ಹಾವೇರಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಇದೀಗ ಭಾರತಕ್ಕೂ ತಟ್ಟಿದೆ. ಇರಾನ್ ಹಾಗೂ ಇಸ್ರೇಲ್ ನಡುವೆ ನಡೆಯುತ್ತಿರುವ ಸಂಘರ್ಷ ದಿನದಿಂದ ದಿನಕ್ಕೆ ತೀವ್ರವಾಗುತ್ತಿರುವುದರಿಂದ ಜಾಗತಿಕವಾಗಿ ಇಂಧನ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಇದರ ಪರಿಣಾಮವಾಗಿ ಆಟೋಗಳಿಗೆ ಬಳಸುವ ಗ್ಯಾಸ್ ದರ ಏರಿಕೆಯಾಗಿದೆ. ಹಾವೇರಿ ಜಿಲ್ಲೆಯಲ್ಲಿ ಆಟೋ ಗ್ಯಾಸ್ ಬೆಲೆ ದಿಢೀರ್ ಹೆಚ್ಚಳವಾಗಿದ್ದು, ಇದರಿಂದ ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹಾವೇರಿಯ ಹಾನಗಲ್ ರಸ್ತೆಯಲ್ಲಿರುವ ಗೋ ಗ್ಯಾಸ್ ಬಂಕ್‌ನಲ್ಲಿ ಗ್ಯಾಸ್ ಪೂರೈಕೆ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ ಎಂದು ಸೂಚಿಸುವ ಬ್ಯಾನರ್ ಹಾಕಲಾಗಿದೆ. ಇರಾನ್–ಇಸ್ರೇಲ್ ಯುದ್ಧದ ಹಿನ್ನೆಲೆ ಗ್ಯಾಸ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಬಹುದು ಎಂದು ತಿಳಿಸಿ, ಆಟೋ ಚಾಲಕರು ಸಹಕರಿಸಬೇಕು ಎಂದು ಬಂಕ್ ನಿರ್ವಹಣಾ ಮಂಡಳಿ ಮನವಿ ಮಾಡಿದೆ.
ಕಳೆದ ಎರಡು ವಾರಗಳ ಹಿಂದೆ ಒಂದು ಕೆಜಿ ಆಟೋ ಗ್ಯಾಸ್ ಬೆಲೆ ಕೇವಲ ₹50 ಇತ್ತು. ಆದರೆ ಇದೀಗ ದಿಢೀರ್ ₹20 ಹೆಚ್ಚಳವಾಗಿ ಪ್ರತಿ ಕೆಜಿ ₹70ಕ್ಕೆ ಏರಿಕೆಯಾಗಿದೆ. ಈ ದರ ಏರಿಕೆಯಿಂದ ಆಟೋ ಚಾಲಕರು ಕಂಗಾಲಾಗಿದ್ದಾರೆ. ಪ್ರತಿದಿನ ಆಟೋ ಓಡಿಸಿ ಜೀವನ ನಡೆಸುವ ಚಾಲಕರಿಗೆ ಈ ಹೆಚ್ಚಳ ದೊಡ್ಡ ಹೊರೆ ಆಗಿದೆ..
ಹಾವೇರಿಯ ಅನೇಕ ಆಟೋ ಚಾಲಕರು ತಮ್ಮ ಕುಟುಂಬವನ್ನು ನಡೆಸಲು ದಿನವೂ ಸಂಪೂರ್ಣವಾಗಿ ಆಟೋ ಆದಾಯದ ಮೇಲೆಯೇ ಅವಲಂಬಿತರಾಗಿದ್ದಾರೆ. ದಿನಸಿ ಖರ್ಚು, ಮಕ್ಕಳ ವಿದ್ಯಾಭ್ಯಾಸ, ಮನೆ ಬಾಡಿಗೆ ಸೇರಿದಂತೆ ಹಲವಾರು ಖರ್ಚುಗಳನ್ನು ನಿರ್ವಹಿಸಲು ಈಗಲೇ ಕಷ್ಟವಾಗುತ್ತಿದೆ. ಇದರ ಮಧ್ಯೆ ಗ್ಯಾಸ್ ಬೆಲೆ ಏರಿಕೆಯಿಂದ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ ಎಂದು ಚಾಲಕರು ಹೇಳುತ್ತಿದ್ದಾರೆ.
“ಒಂದು ದಿನ ಆಟೋ ಓಡಿಸಲು ಸಾಕಷ್ಟು ಗ್ಯಾಸ್ ಬೇಕಾಗುತ್ತದೆ. ಗ್ಯಾಸ್ ದರ ಹೀಗೆ ಏರಿದರೆ ನಮಗೆ ಉಳಿಯುವ ಲಾಭವೇ ಕಡಿಮೆ ಆಗುತ್ತದೆ. ದಿನಪೂರ್ತಿ ದುಡಿದರೂ ಕೈಗೆ ಸಿಗುವ ಹಣದಿಂದ ಮನೆ ಖರ್ಚು ಕೂಡ ನಡೆಸುವುದು ಕಷ್ಟವಾಗುತ್ತಿದೆ” ಎಂದು ಕೆಲ ಆಟೋ ಚಾಲಕರು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ಇನ್ನು ಪ್ರಯಾಣಿಕರಿಂದ ಹೆಚ್ಚುವರಿ ಹಣ ಕೇಳುವುದು ಕೂಡ ಚಾಲಕರಿಗೆ ಸವಾಲಾಗಿದೆ. ಗ್ಯಾಸ್ ಬೆಲೆ ಏರಿಕೆಯಿಂದ ಪ್ರತಿ ಪ್ರಯಾಣಕ್ಕೂ ಕನಿಷ್ಠ ₹10 ಹೆಚ್ಚಾಗಿ ಕೇಳಬೇಕಾದ ಪರಿಸ್ಥಿತಿ ಬಂದಿದೆ.
ಗ್ಯಾಸ್ ಪೂರೈಕೆ ವ್ಯತ್ಯಯದ ಭೀತಿಯೂ ಚಾಲಕರಲ್ಲಿ ಆತಂಕ ಹೆಚ್ಚಿಸಿದೆ. ಗ್ಯಾಸ್ ಕೊರತೆ ಉಂಟಾದರೆ ಆಟೋಗಳನ್ನು ಓಡಿಸುವುದೇ ಕಷ್ಟವಾಗಬಹುದು. ಇದರಿಂದ ದಿನಸಿ ಆದಾಯ ಸಂಪೂರ್ಣವಾಗಿ ನಿಂತುಹೋಗುವ ಭೀತಿ ಎದುರಾಗಿದೆ. ಹೀಗಾಗಿ ಗ್ಯಾಸ್ ಪೂರೈಕೆ ನಿಯಮಿತವಾಗಿರಬೇಕು ಎಂಬ ಬೇಡಿಕೆಯನ್ನು ಆಟೋ ಚಾಲಕರು ವ್ಯಕ್ತಪಡಿಸಿದ್ದಾರೆ.





