ಸಂಖ್ಯಾಶಾಸ್ತ್ರದ ಪ್ರಕಾರ ಪ್ರತಿಯೊಬ್ಬರ ಜನ್ಮಸಂಖ್ಯೆ ಅವರ ಜೀವನದ ಹಲವು ತಿರುವುಗಳನ್ನು ಸೂಚಿಸುತ್ತದೆ. ಜನವರಿ 31ರ ಶನಿವಾರದ ದಿನ ಜನ್ಮಸಂಖ್ಯೆ ಆಧಾರವಾಗಿ ನಿಮ್ಮ ಅದೃಷ್ಟ, ಸವಾಲುಗಳು, ಅವಕಾಶಗಳು ಹಾಗೂ ಕೈಗೊಳ್ಳಬೇಕಾದ ಪರಿಹಾರಗಳ ಕುರಿತು ಇಲ್ಲಿದೆ ವಿವರವಾದ ದಿನಭವಿಷ್ಯ.
ಜನ್ಮಸಂಖ್ಯೆ 1 (ಜನ್ಮ ದಿನಾಂಕ 1, 10, 19, 28)
ಈ ದಿನ ಹಣಕಾಸು ವಿಷಯಗಳಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಹೂಡಿಕೆ, ಹೊಸ ಸಲಕರಣೆಗಳ ಖರೀದಿ ಬಗ್ಗೆ ಯೋಚನೆ ಮಾಡಬಹುದು. ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಉತ್ತಮ ಸುದ್ದಿ ಸಿಗುವ ಸೂಚನೆ ಇದೆ. ತಪ್ಪಾಗಿ ನಿಮ್ಮ ಮೇಲೆ ಬಂದಿದ್ದ ಆರೋಪಗಳಿಂದ ಮುಕ್ತರಾಗುವ ಸಾಧ್ಯತೆ ಇದೆ.
ಜನ್ಮಸಂಖ್ಯೆ 2 (ಜನ್ಮ ದಿನಾಂಕ 2, 11, 20, 29)
ನೀವು ನಂಬಿದ್ದ ವ್ಯಕ್ತಿಯೇ ಸಂಕಷ್ಟದಲ್ಲಿರುವ ವಿಚಾರ ತಿಳಿಯಬಹುದು. ಸಂಗೀತ, ಧಾರ್ಮಿಕ ಪ್ರವಚನ, ಪೌರೋಹಿತ್ಯ ವೃತ್ತಿಯವರಿಗೆ ಹಣಕಾಸು ನಷ್ಟದ ಸಾಧ್ಯತೆ ಇದೆ. ಅನಾವಶ್ಯಕ ಜವಾಬ್ದಾರಿಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ.
ಜನ್ಮಸಂಖ್ಯೆ 3 (ಜನ್ಮ ದಿನಾಂಕ 3, 12, 21, 30)
ಕುಟುಂಬದಲ್ಲಿ ನಿಮ್ಮ ನಿರ್ಧಾರಗಳ ಕುರಿತು ಟೀಕೆ ಎದುರಾಗಬಹುದು. ಆದರೆ ಇದರಿಂದ ಮನೋನೊಂದನೆಗೊಳಗಾಗದೆ ಶಾಂತವಾಗಿ ಎದುರಿಸಬೇಕು. ಕಟ್ಟಡ ಸಾಮಗ್ರಿ, ಉಕ್ಕು, ಸಿಮೆಂಟ್ ವ್ಯವಹಾರದಲ್ಲಿರುವವರು ವ್ಯಾಪಾರ ವಿಸ್ತರಣೆಯ ಕುರಿತು ಯೋಚನೆ ಮಾಡಬಹುದು.
ಜನ್ಮಸಂಖ್ಯೆ 4 (ಜನ್ಮ ದಿನಾಂಕ 4, 13, 22, 31)
ಮಕ್ಕಳ ಶಿಕ್ಷಣ ಹಾಗೂ ಮನೆ ದೇವತಾ ಆರಾಧನೆಗೆ ಹೆಚ್ಚು ಒತ್ತು ನೀಡುವಿರಿ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಭವಿಷ್ಯದಲ್ಲಿ ದೊಡ್ಡ ಜವಾಬ್ದಾರಿ ಸಿಗುವ ಸೂಚನೆ ಇದೆ. ಮರ ಸಂಬಂಧಿತ ಉದ್ಯಮಗಳಲ್ಲಿ ತೊಡಗಿರುವವರಿಗೆ ದೀರ್ಘಾವಧಿಯ ಲಾಭದ ಅವಕಾಶಗಳು ಕಾಣಿಸಿಕೊಳ್ಳುತ್ತವೆ.
