ಮಂಗಳೂರು, ಮಾರ್ಚ್ 17: ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆಯಿಂದ ಹಾರ್ಮುಜ್ ಜಲಸಂಧಿಯಲ್ಲಿ ಸಂಚಾರಕ್ಕೆ ತೊಂದರೆ ಉಂಟಾಗಿದ್ದ ನಡುವೆಯೂ ಭಾರತಕ್ಕೆ ತೈಲ ಮತ್ತು ಎಲ್ಪಿಜಿ ಪೂರೈಕೆ ಕ್ರಮೇಣ ಚೇತರಿಸಿಕೊಳ್ಳುತ್ತಿದೆ. ಈಗಾಗಲೇ ನಾಲ್ಕು ಹಡಗುಗಳಿಗೆ ಇರಾನ್ ಅನುಮತಿ ನೀಡಿದ್ದು, ಅವುಗಳಲ್ಲಿ ಒಂದಾದ ‘ಶಿವಾಲಿಕ್’ ಹಡಗಿನಿಂದ 26 ಸಾವಿರ ಮೆಟ್ರಿಕ್ ಟನ್ ಎಲ್ಪಿಜಿ ಅನಿಲವನ್ನು ಇಂದು ಮಂಗಳೂರು ಬಂದರಿನಲ್ಲಿ ಅನ್ಲೋಡ್ ಮಾಡಲಾಗುತ್ತಿದೆ.
ಭಾರತಕ್ಕೆ ತೈಲ ಮತ್ತು ಎಲ್‌ಪಿಜಿ ಹೊತ್ತು ಬಂದ ಹಡಗುಗಳು ತಲುಪಲು ಆರಂಭಿಸಿವೆ. ಈಗಾಗಲೇ ಎರಡು ಹಡಗುಗಳು ಭಾರತ ತಲುಪಿದ್ದು, ಇನ್ನೂ ಎರಡು ಹಡಗುಗಳು ಇಂದು ದೇಶದ ತೀರ ತಲುಪುವ ಸಾಧ್ಯತೆ ಇದೆ.
ಮಾರ್ಚ್ 12ರಂದು ಕಚ್ಚಾ ತೈಲವನ್ನು ಹೊತ್ತು ಬಂದ ಮೊದಲ ಹಡಗು ಮುಂಬೈ ಬಂದರನ್ನು ತಲುಪಿತ್ತು. ನಂತರ ಮಾರ್ಚ್ 16ರಂದು ‘ಶಿವಾಲಿಕ್’ ಹೆಸರಿನ ಎಲ್‌ಪಿಜಿ ಹಡಗು ಗುಜರಾತ್‌ನ ಮುಂದ್ರಾ ಬಂದರಿಗೆ ಆಗಮಿಸಿತು. ಈ ಹಡಗಿನಲ್ಲಿ ಒಟ್ಟು 46,000 ಮೆಟ್ರಿಕ್ ಟನ್ ಎಲ್‌ಪಿಜಿ ಇದ್ದು, ಅದರಲ್ಲಿ ಸುಮಾರು 20,000 ಮೆಟ್ರಿಕ್ ಟನ್ ಅನ್ನು ಮುಂದ್ರಾ ಬಂದರಿನಲ್ಲಿ ಅನ್‌ಲೋಡ್ ಮಾಡಲಾಗಿದೆ.
ಉಳಿದ 26,000 ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ಮಂಗಳೂರಿಗೆ ತರಲಾಗುತ್ತಿದ್ದು, ಇಂದು ಮಂಗಳೂರು ಬಂದರಿನಲ್ಲಿ ಅನ್‌ಲೋಡ್ ಮಾಡುವ ನಿರೀಕ್ಷೆ ಇದೆ. ಇದರಿಂದ ದೇಶದಲ್ಲಿ ಉಂಟಾಗಿದ್ದ ಎಲ್‌ಪಿಜಿ ಕೊರತೆ ಭೀತಿಗೆ ತಾತ್ಕಾಲಿಕ ರಿಲೀಫ್ ನೀಡಲಿದೆ ಎಂದು ಅಂದಾಜಿಸಲಾಗಿದೆ.
ಇದರ ಜೊತೆಗೆ, ‘ನಂದಾದೇವಿ’ ಮತ್ತು ‘ಜಗ್ ಲಾಡ್ಕಿ’ ಎಂಬ ಮತ್ತೆರಡು ಹಡಗುಗಳು ಭಾರತ ತಲುಪುವ ಸಾಧ್ಯತೆ ಇದೆ. ‘ನಂದಾದೇವಿ’ ಹಡಗಿನಲ್ಲಿ ಸುಮಾರು 40,000 ಮೆಟ್ರಿಕ್ ಟನ್ ಎಲ್‌ಪಿಜಿ ಇದ್ದರೆ, ‘ಜಗ್ ಲಾಡ್ಕಿ’ ಹಡಗು ಸುಮಾರು 81,000 ಮೆಟ್ರಿಕ್ ಟನ್ ಕಚ್ಚಾ ತೈಲವನ್ನು ಹೊತ್ತು ಬರುತ್ತಿದೆ.
ಈ ಹಡಗುಗಳಿಂದ ಲಭ್ಯವಾಗುವ ಎಲ್‌ಪಿಜಿ ಪ್ರಮಾಣವು ದೇಶದ ಅವಶ್ಯಕತೆಗೆ ಕೇವಲ ಎರಡು ದಿನಗಳ ಮಟ್ಟಿಗೆ ಮಾತ್ರ ಸಾಕಾಗಬಹುದು. ಆದ್ದರಿಂದ, ಸರಬರಾಜು ಸಂಪೂರ್ಣವಾಗಿ ಸ್ಥಿರವಾಗಲು ಇನ್ನಷ್ಟು ಹಡಗುಗಳು ಸುರಕ್ಷಿತವಾಗಿ ತಲುಪುವುದು ಅತ್ಯಗತ್ಯವಾಗಿದೆ.
ಹಾರ್ಮುಜ್ ಜಲಸಂಧಿಯಲ್ಲಿ ಇನ್ನೂ 20ಕ್ಕೂ ಹೆಚ್ಚು ಭಾರತೀಯ ಹಡಗುಗಳು ಸಿಲುಕಿಕೊಂಡಿರುವುದಾಗಿ ತಿಳಿದುಬಂದಿದೆ. ಈ ಹಡಗುಗಳು ಬಿಡುಗಡೆಗೊಳ್ಳುವವರೆಗೆ ತೈಲ ಮತ್ತು ಅನಿಲ ಸರಬರಾಜಿನ ಮೇಲೆ ಒತ್ತಡ ಮುಂದುವರಿಯುವ ಸಾಧ್ಯತೆ ಇದೆ.





