ಕರಾವಳಿಯ ಕಾಡುಗಳಲ್ಲಿ ಭೂತಕೋಲದ ಘೋಷ ಮೊಳಗಿಸಿದ ರಿಷಬ್ ಶೆಟ್ಟಿ, ಇದೀಗ ಕುರುಕ್ಷೇತ್ರದ ರಣಭೂಮಿರೇ ಕಾಲಿಟ್ಟಿದ್ದಾರೆ ಎನ್ನಲಾಗ್ತಿದೆ. ಕಾಂತಾರ-1 ಸಕ್ಸಸ್ ನಂತ್ರ ಮೌನವಾಗಿದ್ದ ರಿಷಬ್, ಸದ್ದಿಲ್ಲದೆ ಹೊಚ್ಚ ಹೊಸ ಪ್ರಾಜೆಕ್ಟ್‌ಗೆ ತೆರೆಮರೆಯಲ್ಲಿ ಸಿದ್ಧತೆ ನಡೆಸ್ತಿದ್ದಾರೆ. ದೇವರ ನಾಡಿನ ಕಾದಂಬರಿ ಆಧಾರಿತ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳೋದ್ರ ಜೊತೆ ಬಣ್ಣ ಹಚ್ಚೋಕೂ ಸಜ್ಜಾಗಿದ್ದಾರಂತೆ. ಅದ್ರ ಎಕ್ಸ್‌ಕ್ಲೂಸಿವ್ ಖಬರ್ ನಿಮ್ಮ ಮುಂದೆ.
ಕಾಂತಾರ ಚಾಪ್ಟರ್ 1 ಗೆಲುವಿನ ಬಳಿಕ ರಿಷಬ್ ಶೆಟ್ಟಿ ಮುಂದಿನ ಹೆಜ್ಜೆ ಏನು ಅನ್ನೋ ಕುತೂಹಲ ಸಿನಿಪ್ರೇಮಿಗಳಲ್ಲಿ ಗರಿಗೆದರಿತ್ತು. ಪ್ಯಾನ್ ಇಂಡಿಯಾ ಹಿಟ್ ನಂತರ ಯಾವ ಪ್ರಾಜೆಕ್ಟ್ ಟೇಕಾಫ್ ಮಾಡ್ತಾರೆ? ಯಾವ ಕಥೆಗೆ ಒಪ್ಪಿಕೊಳ್ಳ್ತಾರೆ? ಅನ್ನೋ ಪ್ರಶ್ನೆಗಳು ಹಾರಾಡುತ್ತಿದ್ವು. ಆದರೆ ರಿಷಬ್ ಮಾತ್ರ ಮೌನವೇ ಮಂತ್ರ ಮಾಡಿಕೊಂಡು, ಅಧಿಕೃತ ಘೋಷಣೆಗಳಿಲ್ಲದೇ ಕುತೂಹಲ ಹೆಚ್ಚಿಸುತ್ತಿದ್ದರು. ಇದೀಗ ಆ ಮೌನದ ಮಧ್ಯೆ ಭಾರೀ ಸದ್ದು ಕೇಳಿಬಂದಿದೆ.

ರಿಷಬ್ ಮುಂದಿನ ಹೆಜ್ಜೆ ಇತಿಹಾಸವೇ ನಡುಗೋ ಸಿನಿಮಾ
ನಿಂತುಹೋದ ಬಿಗ್‌ಬಜೆಟ್ ಚಿತ್ರಕ್ಕೆ ಶೆಟ್ರಿಂದ ಮರುಜೀವ..?
ಪ್ಯಾನ್ ಇಂಡಿಯಾ ಗೆಲುವಿನ ಬಳಿಕ ಸಾಮಾನ್ಯ ಕಥೆಗೆ ರಿಷಬ್ ಕೈಹಾಕಲ್ಲ ಅನ್ನೋದು ಎಲ್ಲರಿಗೂ ಗೊತ್ತು. ಮೂಲಗಳ ಪ್ರಕಾರ, ಮಲಯಾಳಂನ ದಿಗ್ಗಜ ಸಾಹಿತಿ ಎಂ.ಟಿ. ವಾಸುದೇವ ನಾಯರ್ ಅವರ ಕಾಲಜಯಿ ಕಾದಂಬರಿ ರಂಡಮೂಳಂ ಸಿನಿಮಾ ರೂಪ ಪಡೆಯಲು ಸಜ್ಜಾಗಿದೆ. ಅದೂ ರಿಷಬ್ ಶೆಟ್ಟಿ ನಿರ್ದೇಶನದಲ್ಲಿ, ನಿರ್ದೇಶನ ಮಾತ್ರವಲ್ಲ, ಭೀಮನ ಪಾತ್ರದಲ್ಲಿ ಸ್ವತಃ ರಿಷಬ್ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಸುದ್ದಿ ಸಿನಿ ವಲಯದಲ್ಲಿ ಹಾಟ್ ಟಾಪಿಕ್ ಆಗಿದೆ. ಮಹಾಭಾರತದ ಕಥೆಯನ್ನು ಭೀಮನ ದೃಷ್ಟಿಕೋನದಿಂದ ಹೇಳುವ ಈ ಕಾದಂಬರಿ, ಭಾರತೀಯ ಸಾಹಿತ್ಯದಲ್ಲೇ ವಿಶಿಷ್ಟ ಸ್ಥಾನ ಪಡೆದ ಕೃತಿ. ಇಂಥ ಮಹಾಕಾದಂಬರಿಯನ್ನು ತೆರೆಗೆ ತರೋ ಸವಾಲಿಗೆ ರಿಷಬ್ ಕೈ ಹಾಕಿದ್ದಾರೆ.

