ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಐಪಿಎಲ್ (IPL) ಅಬ್ಬರ ಶುರುವಾಗಿದೆ. ಮಾರ್ಚ್ 28 ಮತ್ತು ಏಪ್ರಿಲ್ 4 ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೈವೋಲ್ಟೇಜ್ ಪಂದ್ಯಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಕ್ರೀಡಾಂಗಣದ ಸುತ್ತಮುತ್ತ ಸಂಚಾರ ದಟ್ಟಣೆ ನಿಯಂತ್ರಿಸಲು ಮತ್ತು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಬೆಂಗಳೂರು ಸಂಚಾರ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಸ್ಟೇಡಿಯಂ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.
ಈ ರಸ್ತೆಗಳಲ್ಲಿ ಪಾರ್ಕಿಂಗ್ ಮಾಡುವಂತಿಲ್ಲ
ಪಂದ್ಯ ನಡೆಯುವ ದಿನಗಳಂದು ಕ್ರೀಡಾಂಗಣದ ಸುತ್ತಮುತ್ತಲಿನ ಈ ಕೆಳಗಿನ ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ನಿರ್ಬಂಧಿಸಲಾಗಿದೆ:
-
ಕ್ವೀನ್ಸ್ ರಸ್ತೆ: ಬಾಳೇಕುಂದ್ರಿ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ ಮತ್ತು ಸಿ.ಟಿ.ಒ ಜಂಕ್ಷನ್ ವರೆಗೆ ರಸ್ತೆಯ ಎರಡೂ ಬದಿ.
-
ಎಂ.ಜಿ. ರಸ್ತೆ: ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ ಎರಡೂ ಬದಿಗಳಲ್ಲಿ ಪಾರ್ಕಿಂಗ್ ನಿಷೇಧ.
-
ಕಬ್ಬನ್ ರಸ್ತೆ: ಸಿ.ಟಿ.ಒ ವೃತ್ತದಿಂದ ಡಿಕನ್ಸನ್ ರಸ್ತೆ ಜಂಕ್ಷನ್ ವರೆಗೆ. ಇಲ್ಲಿ ಬಿಎಂಟಿಸಿ ಬಸ್‌ಗಳನ್ನು ಹೊರತುಪಡಿಸಿ ಉಳಿದ ವಾಹನಗಳಿಗೆ ಪ್ರವೇಶವಿಲ್ಲ.
-
ರಾಜಭವನ ರಸ್ತೆ: ಟಿ.ಚೌಡಯ್ಯ ರಸ್ತೆ ಮತ್ತು ರೇಸ್ ಕೋರ್ಸ್ ರಸ್ತೆಗಳಲ್ಲಿ ನಿಲುಗಡೆ ನಿಷೇಧ.
-
ಇತರೆ ರಸ್ತೆಗಳು: ಸೆಂಟ್ರಲ್ ಸ್ಟ್ರೀಟ್, ಸೇಂಟ್ ಮಾರ್ಕ್ಸ್ ರಸ್ತೆ (ಕ್ಯಾಶ್ ಫಾರ್ಮಸಿ ಜಂಕ್ಷನ್ ವರೆಗೆ), ಮ್ಯೂಸಿಯಂ ರಸ್ತೆ, ಕಸ್ತೂರಬಾ ರಸ್ತೆ, ಲಾವೆಲ್ಲೆ ರಸ್ತೆ ಮತ್ತು ವಿಠಲ್ ಮಲ್ಯ ರಸ್ತೆ.
-
ಕಬ್ಬನ್ ಪಾರ್ಕ್ ಒಳಗಡೆ: ಕಿಂಗ್ ರಸ್ತೆ, ಪ್ರೆಸ್ ಕ್ಲಬ್ ಮುಂಭಾಗ, ಬಾಲಭವನ ಮತ್ತು ಫೌಂಟೇನ್ ರಸ್ತೆಗಳಲ್ಲಿ ಪಾರ್ಕಿಂಗ್ ಮಾಡುವಂತಿಲ್ಲ.
ವಾಹನ ನಿಲುಗಡೆಗೆ ಎಲ್ಲಿ ಅವಕಾಶವಿದೆ ?