ಜನ್ಮಸಂಖ್ಯೆ 5 (ಜನ್ಮ ದಿನಾಂಕ 5, 14, 23)
ಈವರೆಗೆ ಮುಂದೂಡಿದ್ದ ಪ್ರಮುಖ ತೀರ್ಮಾನಗಳನ್ನು ಈಗ ತೆಗೆದುಕೊಳ್ಳಲೇಬೇಕಾದ ಸಂದರ್ಭ ಬರುತ್ತದೆ. ಸಹಾಯ ಕೇಳಿ ಕೆಲವರು ನಿಮ್ಮ ಬಳಿ ಬರಬಹುದು. ನಿಮ್ಮ ಅವಶ್ಯಕತೆಗಾಗಿ ಉಳಿಸಿಕೊಂಡ ಹಣವನ್ನು ಸಾಲವಾಗಿ ನೀಡುವುದನ್ನು ತಪ್ಪಿಸುವುದು ಒಳಿತು.
ಜನ್ಮಸಂಖ್ಯೆ 6 (ಜನ್ಮ ದಿನಾಂಕ 6, 15, 24)
ದೇಗುಲ ಸಂಬಂಧಿತ ದೇಣಿಗೆ ಅಥವಾ ಸಹಾಯ ಕೇಳಿ ಬರುವ ಸಾಧ್ಯತೆ ಇದೆ. ಯಥಾಶಕ್ತಿ ನೆರವು ನೀಡುವುದು ಶುಭ. ಈ ಹಿಂದೆ ನೀಡಿದ್ದ ಮಾತುಗಳನ್ನು ಈ ದಿನ ಪೂರೈಸಿದರೆ ಮನಶ್ಶಾಂತಿ ಹಾಗೂ ಶುಭಫಲ ದೊರೆಯಲಿದೆ.
ಜನ್ಮಸಂಖ್ಯೆ 7 (ಜನ್ಮ ದಿನಾಂಕ 7, 16, 25)
ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಸಲಹೆಗಳಿಗೆ ಮೌಲ್ಯ ಸಿಗಲಿದೆ. ಮೇಲಧಿಕಾರಿಗಳ ಮೆಚ್ಚುಗೆ, ಹುದ್ದೆ ಅಥವಾ ವೇತನ ಹೆಚ್ಚಳದ ಸೂಚನೆಗಳಿವೆ. ಹಿಂದಿನ ಶ್ರಮಕ್ಕೆ ಫಲ ಸಿಗದಿದ್ದ ಬೇಸರ ನಿವಾರಣೆಯಾಗುವ ಅವಕಾಶ ಬರುತ್ತದೆ.
ಜನ್ಮಸಂಖ್ಯೆ 8 (ಜನ್ಮ ದಿನಾಂಕ 8, 17, 26)
ಯಾರನ್ನಾದರೂ ಖುಷಿಪಡಿಸಲು ಸುಳ್ಳು ಹೇಳುವುದರಿಂದ ಮುಂದೆ ಸಂಕಷ್ಟ ಎದುರಾಗಬಹುದು. ಮದುವೆ ಯತ್ನದಲ್ಲಿರುವವರಿಗೆ ಸಂಬಂಧಿಗಳ ಮೂಲಕ ಉತ್ತಮ ಪ್ರಸ್ತಾವನೆ ಬರಬಹುದು. ದಿಢೀರ್ ಪ್ರಯಾಣಕ್ಕೆ ಹೊರಡುವ ಮುನ್ನ ಉದ್ದೇಶವನ್ನು ಸ್ಪಷ್ಟಪಡಿಸಿಕೊಳ್ಳಿ.
ಜನ್ಮಸಂಖ್ಯೆ 9 (ಜನ್ಮ ದಿನಾಂಕ 9, 18, 27)
ಕ್ಯಾಟರಿಂಗ್ ಅಥವಾ ಅಡುಗೆ ವೃತ್ತಿಯವರು ಹೊಸ ಪಾತ್ರೆ, ಸಲಕರಣೆಗಳಿಗೆ ದೊಡ್ಡ ಮೊತ್ತ ಮೀಸಲಿಡಬಹುದು. ಕೆಲವರಿಗೆ ಸಾಲ ಮಾಡುವ ಪರಿಸ್ಥಿತಿ ಬರಬಹುದು. ಖಾಸಗಿ ಉದ್ಯೋಗಿಗಳಿಗೆ ವಿಭಾಗ ಅಥವಾ ಪ್ರಾಜೆಕ್ಟ್ ಬದಲಾವಣೆ ಸಾಧ್ಯತೆ ಇದೆ.





