ಭಾರತದ ಅತ್ಯಂತ ಜನಪ್ರಿಯ ಹಾಗೂ ಹಿನ್ನೆಲೆ ಗಾಯಕನಾಗಿ ಗುರುತಿಸಿಕೊಂಡಿರುವ ಅರಿಜಿತ್ ಸಿಂಗ್, ಇತ್ತೀಚೆಗೆ ತಮ್ಮ ಗಾಯನ ಜೀವನಕ್ಕೆ ಹಠಾತ್ ವಿರಾಮ ಘೋಷಿಸಿ ದೇಶಾದ್ಯಂತ ಅಚ್ಚರಿ ಮೂಡಿಸಿದ್ದಾರೆ. ಈ ಘೋಷಣೆಯ ನಂತರ ಇದೀಗ ಮತ್ತೊಂದು ದೊಡ್ಡ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಅದೇನೆಂದರೆ ಅರಿಜಿತ್ ಸಿಂಗ್ ಹೊಸ ರಾಜಕೀಯ ಪಕ್ಷ ಸ್ಥಾಪಿಸಿ ರಾಜಕೀಯ ಜೀವನ ಆರಂಭಿಸಲಿದ್ದಾರೆ ಎಂಬ ವರದಿ.
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಜಿಯಾಗಂಜ್ ಮೂಲದವರಾದ ಅರಿಜಿತ್ ಸಿಂಗ್, ಬಾಲ್ಯದಿಂದಲೇ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡು ತಮ್ಮ ಪ್ರತಿಭೆಯಿಂದ ಬಾಲಿವುಡ್ ಸೇರಿದಂತೆ ದೇಶದಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಗಳಿಸಿದ್ದಾರೆ. ‘ತುಮ್ ಹೀ ಹೋ’, ‘ಚನ್ನಾ ಮೆರೆಯಾ’, ‘ಅಗರ ತುಮ್ ಸಾಥ್ ಹೋ’, ‘ಕಬಿರಾ’ ಸೇರಿದಂತೆ ನೂರಾರು ಸೂಪರ್‌ಹಿಟ್ ಹಾಡುಗಳ ಮೂಲಕ ಸಂಗೀತ ಪ್ರಿಯರ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದಾರೆ.
ಇಂತಹ ಸಮಯದಲ್ಲಿ ಅವರು ಪ್ಲೇಬ್ಯಾಕ್ ಗಾಯನದಿಂದ ನಿವೃತ್ತಿ ಘೋಷಿಸಿದ್ದು, ಅಭಿಮಾನಿಗಳನ್ನು ಭಾವುಕರನ್ನಾಗಿಸಿತ್ತು. ಇನ್‌ಸ್ಟಾಗ್ರಾಮ್‌ನಲ್ಲಿ ಸಂದೇಶ ಹಂಚಿಕೊಂಡ ಅವರು, “ಈವರೆಗೆ ನನಗೆ ಅಪಾರ ಪ್ರೀತಿ ನೀಡಿದ ಎಲ್ಲರಿಗೂ ಧನ್ಯವಾದ. ಇದು ಅದ್ಭುತ ಪ್ರಯಾಣವಾಗಿತ್ತು. ಆದರೆ ಮುಂದಿನಿಂದ ನಾನು ಪ್ಲೇಬ್ಯಾಕ್ ಹಾಡುಗಳನ್ನು ಸ್ವೀಕರಿಸುವುದಿಲ್ಲ,” ಎಂದು ಬರೆದುಕೊಂಡಿದ್ದರು. ಈ ಪೋಸ್ಟ್ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಅಭಿಮಾನಿಗಳು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು.
ಇದೀಗ ಗಾಯನದಿಂದ ವಿರಾಮದ ಹಿಂದಿನ ನಿಜವಾದ ಕಾರಣ ರಾಜಕೀಯ ಪ್ರವೇಶವೇ? ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಕೆಲವು ಮಾಧ್ಯಮ ವರದಿಗಳ ಪ್ರಕಾರ, ಅರಿಜಿತ್ ಸಿಂಗ್ ಹೊಸ ರಾಜಕೀಯ ಪಕ್ಷ ಸ್ಥಾಪಿಸುವ ಕುರಿತು ಗಂಭೀರವಾಗಿ ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೇ, ರಾಜಕೀಯ ಜೀವನ ಆರಂಭಿಸುವ ಮುನ್ನ ಅವರು ಸ್ಥಳೀಯ ಮಟ್ಟದಲ್ಲಿ ಚುನಾವಣೆ ಎದುರಿಸುವ ಸಾಧ್ಯತೆ ಇದೆ ಎಂಬ ಮಾಹಿತಿಯೂ ಲಭ್ಯವಾಗಿದೆ.
ಅರಿಜಿತ್ ಸಿಂಗ್ ನೇರವಾಗಿ 2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಕಡಿಮೆ. ಆದರೆ ರಾಜಕೀಯ ಕ್ಷೇತ್ರವನ್ನು ಅರ್ಥಮಾಡಿಕೊಳ್ಳಲು ಅವರು ಮೊದಲು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿ ಅನುಭವ ಪಡೆಯಬಹುದು ಎಂದು ಹೇಳಲಾಗುತ್ತಿದೆ. ನಂತರ ತಮ್ಮದೇ ಪಕ್ಷವನ್ನು ಕಟ್ಟುವ ಯೋಜನೆ ಇದೆ ಎನ್ನಲಾಗಿದೆ.
ಆದರೆ ಇಷ್ಟೆಲ್ಲ ವರದಿಗಳ ನಡುವೆಯೂ ಅರಿಜಿತ್ ಸಿಂಗ್ ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ರಾಜಕೀಯ ಪ್ರವೇಶ ಅಥವಾ ಪಕ್ಷ ಸ್ಥಾಪನೆ ಬಗ್ಗೆ ಅವರು ನೇರವಾಗಿ ಸ್ಪಷ್ಟನೆ ನೀಡದೇ ಇರುವುದರಿಂದ, ಈ ಸುದ್ದಿ ವದಂತಿಯೇ ಅಥವಾ ನಿಜವೇ? ಎಂಬ ಪ್ರಶ್ನೆ ಉಳಿದಿದೆ.
ಸಂಗೀತ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ ಅರಿಜಿತ್ ಸಿಂಗ್, ರಾಜಕೀಯ ಕ್ಷೇತ್ರದಲ್ಲೂ ಅದೇ ರೀತಿಯ ಯಶಸ್ಸು ಸಾಧಿಸುತ್ತಾರಾ? ಅಥವಾ ಇದು ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಗಾಳಿ ಸುದ್ದಿಯೇ? ಮುಂದಿನ ದಿನಗಳಲ್ಲಿ ಅವರಿಂದ ಅಧಿಕೃತ ಘೋಷಣೆ ಬಂದರೆ ಮಾತ್ರ ಈ ಎಲ್ಲ ಅನುಮಾನಗಳಿಗೆ ಉತ್ತರ ಸಿಗಲಿದೆ.