ಸಾರ್ವಜನಿಕರ ಅನುಕೂಲಕ್ಕಾಗಿ ಬೆಳಗ್ಗೆ 11ರಿಂದ ರಾತ್ರಿ 9ರ ವರೆಗೆ ಈ ಕೆಳಗಿನ ಸ್ಥಳಗಳಲ್ಲಿ ಪಾರ್ಕಿಂಗ್‌ಗೆ ಅವಕಾಶ ನೀಡಲಾಗಿದೆ:
-
ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನ (ಸಿದ್ದಲಿಂಗಯ್ಯ ವೃತ್ತದ ಬಳಿ).
-
ಸೇಂಟ್ ಜೋಸೆಫ್ ಯುರೋಪಿಯನ್ ಸ್ಕೂಲ್ ಮೈದಾನ (ಮ್ಯೂಸಿಯಂ ರಸ್ತೆ).
-
ಫ್ರೀಡಂ ಪಾರ್ಕ್ ಎಂಎಲ್‌ಸಿಪಿ (ಬಹುಮಡಿ ವಾಹನ ನಿಲುಗಡೆ ಸಂಕೀರ್ಣ).
-
ಗರುಡ ಮಾಲ್ ಮತ್ತು ಯುಬಿಸಿಟಿ (UB City) ಪಾರ್ಕಿಂಗ್ ಸ್ಥಳಗಳು.
-
ಶಿವಾಜಿನಗರ ಬಸ್ ನಿಲ್ದಾಣದ ಮೊದಲ ಮಹಡಿ.
ಸ್ಟೇಡಿಯಂ ಪ್ರವೇಶಕ್ಕೆ ಯಾವ ಗೇಟ್ ಬಳಸಬೇಕು ?
-
ಕಬ್ಬನ್ ರಸ್ತೆ ಕಡೆಯಿಂದ: ಗೇಟ್ ಸಂಖ್ಯೆ E-1 ರಿಂದ E-3 ಮತ್ತು E-18, E-19, E-22, E-23 ರ ಮೂಲಕ ಪ್ರವೇಶಿಸಬಹುದು.
-
ಲಿಂಕ್ ರಸ್ತೆ ಕಡೆಯಿಂದ: ಅನಿಲ್ ಕುಂಬ್ಳೆ ವೃತ್ತ ಮತ್ತು ಬಿ.ಆರ್.ವಿ ವೃತ್ತದ ಕಡೆಯಿಂದ ಬರುವವರು ಗೇಟ್ ಸಂಖ್ಯೆ E-11 ರಿಂದ E-17 ಬಳಸಬಹುದು.
-
ಕ್ವೀನ್ಸ್ ರಸ್ತೆ ಕಡೆಯಿಂದ: ಗೇಟ್ ಸಂಖ್ಯೆ E-5 ಮತ್ತು E-8 ರಲ್ಲಿ ಪ್ರವೇಶಕ್ಕೆ ಅವಕಾಶವಿದೆ. ನಿರ್ಗಮನಕ್ಕೆ ಗೇಟ್ ಸಂಖ್ಯೆ E-9 ಮತ್ತು E-9A ಮೀಸಲಿಡಲಾಗಿದೆ.
-
ವಿಐಪಿ ಪ್ರವೇಶ: ಆಟಗಾರರು ಮತ್ತು ವಿಐಪಿಗಳಿಗೆ ಕ್ವೀನ್ಸ್ ರಸ್ತೆಯ ಗೇಟ್ ಸಂಖ್ಯೆ E-10 ರಲ್ಲಿ ಅವಕಾಶ ನೀಡಲಾಗಿದೆ.
ಪಂದ್ಯ ನೋಡಲು ಬರುವ ಅಭಿಮಾನಿಗಳು ಸಂಚಾರ ಪೊಲೀಸರೊಂದಿಗೆ ಸಹಕರಿಸಲು ಮತ್ತು ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆಯನ್ನು (ಮೆಟ್ರೋ/ಬಸ್) ಬಳಸಲು ಮನವಿ ಮಾಡಲಾಗಿದೆ.