ರಂಡಮೂಳಂ ಮೇಲೆ ರಿಷಬ್ ಕಣ್ಣು..ಭೀಮನಾಗಿ ಗರ್ಜನೆ?
ದೇವರನಾಡಿನ ಕಾದಂಬರಿಗೆ ಕನ್ನಡ ಟಚ್..ನಟನೆ & ಡೈರೆಕ್ಷನ್
ರಂಡಮೂಳಂ ಸಾಮಾನ್ಯ ಕಾದಂಬರಿಯಲ್ಲ. ಮಹಾಭಾರತವನ್ನು ಭೀಮನ ದೃಷ್ಟಿಕೋನದಿಂದ ಹೇಳಿದ ಮಹಾಕೃತಿ. ಶಕ್ತಿ, ಅಸೂಯೆ, ಪ್ರೀತಿ, ನೋವು, ಅವಮಾನ..ಒಬ್ಬ ಯೋಧನ ಅಂತರಂಗದ ಕಳಕಳಿ ಈ ಕಥೆಯ ತಿರುಳು. ಇಂಥ ಭಾವನಾತ್ಮಕ ಮತ್ತು ದಾರ್ಶನಿಕ ಕಥೆಯನ್ನು ಸಿನಿಮಾ ಭಾಷೆಗೆ ಅನುವಾದಿಸುವುದು ದೊಡ್ಡ ಸವಾಲು. ಆದರೆ ಸಂಸ್ಕೃತಿ ಮತ್ತು ಭಾವನೆಗಳನ್ನು ಸಿನಿಮ್ಯಾಟಿಕ್ ಆಗಿ ಹೇಳೋಕೆ ರಿಷಬ್ ಕೈಗೆ ಈ ಕಥೆ ಸಿಕ್ಕಿದೆ.
ಈ ಪ್ರಾಜೆಕ್ಟ್ ಹಿಂದೆ ದೊಡ್ಡ ಇತಿಹಾಸವಿದೆ. ಮೊದಲೇ ನಿರ್ದೇಶಕ ಶ್ರೀಕುಮಾರ್ ಮೆನನ್ ಈ ಕಾದಂಬರಿಯನ್ನು ಆಧರಿಸಿ ಸಿನಿಮಾ ಮಾಡಲು ಮುಂದಾಗಿದ್ದರು. ಆದರೆ ಪ್ರಾಜೆಕ್ಟ್ ಮಧ್ಯದಲ್ಲೇ ನಿಂತುಹೋಯ್ತು. ಒಂದೂವರೆ ವರ್ಷದ ಹಿಂದೆ ಎಂ.ಟಿ. ವಾಸುದೇವ ನಾಯರ್ ಸ್ವತಃ ರಿಷಬ್ ಜೊತೆ ಮಾತುಕತೆ ನಡೆಸಿದ್ರಂತೆ. ಅವರ ಅಗಲಿಕೆಯ ನಂತರ ಪುತ್ರಿ ಅಶ್ವಥಿ ಈ ಕನಸನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಈಗ ರಿಷಬ್ ಅವರ ನಿರ್ಮಾಣ ಸಂಸ್ಥೆ ಮತ್ತು ಎಂ.ಟಿ. ಕುಟುಂಬದ ಬ್ಯಾನರ್ ಜಂಟಿಯಾಗಿ ಈ ಚಿತ್ರಕ್ಕೆ ಜೀವ ತುಂಬೋ ಸನ್ನಾಹದಲ್ಲಿದೆಯಂತೆ. ಕೋಝಿಕ್ಕೋಡ್‌ನಲ್ಲಿ ಶೀಘ್ರದಲ್ಲೇ ಅಧಿಕೃತ ಘೋಷಣೆ ಆಗೋ ನಿರೀಕ್ಷೆ ಕೂಡ ಇದೆ.

ಇದರ ಮಧ್ಯೆ ರಿಷಬ್ ‘ಜೈ ಹನುಮಾನ್ ಹಾಗೂ ‘ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾಗಳಿಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ದೇವರು, ಇತಿಹಾಸ, ಮಹಾಕಾವ್ಯಗಳ ನಡುವೆ ರಿಷಬ್ ಸಿನಿ ಪಯಣಕ್ಕೆ ಬಿಗ್ ಇಂಪಾಕ್ಟ್ ಆಗಲಿದೆ. ಕರಾವಳಿಯಿಂದ ಕುರುಕ್ಷೇತ್ರದವರೆಗೂ..ಭೂತಕೋಲದಿಂದ ಭೀಮನ ಗರ್ಜನೆಯವರೆಗೆ..ರಿಷಬ್ ಶೆಟ್ಟಿ ಮುಂದಿನ ನಡೆ ಭಾರತೀಯ ಸಿನೆಮಾದ ಮತ್ತೊಂದು ಐತಿಹಾಸಿಕ ಅಧ್ಯಾಯವಾಗುತ್ತ? ಈ ಸುದ್ದಿ ಅಧಿಕೃತವಾದರೆ, ಸಿನಿ ಲೋಕದಲ್ಲಿ ಭಾರೀ ಅಲೆ ಎದ್ದೇಳೋದ್ರಲ್ಲಿ ಡೌಟ್ ಇಲ್ಲ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





