ಕಾಂತಾರ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಂಚಲನ ಸೃಷ್ಠಿಸಿದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಈಗ ಮತ್ತೊಮ್ಮೆ ದೈವಿಕ ಅವತಾರ ಎತ್ತಲು ಸಜ್ಜಾಗಿದ್ದಾರೆ. ಜೈ ಹನುಮಾನ್ ಪೋಸ್ಟರ್ ರಿಲೀಸ್ ನಂತ್ರ ಯಾವುದೇ ಅಪ್ಡೇಟ್ ಇಲ್ಲ. ಆದ್ರೀಗ ಈ ಸಿನಿಮಾ ಸೆಟ್ಟೇರೋಕೆ ಡೇಟ್ ಫಿಕ್ಸ್ ಆಗಿದೆ. ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಲಾಂಚ್ ಆಗ್ತಿರೋ ಈ ಮೆಗಾ ಪ್ರಾಜೆಕ್ಟ್ ಮುಹೂರ್ತ ಯಾವ ಸ್ಥಳದಲ್ಲಿ ನಡೆಯುತ್ತೆ..? ಏನು ವಿಶೇಷ ಅನ್ನೋದ್ರ ಕಂಪ್ಲೀಟ್ ಕಹಾನಿ ಇಲ್ಲಿದೆ.
- ಫೆ.22ಕ್ಕೆ ಹಂಪಿಯಲ್ಲಿ ‘ಜೈ ಹನುಮಾನ್’ ಮುಹೂರ್ತ
- ಹನುಮ್ಯಾನ್ ಯೂನಿವರ್ಸ್ಗೆ ರಿಷಬ್ ಶೆಟ್ಟಿ ಎಂಟ್ರಿ..!
- ಭಕ್ತಿ, ಶಕ್ತಿ, ಸ್ಟಾರ್ಡಮ್.. ರಿಷಬ್ ಮತ್ತೊಂದು ಅಧ್ಯಾಯ
- ಪೌರಾಣಿಕ ಕಥೆ.. ಫಾರಿನ್ VFX ಮಾಸ್ಟರ್ಮೈಂಡ್ಸ್ ಎಂಟ್ರಿ
ರಿಷಬ್ ಶೆಟ್ಟಿ ಈ ಹೆಸರು ಈಗ ಕೇವಲ ಕನ್ನಡದಷ್ಟೇ ಅಲ್ಲ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುಂಜಿಸುತ್ತಿದೆ. ದೈವ-ಭಕ್ತಿ-ಮಣ್ಣಿನ ಸಂಸ್ಕೃತಿ ಮಿಶ್ರಿತ ಕಥೆಯನ್ನು ಜಾಗತಿಕ ಮಟ್ಟಕ್ಕೆ ತಲುಪಿಸಿದ ರಿಷಬ್, ರಾಷ್ಟ್ರ ಪ್ರಶಸ್ತಿ ಮಟ್ಟದ ಮೆಚ್ಚುಗೆಗೂ ಪಾತ್ರರಾದರು. ಕಾಂತಾರದ ಯಶಸ್ಸು ಅವರನ್ನ ಕೇವಲ ಹೀರೋ ಆಗಿರಿಸಲಿಲ್ಲ, ಪೌರಾಣಿಕ ಶಕ್ತಿ ಹೊಂದಿದ ನಟನನ್ನಾಗಿ ಬ್ರ್ಯಾಂಡ್ ಮಾಡಿತು. ಕಾಂತಾರ ನಂತರ ರಿಷಬ್ ಯಾವ ಕಥೆ ಆಯ್ಕೆ ಮಾಡುತ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು. ಕಾಂತಾರ: ಚಾಪ್ಟರ್ 1 ಕೆಲಸಗಳ ಮಧ್ಯೆ ಘೋಷಣೆಯಾಗಿದ್ದ ‘ಜೈ ಹನುಮಾನ್’ ಸಿನಿಮಾ ಈಗ ಅಧಿಕೃತ ಚಾಲನೆ ಪಡೆಯಲು ಸಜ್ಜಾಗಿದೆ. ಈ ಬಾರಿ ನೇರವಾಗಿ ಹನುಮಂತ ದೇವರ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋದೇ ಫ್ಯಾನ್ಸ್ಗಳಿಗೆ ಎಕ್ಸೈಟ್ಮೆಂಟ್ ಡಬಲ್ ಮಾಡಿದೆ.
