ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ವಾಣಿಜ್ಯ ಬಳಕೆಯ ಎಲ್ಪಿಜಿ (LPG) ಸಿಲಿಂಡರ್ಗಳ ತೀವ್ರ ಕೊರತೆ ಉಂಟಾಗಿದ್ದು, ಹೋಟೆಲ್ ಉದ್ಯಮ ಅಕ್ಷರಶಃ ಬೀದಿಗೆ ಬೀಳುವ ಹಂತ ತಲುಪಿದೆ. ಈ ಬಿಕ್ಕಟ್ಟನ್ನು ಗಂಭೀರವಾಗಿ ಪರಿಗಣಿಸಿರುವ ‘ಬೆಂಗಳೂರು ಹೋಟೆಲ್ ಅಸೋಸಿಯೇಷನ್’, ತಕ್ಷಣವೇ ಸಿಲಿಂಡರ್ ಪೂರೈಕೆಗೆ ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ.
ಸೌದೆ ಒಲೆಯೇ ಗತಿ
ಕಳೆದ ಕೆಲವು ದಿನಗಳಿಂದ ವಾಣಿಜ್ಯ ಸಿಲಿಂಡರ್ಗಳ ಪೂರೈಕೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಗ್ಯಾಸ್ ಸಿಗದೆ ಬೆಂಗಳೂರಿನ ನೂರಾರು ಹೋಟೆಲ್ಗಳು ಈಗಾಗಲೇ ಬಾಗಿಲು ಮುಚ್ಚಿವೆ. ಇನ್ನು ಕೆಲವು ಹೋಟೆಲ್ಗಳಲ್ಲಿ ಅನಿವಾರ್ಯವಾಗಿ ‘ಮೆನು’ ಕಡಿತಗೊಳಿಸಲಾಗಿದೆ. ಹೈಟೆಕ್ ಸಿಟಿಯ ಪ್ರತಿಷ್ಠಿತ ಹೋಟೆಲ್ಗಳಲ್ಲೂ ಈಗ ಅಡುಗೆ ತಯಾರಿಸಲು ಸೌದೆ ಒಲೆಗಳನ್ನು ಬಳಸುವ ಸ್ಥಿತಿ ಬಂದೊದಗಿದೆ. ಈ ಸಮಸ್ಯೆ ಕೇವಲ ಹೋಟೆಲ್ ಮಾಲೀಕರಿಗೆ ಮಾತ್ರವಲ್ಲದೆ, ಹೋಟೆಲ್ಗಳಿಗೆ ಹಾಲು ಮತ್ತು ತರಕಾರಿ ಪೂರೈಸುವ ರೈತರಿಗೂ ತಟ್ಟಿದೆ.
40 ಸಾವಿರ ಹೋಟೆಲ್, 6 ಲಕ್ಷ ಕಾರ್ಮಿಕರ ಬದುಕು ಅತಂತ್ರ
ಹೈಕೋರ್ಟ್ಗೆ ಸಲ್ಲಿಸಲಾದ ಅರ್ಜಿಯಲ್ಲಿ ಅಸೋಸಿಯೇಷನ್ ಪರ ವಕೀಲ ಕೆ. ಸತೀಶ್ ಭಟ್ ಅವರು ಹಲವು ಆತಂಕಕಾರಿ ಅಂಶಗಳನ್ನು ಉಲ್ಲೇಖಿಸಿದ್ದಾರೆ. ಬೆಂಗಳೂರು ನಗರವೊಂದರಲ್ಲೇ ಸುಮಾರು 40,000 ಹೋಟೆಲ್ಗಳಿವೆ. ಈ ಉದ್ಯಮವನ್ನು ನಂಬಿ ಸುಮಾರು 6 ಲಕ್ಷ ಕಾರ್ಮಿಕರು ಜೀವನ ನಡೆಸುತ್ತಿದ್ದಾರೆ. ಸಿಲಿಂಡರ್ ಪೂರೈಕೆ ಸ್ಥಗಿತಗೊಂಡರೆ ಈ ಲಕ್ಷಾಂತರ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿವೆ. ಆದ್ದರಿಂದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ (Oil Marketing Companies) ತಕ್ಷಣ ಸಿಲಿಂಡರ್ ನೀಡಲು ಆದೇಶಿಸುವಂತೆ ಮನವಿ ಮಾಡಲಾಗಿದೆ.
ಸಚಿವ ಮುನಿಯಪ್ಪ ಭರವಸೆಗೆ ಹೋಟೆಲ್ ಮಾಲೀಕರ ಗರಂ
ವಾಣಿಜ್ಯ ಸಿಲಿಂಡರ್ ಕೊರತೆ ನೀಗಿಸಲು ಹೋಟೆಲ್ ಉದ್ಯಮಕ್ಕೆ 1,000 ಸಿಲಿಂಡರ್ ಪೂರೈಸುವುದಾಗಿ ಸಚಿವ ಮುನಿಯಪ್ಪ ನೀಡಿದ್ದ ಹೇಳಿಕೆ ಹೋಟೆಲ್ ಮಾಲೀಕರ ಕೆಂಗಣ್ಣಿಗೆ ಗುರಿಯಾಗಿದೆ. “ಬೆಂಗಳೂರಿನಲ್ಲಿರುವ 40 ಸಾವಿರ ಹೋಟೆಲ್ಗಳಿಗೆ ಕೇವಲ ಒಂದು ಸಾವಿರ ಸಿಲಿಂಡರ್ ನೀಡುವುದು ಸಮುದ್ರಕ್ಕೆ ಇಂಗು ಸುರಿದಂತೆ. ಅಷ್ಟು ಕಡಿಮೆ ಸಂಖ್ಯೆಯ ಸಿಲಿಂಡರ್ ಕೊಡುವ ಬದಲು ಕೊಡದೆ ಇರುವುದೇ ಲೇಸು” ಎಂದು ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಈ ನಿರ್ಧಾರ ಹೋಟೆಲ್ ಉದ್ಯಮದ ವಾಸ್ತವ ಸ್ಥಿತಿಯನ್ನು ಅಣಕಿಸುವಂತಿದೆ ಎಂದು ಅವರು ಕಿಡಿಕಾರಿದ್ದಾರೆ.
ಸರ್ಕಾರದ ಭರವಸೆಗಳು ಕೇವಲ ಮಾತಿಗೆ ಸೀಮಿತವಾಗಿರುವುದರಿಂದ, ಅಸೋಸಿಯೇಷನ್ ಈಗ ಕಾನೂನು ಹೋರಾಟಕ್ಕೆ ಮುಂದಾಗಿದೆ. ರಿಟ್ ಅರ್ಜಿಯಲ್ಲಿ ಸರ್ಕಾರ ಮತ್ತು ತೈಲ ಕಂಪನಿಗಳನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದ್ದು, ತುರ್ತಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದರೆ ಹೋಟೆಲ್ ಉದ್ಯಮ ಸಂಪೂರ್ಣವಾಗಿ ಕುಸಿಯಲಿದೆ ಎಂಬ ಎಚ್ಚರಿಕೆ ನೀಡಲಾಗಿದೆ.





