡಿಯೋದಿಂದಾಗಿ ಮತ್ತೊಮ್ಮೆ ಈ ವಿಚಾರ ಚರ್ಚೆಗೆ ಬಂದಿದೆ.
ಸಿನಿಮಾ ಸೆಟ್ ವಿಡಿಯೋ ವೈರಲ್- ಸುಳ್ಳು ಸುದ್ದಿಗೆ ಆಸ್ಪದ
ರಾಧೇಯಾ ಸಿನಿಮಾದ ಸೆಟ್ನಿಂದ ಹೊರಬಿದ್ದ ಈ ವಿಡಿಯೋವನ್ನು ಅನೇಕರು ನಿಜವಾದ ಸೀಮಂತ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಆದರೆ ಸತ್ಯವನ್ನು ತಿಳಿದುಕೊಂಡ ಬಳಿಕ ಸೋನಲ್ ಅವರ ಅಭಿಮಾನಿಗಳು ನಿರಾಳರಾಗಿದ್ದಾರೆ. ಸಿನಿಮಾ ಸೆಟ್‌ನ ದೃಶ್ಯಗಳನ್ನು ವೈಯಕ್ತಿಕ ಜೀವನದ ಘಟನೆಗಳೆಂದು ತಪ್ಪಾಗಿ ಹರಡುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.