ಮಹತ್ವಾಕಾಂಕ್ಷಿ ಚಿತ್ರಕ್ಕೆ ನಿರ್ದೇಶನ ಮಾಡುತ್ತಿರುವುದು ಪ್ರಸಾಂತ್ ವರ್ಮಾ. ಸೂಪರ್ ಹಿಟ್ ಆದ ಹನುಮಾನ್ ಚಿತ್ರದ ಮುಂದುವರಿದ ಭಾಗವೆಂದೇ ಹೇಳಲಾಗುತ್ತಿರುವ ‘ಜೈ ಹನುಮಾನ್’, ಮತ್ತೊಂದು ದೈವಿಕ ವಿಶ್ವವನ್ನು ತೆರೆ ಮೇಲೆ ಕಟ್ಟಿಕೊಡಲಿದೆ. ಅಂದಹಾಗೆ ಜೈ ಹನುಮಾನ್ ಮುಹೂರ್ತಕ್ಕೆ ದಿನಾಂಕ ಫಿಕ್ಸ್ ಆಗಿದ್ದು ಫೆಬ್ರವರಿ 22ರಂದು ಹಂಪಿಯಲ್ಲಿ ನಡೆಯಲಿರುವ ಮುಹೂರ್ತ ಕೇವಲ ಒಂದು ಪೂಜಾ ಕಾರ್ಯಕ್ರಮವಲ್ಲ… ಅದು ಭಕ್ತಿಯ ಸ್ಪರ್ಶದೊಂದಿಗೆ ಪ್ರಾರಂಭವಾಗುವ ಸಿನಿ ಸಂಭ್ರಮ. ಹಂಪಿಯನ್ನು ಹನುಮಂತನ ಜನ್ಮಸ್ಥಳವೆಂದು ನಂಬಲಾಗುತ್ತದೆ ಆ ಕಾರಣಕ್ಕೇ ಈ ಪವಿತ್ರ ನೆಲದಲ್ಲಿ ಚಿತ್ರಕ್ಕೆ ಚಾಲನೆ ಸಿಗಲಿದೆಯಂತೆ
ಫೆಬ್ರವರಿ 22 ರಂದು ನಡೆಯಲಿರುವ ಈ ಪೂಜಾ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ, ನಿರ್ದೇಶಕ ಪ್ರಶಾಂತ್ ವರ್ಮಾ ಸೇರಿದಂತೆ ಚಿತ್ರದ ಪ್ರಮುಖ ಕಲಾವಿದರು ಮತ್ತು ತಾಂತ್ರಿಕ ವರ್ಗದವರು ಭಾಗವಹಿಸಲಿದ್ದಾರೆ. ‘ಜೈ ಹನುಮಾನ್’ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಹನುಮಂತ ದೇವರ ಪಾತ್ರದಲ್ಲಿ ನಟಿಸುತ್ತಿದ್ದು, ಈಗಾಗಲೇ ಸಿನಿಮಾದ ಪೋಸ್ಟರ್ ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಪುಷ್ಪ, ಪುಷ್ಪ 2 ಸೇರಿದಂತೆ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯು ಈ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅತ್ಯಂತ ದುಬಾರಿ ಬಜೆಟ್ನಲ್ಲಿ ನಿರ್ಮಿಸುತ್ತಿದೆ.
VFX, ಆಕ್ಷನ್ ಸೀಕ್ವೆನ್ಸ್, ದೈವಿಕ ದೃಶ್ಯಾವಳಿಗಳು ಎಲ್ಲವೂ ಹಾಲಿವುಡ್ ಸ್ಟ್ಯಾಂಡರ್ಡ್ಗೆ ಸಮಾನವಾಗಿರಲಿದೆಯಂತೆ. ಭಕ್ತಿ ಮತ್ತು ಆಕ್ಷನ್ಗಳ ಮಿಶ್ರಣ, ಅಧ್ಭುತ ಶಕ್ತಿ ಪ್ರದರ್ಶನ, ಭಾವನಾತ್ಮಕ ಟ್ವಿಸ್ಟ್ಗಳು ಈ ಸಿನಿಮಾ ಕೇವಲ ಪೌರಾಣಿಕ ಕಥೆಯಲ್ಲ, ಅದು ಒಂದು ದೈವಿಕ ಅನುಭವವಾಗಿರಲಿದೆ ಎನ್ನಲಾಗುತ್ತಿದೆ. ಮುಹೂರ್ತದ ಬಳಿಕ ಏಪ್ರಿಲ್ ತಿಂಗಳಿನಿಂದ ಭಾರೀ ಸೆಟ್ಗಳಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಮೊದಲ ಶೆಡ್ಯೂಲ್ ಗ್ರ್ಯಾಂಡ್ ಆಗಿರಲಿದೆ.
ಕನ್ನಡದಿಂದ ಪ್ಯಾನ್ ಇಂಡಿಯಾ ವರೆಗೂ ತನ್ನದೇ ಛಾಪು ಮೂಡಿಸಿರುವ ರಿಷಬ್ ಶೆಟ್ಟಿ, ಇದೀಗ ಡಿವೈನ್ ಸ್ಟಾರ್ ಟ್ಯಾಗ್ಗೆ ತಕ್ಕ ಪಾತ್ರದ ಮೂಲಕ ಮತ್ತೊಮ್ಮೆ ಪ್ಯಾನ್ ಇಂಡಿಯಾ ರಂಗ ಪ್ರವೇಶಿಸುತ್ತಿದ್ದಾರೆ. ಕಾಂತಾರದ ನಂತರ ಅವರ ಪ್ರತಿಯೊಂದು ಹೆಜ್ಜೆಯೂ ಸುದ್ದಿಯಾಗುತ್ತಿರುವ ಸಮಯದಲ್ಲಿ, ‘ಜೈ ಹನುಮಾನ್’ ಸಿನಿಮಾ ಅವರ ಕರಿಯರ್ನಲ್ಲಿ ಮತ್ತೊಂದು ಮೈಲುಗಲ್ಲಾಗುವ ಸಾಧ್ಯತೆ ಇದೆ. ಫೆಬ್ರವರಿ 22ರಂದು ಹಂಪಿಯಲ್ಲಿ ಮೊಳಗಲಿರುವ ಕ್ಲಾಪ್, ಕೇವಲ ಒಂದು ಸಿನಿಮಾ ಚಾಲನೆ ಅಲ್ಲ ಅದು ಭಕ್ತಿ, ಭಾವನೆ ಮತ್ತು ಭಾರೀ ನಿರೀಕ್ಷೆಗಳ ಹೊಸ ಅಧ್ಯಾಯದ ಶುಭಾರಂಭ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್





