ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ಬಾಂಬ್ ಬೆದರಿಕೆ ಪ್ರಕರಣಗಳು ಮರುಕಳಿಸಿದ್ದು, ಸೋಮವಾರ ಬೆಳಿಗ್ಗೆ ದೆಹಲಿಯ ಒಟ್ಟು 9 ಶಾಲೆಗಳಿಗೆ ದುಷ್ಕರ್ಮಿಗಳು ಬಾಂಬ್ ಬೆದರಿಕೆ ಇ-ಮೇಲ್ ಕಳುಹಿಸಿದ್ದಾರೆ. ಇತ್ತೀಚೆಗೆ ಹಲವಾರು ಶಾಲೆಗಳಿಗೆ ಇದೇ ರೀತಿ ಬಂದಿದ್ದ ಬಾಂಬ್ ಬೆದರಿಕೆಗಳು ಹುಸಿಯೆಂದು ದೃಢಪಟ್ಟಿದ್ದರೂ, ಮತ್ತೆ ಅದೇ ಮಾದರಿಯ ಬೆದರಿಕೆಗಳು ಮುಂದುವರಿದಿವೆ..
ಪೊಲೀಸ್ ಮೂಲಗಳ ಪ್ರಕಾರ, ಇಂದು ಬೆಳಿಗ್ಗೆ ಸುಮಾರು 8:30ರಿಂದ 9 ಗಂಟೆಯ ನಡುವೆ ದೆಹಲಿಯ ವಿವಿಧ ಭಾಗಗಳ ಶಾಲೆಗಳ ಆಡಳಿತ ಮಂಡಳಿಗಳಿಗೆ ಇ-ಮೇಲ್ ಮೂಲಕ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಸಂದೇಶಗಳು ಬಂದಿವೆ. ವಿಷಯ ತಿಳಿಯುತ್ತಿದ್ದಂತೆಯೇ ಶಾಲಾ ಆಡಳಿತ ಮಂಡಳಿಗಳು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಲಭ್ಯವಾಗುತ್ತಿದ್ದಂತೆ ದೆಹಲಿ ಪೊಲೀಸರು, ಬಾಂಬ್ ಪತ್ತೆ ದಳ, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದ ತಂಡಗಳು ತಕ್ಷಣ ಸಂಬಂಧಿಸಿದ ಎಲ್ಲಾ ಶಾಲೆಗಳಿಗೂ ದೌಡಾಯಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿಗಳನ್ನು ಸುರಕ್ಷಿತವಾಗಿ ಶಾಲಾ ಆವರಣದಿಂದ ಹೊರ ಕಳುಹಿಸಿ, ಸಂಪೂರ್ಣ ಪರಿಶೀಲನೆ ನಡೆಸಲಾಗಿದೆ.
ಬಾಂಬ್ ಬೆದರಿಕೆ ಬಂದಿರುವ ಶಾಲೆಗಳ ಪಟ್ಟಿಯಲ್ಲಿ ಜಸ್ಟ್ರಾಲ್ ಕೌರ್ ಶಾಲೆ, ಅಶೋಕ್ ವಿಹಾರದಲ್ಲಿರುವ ಮಾತಾ ಜೈ ಕೌರ್ ಶಾಲೆ, ರೋಹಿಣಿ ವಿಹಾರ್ ಶಾಲೆ, ಲೊರೆಟೋ ಕಾನ್ವೆಂಟ್ (ಶ್ರೀನಿವಾಸಪುರಿ), ಕೇಂಬ್ರಿಡ್ಜ್ ಶಾಲೆ, ರೋಹಿಣಿ ಪ್ರದೇಶದ ವೆಂಕಟೇಶ್ವರ ಶಾಲೆ, ಕೆಂಬ್ರಿಡ್ಜ್ ಸ್ಕೂಲ್, ಎನ್‌ಎಫ್‌ಸಿ ಶಾಲೆ, ಲೋಧಿ ರಸ್ತೆಯ ಏರ್ ಫೋರ್ಸ್ ಶಾಲೆ ಹಾಗೂ ಇಂಡಿಯನ್ ಸ್ಕೂಲ್ ಸೇರಿವೆ. ಈ ಎಲ್ಲ ಶಾಲೆಗಳಲ್ಲೂ ಬಾಂಬ್ ಪತ್ತೆ ದಳದಿಂದ ತಪಾಸಣೆ ನಡೆಸಲಾಗಿದೆ.
ಸತತ ಶೋಧ ಕಾರ್ಯಾಚರಣೆ ಬಳಿಕ ಯಾವುದೇ ಶಾಲೆಯಲ್ಲೂ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಕೆಲವರು ಶಾಲೆಗಳಿಗೆ ಧಾವಿಸಿ ಮಕ್ಕಳನ್ನು ಮನೆಗೆ ಕರೆದೊಯ್ದಿದ್ದಾರೆ.
ಈ ಕುರಿತು ಮಾತನಾಡಿರುವ ದೆಹಲಿ ಪೊಲೀಸರು, ಇದು ಸಂಘಟಿತ ಹುಸಿ ಬಾಂಬ್ ಬೆದರಿಕೆ ಆಗಿರುವ ಸಾಧ್ಯತೆಯನ್ನು ತಳ್ಳಿ ಹಾಕಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಇ-ಮೇಲ್‌ಗಳು ಯಾವ ಸ್ಥಳದಿಂದ ಮತ್ತು ಯಾರಿಂದ ಕಳುಹಿಸಲಾಗಿದೆ ಎಂಬುದನ್ನು ಪತ್ತೆಹಚ್ಚಲು ಸೈಬರ್ ಕ್ರೈಂ ವಿಭಾಗ ತನಿಖೆ ಆರಂಭಿಸಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.





