ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಶಿರವಾಡದಲ್ಲಿ ಕಾರವಾರ ನಗರಸಭೆಗೆ ಸೇರಿದ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ರಾತ್ರಿ ವೇಳೆ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಘಟಕದಲ್ಲಿ ಸಂಗ್ರಹವಾಗಿದ್ದ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಬೆಂಕಿ ಹತ್ತಿಕೊಂಡಿದ್ದು, ಇದರಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಟ್ಟ ಹೊಗೆ ಮತ್ತು ಆತಂಕ ಸೃಷ್ಟಿಯಾಗಿದೆ.
ರಾತ್ರಿ ಬೆಂಕಿ ಆರಂಭವಾದ ತಕ್ಷಣವೇ ಕಾರವಾರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿದರು. ಬೆಂಕಿಯ ತೀವ್ರತೆ ಹೆಚ್ಚಾಗಿರುವುದರಿಂದ ಅಂಕೋಲಾ ಹಾಗೂ ಗ್ರಾಸಿಂ ಇಂಡಸ್ಟ್ರೀಸ್‌ನ ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕರೆಯಿಸಲಾಗಿತ್ತು. ಈ ಎಲ್ಲಾ ಘಟಕಗಳ ಸಹಯೋಗದಿಂದ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಯಶಸ್ವಿಯಾಗಿದೆ ಎಂದು ನಗರಸಭೆ ಆಯುಕ್ತ ಜಗದೀಶ್ ಹುಲಗಜ್ಜಿ ಅವರು ತಿಳಿಸಿದ್ದಾರೆ.
ಬೆಂಕಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಆದರೆ ಪ್ಲಾಸ್ಟಿಕ್ ತ್ಯಾಜ್ಯದಿಂದ ಉಂಟಾಗುವ ದಟ್ಟ ಹೊಗೆಯಿಂದ ಸುತ್ತಮುತ್ತಲಿನ ಜನವಸತಿ ಪ್ರದೇಶಗಳಲ್ಲಿ ಆರೋಗ್ಯ ಸಂಬಂಧಿತ ತೊಂದರೆಗಳು ಉಂಟಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ. ಇದರಿಂದ ಮುಂಜಾಗೃತೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ನಗರಸಭೆಯ ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಪರಿಸ್ಥಿತಿಯ ನಿರಂತರ ಉಸ್ತುವಾರಿ ವಹಿಸಿದ್ದಾರೆ. ಬೆಂಕಿಯ ಕಾರಣ ತನಿಖೆ ನಡೆಯುತ್ತಿದ್ದು, ಇದು ಆಕಸ್ಮಿಕವಾಗಿ ಉಂಟಾದ ಘಟನೆಯೇ ಅಥವಾ ಬೇರೆ ಕಾರಣಗಳಿಂದ ಆಗಿದೆಯೇ ಎಂಬುದನ್ನು ಪತ್ತೆ ಮಾಡಲು ಕಾರ್ಯಾಚರಣೆ ನಡೆಯುತ್ತಿದೆ.
ಸ್ಥಳೀಯರು ಈ ಘಟನೆಯಿಂದ ಆತಂಕಗೊಂಡಿದ್ದು, ತ್ಯಾಜ್ಯ ವಿಲೇವಾರಿ ಘಟಕದ ಸುರಕ್ಷತಾ ಕ್ರಮಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ನಗರಸಭೆಯು ಭದ್ರತಾ ಕ್ರಮಗಳನ್ನು ಇನ್ನಷ್ಟು ಬಲಪಡಿಸುವುದಾಗಿ ಭರವಸೆ ನೀಡಿದೆ.





