ಗೂರ್ಖಾ/ಕಠ್ಮಂಡು, ಮಾರ್ಚ್ 15: ನೇಪಾಳದಲ್ಲಿ ಭಾರತೀಯ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ಕಂದಕಕ್ಕೆ ಉರುಳಿ ಬಿದ್ದಿದ್ದು, ಇದರ ಪರಿಣಾಮ ಏಳು ಮಂದಿ ಸಾವನ್ನಪ್ಪಿದ್ದಾರೆ. ಮನಕಾಮನಾ ದೇವಸ್ಥಾನಕ್ಕೆ ಭೇಟಿ ನೀಡಿ ವಾಪಸ್ ಬರುತ್ತಿದ್ದ ಯಾತ್ರಿಕರು ಈ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ನೇಪಾಳದ ಗೂರ್ಖಾ ಜಿಲ್ಲೆಯ ಶಾಹಿದ್ ಲಖನ್ ಗ್ರಾಮೀಣ ಪುರಸಭೆ-3 ವ್ಯಾಪ್ತಿಯ ಕಾಂಟಾರ್ ಪ್ರದೇಶದಲ್ಲಿ ನಡೆದಿದೆ.
ಮನಕಾಮನಾ ದೇವಸ್ಥಾನದಿಂದ ಮಜುವಾ ಕಡೆಗೆ ತೆರಳುತ್ತಿದ್ದ ಎಲೆಕ್ಟ್ರಿಕ್ ಮೈಕ್ರೋ ಬಸ್ ನಿಯಂತ್ರಣ ತಪ್ಪಿ ಸುಮಾರು 200 ಮೀಟರ್ ಆಳದ ಕಂದಕಕ್ಕೆ ಉರುಳಿಬಿದ್ದಿದೆ. ಬಸ್ಸಿನಲ್ಲಿ ಒಟ್ಟು 16 ಮಂದಿ ಪ್ರಯಾಣಿಸುತ್ತಿದ್ದು, ಅವರಲ್ಲಿ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರೆಲ್ಲರೂ ಭಾರತೀಯ ಯಾತ್ರಿಕರೆಂದು ತಿಳಿದುಬಂದಿದೆ.
ಈ ಅಪಘಾತದಲ್ಲಿ ಇನ್ನೂ ಏಳು ಮಂದಿ ಗಾಯಗೊಂಡಿದ್ದಾರೆ. ಸ್ಥಳೀಯರು, ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ಆರಂಭಿಸಿ ಗಾಯಾಳುಗಳನ್ನು ಕಂದಕದಿಂದ ಹೊರತೆಗೆದು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿರುವುದಾಗಿ ತಿಳಿದುಬಂದಿದೆ.
ಮೃತರನ್ನು ಮುತ್ತುಕುಮಾರ್ (58), ಅನಾಮಾಲಿಕ್ (58), ಮೀನಾಕ್ಷಿ (59), ಶಿವಗಾಮಿ (53), ವಿಜಯಲ್ (57), ಮೀನಾ (58) ಮತ್ತು ತಮಿಳರಸಿ (60) ಎಂದು ಗುರುತಿಸಲಾಗಿದೆ. ಎಲ್ಲರೂ ಭಾರತದಿಂದ ಮನಕಾಮನಾ ದೇವಸ್ಥಾನಕ್ಕೆ ಯಾತ್ರೆ ಕೈಗೊಂಡಿದ್ದವರು ಎನ್ನಲಾಗಿದೆ.
ಅಪಘಾತ ಸಂಭವಿಸಿದ ಸಮಯದಲ್ಲಿ ಬಸ್ನಲ್ಲಿ ಚಾಲಕ ಮತ್ತು ಸಹ ಚಾಲಕ ಸೇರಿ ಒಟ್ಟು 16 ಮಂದಿ ಇದ್ದರು. ಚಾಲಕ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದರೆ, ಸಹ ಚಾಲಕ ಗಾಯಗೊಂಡಿದ್ದಾನೆ. ಅಪಘಾತದ ನಂತರ ಪೊಲೀಸರು ಚಾಲಕನನ್ನು ವಿಚಾರಣೆ ನಡೆಸುತ್ತಿದ್ದಾರೆ. ಭದ್ರತಾ ಪಡೆಗಳು ಸಹಕರಿಸಿ ಮೃತದೇಹಗಳು ಮತ್ತು ಗಾಯಾಳುಗಳನ್ನು ಹೊರತೆಗೆದರು. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ.





