ಟೆಹ್ರಾನ್: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಸಂಯುಕ್ತ ವಾಯುದಾಳಿಯಲ್ಲಿ ಇರಾನ್ನ ಮಾಜಿ ಸುಪ್ರೀಂ ಲೀಡರ್ ಅಲಿ ಖಮೇನಿ ಹತ್ಯೆಯಾದ ಘಟನೆ ಸಂಚಲನ ಸೃಷ್ಟಿಸಿತ್ತು. ಆದರೆ ಈ ದಾಳಿಯ ವೇಳೆ ಅಲಿ ಖಮೇನಿ ಅವರ ಪುತ್ರ ಹಾಗೂ ಇರಾನ್ನ ನೂತನ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಹೇಗೆ ಪಾರಾದರು ಎಂಬುದರ ರೋಚಕ ವಿವರಗಳು ಬಹಿರಂಗವಾಗಿದೆ. ಈ ದಾಳಿ ನಡೆಯುವ ಕೆಲವೇ ನಿಮಿಷಗಳ ಮುನ್ನ ಮೊಜ್ತಬಾ ಅವರು ತಮ್ಮ ತಂದೆ ಇದ್ದ ಕಟ್ಟಡವನ್ನು ತೊರೆದಿರುವುದು ಅವರ ಜೀವ ಉಳಿಯಲು ಪ್ರಮುಖ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ದಾಳಿ ನಡೆದ ಸಂದರ್ಭದಲ್ಲೇ ಅಲಿ ಖಮೇನಿ ಅವರು ಕಟ್ಟಡದೊಳಗೇ ಇದ್ದರು. ಅದೇ ಸಮಯದಲ್ಲಿ ಮೊಜ್ತಬಾ ಖಮೇನಿ ಕೂಡ ಅಲ್ಲಿ ಇದ್ದರೂ, ಖಾಸಗಿ ಕೆಲಸದ ನಿಮಿತ್ತ ಹೊರಗೆ ತೆರಳಲು ನಿರ್ಧರಿಸಿದ್ದರು. ಈ ನಿರ್ಧಾರವೇ ಅವರ ಜೀವ ಉಳಿಸಿದ್ದು, ಕಟ್ಟಡದಿಂದ ಹೊರಬಂದ ಕೆಲವೇ ಕ್ಷಣಗಳಲ್ಲಿ ಭೀಕರ ವಾಯು ದಾಳಿ ಸಂಭವಿಸಿದೆ. ಆ ಪ್ರದೇಶ ಸಂಪೂರ್ಣವಾಗಿ ನಾಶವಾಗಿದೆ ಎಂದು ವರದಿಗಳು ಸೂಚಿಸುತ್ತವೆ.
ಆದರೆ, ಕಟ್ಟಡದಿಂದ ಹೊರಬಂದಿದ್ದರೂ ಮೊಜ್ತಬಾ ಸುರಕ್ಷಿತವಾಗಿರಲಿಲ್ಲ. ದಾಳಿಯ ತೀವ್ರತೆಯಿಂದ ಉಂಟಾದ ಸ್ಫೋಟದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಹಾಗೂ ತುರ್ತು ಸೇವಾ ತಂಡಗಳು ಅವರನ್ನು ತಕ್ಷಣವೇ ಸುರಕ್ಷಿತ ಸ್ಥಳಕ್ಕೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದರೆಂದು ತಿಳಿದುಬಂದಿದೆ.
ಈ ಘಟನೆ ಬಳಿಕ ಮೊಜ್ತಬಾ ಖಮೇನಿ ಅವರ ಆರೋಗ್ಯದ ಕುರಿತು ಹಲವು ವದಂತಿಗಳು ಹರಿದಾಡುತ್ತಿವೆ. ಗಂಭೀರ ಗಾಯಗಳ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ರಷ್ಯಾಗೆ ಕಳುಹಿಸಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.. ವರದಿಗಳ ಪ್ರಕಾರ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ವೈಯಕ್ತಿಕವಾಗಿ ಮೊಜ್ತಬಾ ಅವರಿಗೆ ಚಿಕಿತ್ಸೆಗೆ ಆಹ್ವಾನ ನೀಡಿದ್ದರು ಎನ್ನಲಾಗುತ್ತಿದೆ.
ಇದೇ ವೇಳೆ ಇರಾನ್ ಅಧ್ಯಕ್ಷ ಮಸೂದ್ ಪೆಝಷ್ಕಿಯಾನ್ ಮತ್ತು ವ್ಲಾಡಿಮಿರ್ ಪುಟಿನ್ ನಡುವೆ ನಡೆದ ಮಾತುಕತೆ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಈ ಮಾತುಕತೆ ನಂತರವೇ ಮೊಜ್ತಬಾ ಅವರನ್ನು ರಷ್ಯಾಕ್ಕೆ ರವಾನೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ರಷ್ಯಾದ ಮಿಲಿಟರಿ ವಿಮಾನದಲ್ಲಿ ಅವರನ್ನು ಮಾಸ್ಕೋಗೆ ಕರೆದೊಯ್ಯಲಾಗಿದೆ ಎನ್ನಲಾಗಿದೆ.
ಮೊಜ್ತಬಾ ಖಮೇನಿ ಮಾಸ್ಕೋದ ಒಂದು ಪ್ರಮುಖ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಮಾಹಿತಿಯ ಕುರಿತು ಯಾವುದೇ ಅಧಿಕೃತ ದೃಢೀಕರಣ ಇನ್ನೂ ಲಭ್ಯವಾಗಿಲ್ಲ.




