ಮಧ್ಯಪ್ರಾಚ್ಯದ ಇಸ್ರೇಲ್ ಮತ್ತು ಇರಾನ್ ನಡುವೆ ಪೂರ್ಣ ಪ್ರಮಾಣದ ಯುದ್ಧ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಇಂದು ಮುಂಜಾನೆ ಇರಾನ್ ರಾಜಧಾನಿ ಟೆಹರಾನ್ ಮೇಲೆ ಇಸ್ರೇಲ್ ಭೀಕರ ಕ್ಷಿಪಣಿ ದಾಳಿ ನಡೆಸುವ ಮೂಲಕ ಯುದ್ಧದ ಆರಂಭಿಸಿದೆ. ಈ ಬೆನ್ನಲ್ಲೇ ಇಸ್ರೇಲ್‌ನಲ್ಲಿರುವ ಸಾವಿರಾರು ಭಾರತೀಯ ನಾಗರಿಕರ ಸುರಕ್ಷತೆಯ ದೃಷ್ಟಿಯಿಂದ ಭಾರತೀಯ ರಾಯಭಾರ ಕಚೇರಿಯು ಗಂಭೀರ ಎಚ್ಚರಿಕೆಯನ್ನು (Advisory) ನೀಡಿದೆ.
ಟೆಹರಾನ್ ಮೇಲೆ ಇಸ್ರೇಲ್ ವಾಯುದಾಳಿ:
ಇರಾನ್‌ನಿಂದ ಸಂಭಾವ್ಯ ದಾಳಿಗಳು ನಡೆಯಲಿವೆ ಎಂಬ ಗುಪ್ತಚರ ಮಾಹಿತಿ ಆಧರಿಸಿ ಇಸ್ರೇಲ್ ಪೂರ್ವಭಾವಿ ದಾಳಿಯನ್ನು ಸಂಘಟಿಸಿದೆ. ಟೆಹರಾನ್‌ನಲ್ಲಿರುವ ಅಧ್ಯಕ್ಷರ ಭವನಗಳು ಹಾಗೂ ಪ್ರಮುಖ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ ಎನ್ನಲಾಗಿದೆ. ಈ ಘಟನೆಯಿಂದಾಗಿ ಇತ್ತೀಚೆಗಷ್ಟೇ ಆರಂಭವಾಗಿದ್ದ ಅಮೆರಿಕ ಮತ್ತು ಇರಾನ್ ನಡುವಿನ ರಾಜತಾಂತ್ರಿಕ ಮಾತುಕತೆಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಇಸ್ರೇಲ್ ತನ್ನ ವಾಯುನೆಲೆಯಲ್ಲಿ ಎಲ್ಲಾ ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದ್ದು, ಯುದ್ಧಕ್ಕೆ ಸಿದ್ದವಾಗಿದೆ.
ಭಾರತೀಯರಿಗೆ ರಾಯಭಾರ ಕಚೇರಿಯ ಕಟ್ಟುನಿಟ್ಟಿನ ಸೂಚನೆ:
ಪರಿಸ್ಥಿತಿಯ ಗಂಭೀರತೆಯನ್ನು ಅರಿತಿರುವ ಟೆಲ್ ಅವಿವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅಲ್ಲಿರುವ ಭಾರತೀಯ ನಾಗರಿಕರಿಗೆ ಈ ಕೆಳಗಿನ ಮಾರ್ಗಸೂಚಿಗಳನ್ನು ಹೊರಡಿಸಿದೆ:
-
ಜಾಗರೂಕರಾಗಿರಿ: ಪ್ರಸ್ತುತ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಎಲ್ಲಾ ಭಾರತೀಯರು ಅತ್ಯಂತ ಎಚ್ಚರದಿಂದಿರಬೇಕು ಮತ್ತು ಅನಗತ್ಯವಾಗಿ ಮನೆಯಿಂದ ಹೊರಬರಬಾರದು.
-
ಸುರಕ್ಷಿತ ತಾಣಗಳ ಬಳಕೆ: ನಾಗರಿಕರು ಸದಾ ತಮ್ಮ ನಿವಾಸ ಅಥವಾ ಕೆಲಸದ ಸ್ಥಳದ ಸಮೀಪವಿರುವ ‘ಸುರಕ್ಷಿತ ಆಶ್ರಯ ತಾಣಗಳ’ (Shelters) ಬಗ್ಗೆ ತಿಳಿದುಕೊಂಡಿರಬೇಕು ಮತ್ತು ಸೈರನ್ ಮೊಳಗಿದ ತಕ್ಷಣ ಅಲ್ಲಿಗೆ ಧಾವಿಸಬೇಕು.
-
ಪ್ರಯಾಣ ನಿರ್ಬಂಧ: ಇಸ್ರೇಲ್‌ನೊಳಗೆ ಅತ್ಯಗತ್ಯವಿಲ್ಲದ ಯಾವುದೇ ಪ್ರಯಾಣವನ್ನು ಕೈಗೊಳ್ಳಬಾರದು ಎಂದು ಸೂಚಿಸಲಾಗಿದೆ.
-
ಅಧಿಕೃತ ಮಾರ್ಗಸೂಚಿ ಪಾಲನೆ: ಇಸ್ರೇಲಿ ಅಧಿಕಾರಿಗಳು ಮತ್ತು ‘ಹೋಮ್ ಫ್ರಂಟ್ ಕಮಾಂಡ್’ ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಹೆಚ್ಚಿನ ಮಾಹಿತಿಗಾಗಿ
ಲಿಂಕ್ ಬಳಸಬಹುದು.https://oref.org.il/eng
ತುರ್ತು ಸಹಾಯವಾಣಿ ಲಭ್ಯ: ಯಾವುದೇ ತುರ್ತು ಸಂದರ್ಭದಲ್ಲಿ ಭಾರತೀಯ ನಾಗರಿಕರು ಟೆಲ್ ಅವಿವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಲು 24×7 ಸಹಾಯವಾಣಿ ಸಂಖ್ಯೆಗಳನ್ನು ನೀಡಲಾಗಿದೆ:
-
ದೂರವಾಣಿ: +972-54-7520711
-
ಇಮೇಲ್: cons1.telaviv@mea.gov.in
ಜಾಗತಿಕ ಪರಿಣಾಮ:
ಇಸ್ರೇಲ್‌ನಾದ್ಯಂತ ಆಗಾಗ ಯುದ್ಧದ ಸೈರನ್‌ಗಳು ಮೊಳಗುತ್ತಿದ್ದು, ಜನರು ಆತಂಕದಲ್ಲಿದ್ದಾರೆ. ಇತ್ತ ಇರಾನ್ ಕೂಡ ಪ್ರತಿದಾಳಿ ನಡೆಸುವ ಎಚ್ಚರಿಕೆ ನೀಡಿದೆ. ಒಂದು ವೇಳೆ ಈ ಸಂಘರ್ಷ ತಾರಕಕ್ಕೇರಿದರೆ ಅದು ಕೇವಲ ಈ ಎರಡು ದೇಶಗಳಿಗಷ್ಟೇ ಸೀಮಿತವಾಗದೆ ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಏರಿಕೆ ಮತ್ತು ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಬಹುದು. ಭಾರತ ಸರ್ಕಾರವು ಇಸ್ರೇಲ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ತನ್ನ ನಾಗರಿಕರನ್ನು ರಕ್ಷಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.




