ನವದೆಹಲಿ: ದೇಶದ ರಾಜಧಾನಿ ದೆಹಲಿಯ ಜನನಿಬಿಡ ಪ್ರದೇಶವಾದ ಕರೋಲ್ ಬಾಗ್‌ನಲ್ಲಿ ಮಂಗಳವಾರ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಡಬಲ್ ಡೆಕ್ಕರ್ ಸ್ಲೀಪರ್ ಬಸ್ಸೊಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದು, 23ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಘಟನೆಯ ಹಿನ್ನೆಲೆ
ರಾಜಸ್ಥಾನದ ಜೈಪುರದಿಂದ ದೆಹಲಿಗೆ ಪ್ರಯಾಣಿಕರನ್ನು ಹೊತ್ತು ತರುತ್ತಿದ್ದ ಖಾಸಗಿ ಸ್ಲೀಪರ್ ಬಸ್, ಮುಂಜಾನೆ ಸುಮಾರು 1 ಗಂಟೆಯ ವೇಳೆಗೆ ಕರೋಲ್ ಬಾಗ್‌ನ ಝಂಡೆವಾಲನ್ ದೇವಸ್ಥಾನದ ಸಮೀಪ ಬರುತ್ತಿದ್ದಂತೆ ಈ ದುರ್ಘಟನೆ ಸಂಭವಿಸಿದೆ. ಬಸ್ ಚಾಲಕನ ನಿಯಂತ್ರಣ ತಪ್ಪಿದ್ದೇ ಅಪಘಾತಕ್ಕೆ ಪ್ರಾಥಮಿಕ ಕಾರಣ ಎಂದು ಶಂಕಿಸಲಾಗಿದೆ. ಅಪಘಾತದಲ್ಲಿ ಬಸ್ ರಸ್ತೆಯ ಮಧ್ಯದಲ್ಲೇ ಉರುಳಿ ಬಿದ್ದಿದೆ.
ನವರಾತ್ರಿ ಸಂಭ್ರಮದ ನಡುವೆ ಆತಂಕ
ಪ್ರಸಿದ್ಧ ಝಂಡೆವಾಲನ್ ದೇವಸ್ಥಾನದಲ್ಲಿ ಪ್ರಸ್ತುತ ನವರಾತ್ರಿ ಉತ್ಸವದ ಆಚರಣೆಗಳು ನಡೆಯುತ್ತಿವೆ. ದೇವಸ್ಥಾನಕ್ಕೆ ಭಕ್ತರ ಆಗಮನ ಇರುವ ಸಮಯದಲ್ಲೇ ಈ ಘಟನೆ ನಡೆದಿದ್ದು, ಸ್ಥಳೀಯರಲ್ಲಿ ಭೀತಿ ಮೂಡಿಸಿದೆ. ಬಸ್ ಪಲ್ಟಿಯಾದ ಶಬ್ದ ಕೇಳಿ ಸ್ಥಳೀಯರು ಮತ್ತು ದೇವಸ್ಥಾನದ ಬಳಿ ಇದ್ದ ಭಕ್ತರು ತಕ್ಷಣವೇ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ.
ಘಟನಾ ಸ್ಥಳಕ್ಕೆ ಎರಡು ಅಗ್ನಿಶಾಮಕ ದಳದ ವಾಹನಗಳು ಮತ್ತು ಪೊಲೀಸರು ತಕ್ಷಣವೇ ಧಾವಿಸಿ ಬಂದರು. ಬಸ್ಸಿನ ಒಳಗೆ ಸಿಲುಕಿಕೊಂಡಿದ್ದ ಪ್ರಯಾಣಿಕರನ್ನು ಹೊರತೆಗೆಯಲು ಹರಸಾಹಸ ಪಡಬೇಕಾಯಿತು. ಅಪಘಾತದ ದೃಶ್ಯಗಳು ಎದೆಝಲ್ಲೆನಿಸುವಂತಿದ್ದು, ಬಸ್ಸಿನ ಗಾಜುಗಳು ಪುಡಿಯಾಗಿವೆ, ಸೀಟುಗಳು ನಜ್ಜುಗುಜ್ಜಾಗಿ ರಸ್ತೆಯ ಮೇಲೆ ಬಿದ್ದಿದ್ದವು. ಗಾಯಗೊಂಡ 23 ಪ್ರಯಾಣಿಕರನ್ನು ತಕ್ಷಣವೇ ಸಮೀಪದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.





