ಮಂಡ್ಯ: ಮಧ್ಯಪ್ರಾಚ್ಯದಲ್ಲಿನ ಯುದ್ದದಿಂದಾಗಿ ಜಾಗತಿಕ ಇಂಧನ ವಲಯದಲ್ಲಿ ಭಾರಿ ಅನಿಶ್ಚಿತತೆ ಎದುರಾಗಿದೆ. ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಸಮಸ್ಯೆ ತೀವ್ರವಾಗಿದೆ. ಬುಕ್ ಮಾಡಿದರೂ ಸಿಲಿಂಡರ್ ಕೈಸೇರದೆ ಜನರು ಹೈರಾಣಾಗಿದ್ದು, ಸಿಲಿಂಡರ್ ಗ್ಯಾಸ್ ಬಿಟ್ಟು ಎಲೆಕ್ಟ್ರಿಕ್ ಸ್ಟೌವ್‌ನತ್ತ ಜನರು ಮುಖ ಮಾಡಿದ್ದಾರೆ..
ಮಂಡ್ಯ ನಗರ ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ಕಳೆದ ಕೆಲ ದಿನಗಳಿಂದ ಗ್ಯಾಸ್ ಸರಬರಾಜು ವಿಳಂಬವಾಗುತ್ತಿದ್ದು, ಹಲವರು ಗ್ಯಾಸ್ ಬುಕ್ ಮಾಡಿದರೂ ವಾರಗಳ ಕಾಲ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಇದರಿಂದ ಅಡುಗೆ ಕೆಲಸಕ್ಕೆ ತೊಂದರೆ ಉಂಟಾಗಿದ್ದು, ಜನರು ತಾತ್ಕಾಲಿಕವಾಗಿ ಬೇರೆ ಮಾರ್ಗಗಳನ್ನು ಹುಡುಕಿಕೊಳ್ಳುತ್ತಿದ್ದಾರೆ.
ಗ್ಯಾಸ್ ಸಮಸ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ಸ್ಟೌವ್ ಹಾಗೂ ಇಂಡೆಕ್ಷನ್ ಕುಕ್ಕರ್ ಖರೀದಿಸಲು ಜನರು ಮುಂದಾಗಿದ್ದಾರೆ. ಪಾತ್ರೆ ಅಂಗಡಿಗಳು ಹಾಗೂ ಎಲೆಕ್ಟ್ರಿಕ್ ಉಪಕರಣಗಳ ಅಂಗಡಿಗಳಲ್ಲಿ ಎಲೆಕ್ಟ್ರಿಕ್ ಸ್ಟೌವ್ ಹಾಗೂ ಇಂಡೆಕ್ಷನ್ ಕುಕ್ಕರ್ ಗಳಿಗೆ ಬೇಡಿಕೆ ಹೆಚ್ಚಾಗಿದೆ. ಸಾಮಾನ್ಯವಾಗಿ ತಿಂಗಳಲ್ಲಿ ಕೆಲವೇ ಸ್ಟೌವ್‌ಗಳು ಮಾರಾಟವಾಗುತ್ತಿದ್ದರೆ, ಈಗ ದಿನಕ್ಕೆ ಸುಮಾರು 10 ರಿಂದ 15 ಎಲೆಕ್ಟ್ರಿಕ್ ಸ್ಟೌವ್ ಹಾಗೂ ಇಂಡೆಕ್ಷನ್ ಕುಕ್ಕರ್‌ಗಳು ಮಾರಾಟವಾಗುತ್ತಿರುವುದಾಗಿ ಅಂಗಡಿ ಮಾಲೀಕರು ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ, ಎಲೆಕ್ಟ್ರಿಕ್ ಸ್ಟೌವ್‌ಗಳ ಬಗ್ಗೆ ಮಾಹಿತಿ ಪಡೆಯಲು ಸಹ ಅನೇಕರು ಅಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಉಂಟಾಗಿದೆ.. ನಗರ ಪ್ರದೇಶದಲ್ಲಿ ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಲ್ಲೂ ಗ್ಯಾಸ್ ಕೊರತೆಯ ಪರಿಣಾಮ ಕಂಡುಬರುತ್ತಿದೆ. ಕೆಲವು ಗ್ರಾಮಗಳಲ್ಲಿ ಜನರು ಮತ್ತೆ ಕಟ್ಟಿಗೆ ಬಳಸಿ ಒಲೆಗಳಲ್ಲಿ ಅಡುಗೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನೂ ಕೆಲವು ಮನೆಗಳಲ್ಲಿ ಗೋಬರ್ ಗ್ಯಾಸ್ ಬಳಕೆ ಮರು ಆರಂಭಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ಹಸು- ಗೋವುಗಳನ್ನು ಸಾಕಿರುವ ಮನೆಗಳಲ್ಲಿ ಹಿಂದಿನಿಂದ ಬಳಕೆಯಲ್ಲಿದ್ದ ಗೋಬರ್ ಗ್ಯಾಸ್ ಘಟಕಗಳನ್ನು ಮತ್ತೆ ಕಾರ್ಯಗತಗೊಳಿಸುವ ಬಗ್ಗೆ ಯೋಚನೆ ಮಾಡಲಾಗುತ್ತಿದೆ.





